Site icon Vistara News

Team India ವಿಶ್ವ ದಾಖಲೆ, ಪಾಕಿಸ್ತಾನದ ರೆಕಾರ್ಡ್‌ ಮುರಿದ ಭಾರತ ತಂಡ

IND vs WI ODI

ಪೋರ್ಟ್‌ ಆಫ್‌ ಸ್ಪೇನ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ೨ ವಿಕೆಟ್ ರೋಚಕ ಜಯ ದಾಖಲಿಸಿದ Team India ಕ್ರಿಕೆಟ್‌ ಕ್ರೇತ್ರದಲ್ಲಿ ನೂತನ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದೆ. ಇದೇ ವೇಳೆ ನೆರೆಯ ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ರೆಕಾರ್ಡ್‌ ಅಳಿಸಿ ಹೋಯಿತು. ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಿಂಡೀಸ್‌ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಂಡಿದೆ, ಇದರೊಂದಿಗೆ ತಂಡವೊಂದರ ವಿರುದ್ಧ ಸತತವಾಗಿ ೧೨ ಏಕದಿನ ಪಂದ್ಯಗಳ ಸರಣಿಯನ್ನು ಗೆದ್ದಿರುವ ತಂಡವೆಂಬ ಖ್ಯಾತಿ ಗಳಿಸಿತು.

ಅಕ್ಷರ್ ಪಟೇಲ್‌ ಅವರ ೩೫ ಎಸೆತಗಳಲ್ಲಿ ಬಾರಿಸಿದ ಅಜೇಯ ೬೪ ರನ್ ನೆರವಿನಿಂದ ಭಾರತ ತಂಡ, ವಿಂಡೀಸ್‌ ನೀಡಿದ್ದ ೩೧೨ ರನ್‌ಗಳ ಗುರಿಯನ್ನು ಮೀರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲೂ ಭಾರತ ತಂಡ ರೋಚಕ ೩ ರನ್‌ಗಳಿಂದ ಜಯ ಸಾಧಿಸಿತ್ತು. ಹೀಗಾಗಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ಜಯದೊಂದಿಗೆ ವಿಶ್ವದಾಖಲೆಯೊಂದು ಭಾರತ ತಂಡದ ಪರವಾಯಿತು.

೨೦೦೭ರಿಂದ ವಿಜಯದ ಅಭಿಯಾನ ಶುರು

ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ೧೫ ವರ್ಷಗಳಿಂದ ಸೋತಿಲ್ಲ. ಅಂದರೆ, ೨೦೦೬ರಲ್ಲಿ ಕೊನೇ ಬಾರಿ ಸರಣಿ ಕಳೆದುಕೊಂಡಿತ್ತು. ಹೀಗೆ ೨೦೦೭ರಿಂದ ಆರಂಭಗೊಂಡಿದ್ದ ಸರಣಿ ವಿಜಯ ಅಭಿಯಾನ ೨೦೨೨ರ ಜುಲೈ ೨೫ರವರೆಗೆ ಮುಂದುವರಿದಿದೆ. ಇದು ಕ್ರಿಕೆಟ್‌ ದೇಶವೊಂದು ಮಾಡಿರುವ ಅಪೂರ್ವ ಸಾಧನೆಯಾಗಿದೆ.

ಪಾಕಿಸ್ತಾನ ತಂಡವೂ ದಾಖಲೆಯ ವಿಚಾರದಲ್ಲಿ ಹಿಂದಕ್ಕೆ ಬಿದ್ದಿಲ್ಲ. ಅದು ದುರ್ಬಲ ಜಿಂಬಾಬ್ವೆ ವಿರುದ್ಧದ ಸತತ ೧೧ ಏಕದಿನ ಸರಣಿಯಲ್ಲಿ ಗೆಲುವು ಕಂಡಿದೆ. ಭಾನುವಾರ ಭಾರತ ತಂಡ ದಾಖಲೆ ಮಾಡುವ ತನಕ ಈ ಗರಿಮೆಯನ್ನು ಭಾರತ ಹಾಗೂ ಪಾಕಿಸ್ತಾನ ತಂಡ ಜಂಟಿಯಾಗಿ ಹಂಚಿಕೊಂಡಿತ್ತು. ಇದೀಗ Team India ಒಂದು ಹೆಜ್ಜೆ ಮುಂದೆ ಹೋಗಿದೆ. ಜಿಂಬಾಬ್ವೆ ತಂಡ ಸದ್ಯ ಪ್ರಬಲವಾಗಿಲ್ಲದ ಕಾರಣ ಪಾಕಿಸ್ತಾನ ತಂಡ ಇನ್ನೊಂದು ಸರಣಿಯಲ್ಲಿ ಪಾಲ್ಗೊಂಡರೆ ಮತ್ತೊಂದು ಬಾರಿ ದಾಖಲೆ ಎರಡೂ ಕ್ರಿಕೆಟ್‌ ತಂಡಗಳ ಪಾಲಿಗೆ ಸೇರಲಿದೆ.

ದೊಡ್ಡ ಗುರಿ ಬೆನ್ನಟ್ಟಿದ್ದ ಭಾರತ

ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ ಗೆಲುವಿಗೆ ಭರ್ಜರಿ ಸಾಹಸವನ್ನೇ ಮಾಡಿತ್ತು. ವಿಂಡೀಸ್ ತಂಡದ ಆರಂಭಿಕ ಬ್ಯಾಟರ್‌ ಶಾಯ್‌ ಹೋಪ್‌ (೧೧೫ ರನ್‌) ಅವರ ಸಮಯೋಚಿತ ಶತಕ ಹಾಗೂ ನಾಯಕ ನಿಕೋಲಸ್‌ ಪೂರನ್‌ (೭೪ ರನ್‌) ಅವರ ಅರ್ಧ ಶತಕದ ಆಟದಿಂದ ಭಾರತದ ಗೆಲುವಿಗೆ ೩೧೨ ರನ್‌ಗಳ ಗೆಲುವಿನ ಗುರಿ ಎದುರಾಗಿತ್ತು. ಆದರೆ, ಸಂಘಟಿತ ಹೋರಾಟ ನಡೆಸಿದ ಭಾರತ ತಂಡ ಬ್ಯಾಟರ್‌ಗಳು ವಿಂಡೀಸ್‌ ಪಾಲಾಗುತ್ತಿದ್ದ ವಿಜಯವನ್ನು ಕಸಿದುಕೊಂಡರು. ಶುಬ್ಮನ್‌ ಗಿಲ್‌ (೪೩), ಶ್ರೇಯಸ್‌ ಅಯ್ಯರ್‌ (೬೩), ಸಂಜು ಸ್ಯಾಮ್ಸನ್‌ (೫೪), ದೀಪಕ್ ಹೂಡಾ (೩೩) ತಂಡವನ್ನು ಮಧ್ಯಮ ಕ್ರಮಾಂಕದಲ್ಲಿ ಕಾಪಾಡಿದರು. ಕೊನೆಯಲ್ಲಿ ಸಿಡಿದೆದ್ದ ಆಲ್‌ರೌಂಡರ್‌ ಅಕ್ಷರ್ ಪಟೇಲ್‌ ೬೪ ರನ್‌ ಬಾರಿಸಿ ಭಾರತ ಜಯಕ್ಕೆ ನೆರವಾದರು.

ಇದನ್ನೂ ಓದಿ | 100ರಲ್ಲಿ 100, ಏನಿದು ವಿಂಡೀಸ್‌ ಬ್ಯಾಟರ್‌ ಶಾಯ್‌ ಹೋಪ್‌ ಸಾಧನೆ?

Exit mobile version