ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ (ind vs eng) ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು 246 ರನ್ಗಳಿಗೆ ನಿಯಂತ್ರಿಸಿದ ಭಾರತ, ಬ್ಯಾಟಿಂಗ್ನಲ್ಲಿ 1 ವಿಕೆಟ್ ನಷ್ಟ ಮಾಡಿಕೊಂಡು 119 ರನ್ ಬಾರಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 76 ರನ್ ಗಳಿಸಿ ಮಿಂಚಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರರಾದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್ 55 ರನ್ಗಳ ಭರ್ಜರಿ ಆರಂಭ ತಂದುಕೊಟ್ಟರು. ಈ ಮೂಲಕ ತಮ್ಮ ನಾಯಕನ ಕರೆಯನ್ನು ಸಮರ್ಥಿಸಿಕೊಂಡರು. ನಂತರ ಭಾರತದ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜಂಟಿಯಾಗಿ ಮೂರು ವಿಕೆಟ್ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್ ತಂಡದ ಬಜ್ಬಾಲ್ ತಂತ್ರವನ್ನು ಅಡಗಿಸಿದರು.
ಜೋ ರೂಟ್ ಮತ್ತು ಜಾನಿ ಬೇರ್ಸ್ಟೋವ್ ನಾಲ್ಕನೇ ವಿಕೆಟ್ಗೆ 61 ರನ್ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಬೇರ್ಸ್ಟೋವ್ ಅವರನ್ನು ಅಕ್ಷರ್ ಪಟೇಲ್ 37 ರನ್ಗಳಿಗೆ ಔಟ್ ಮಾಡಿದರೆ, ಜೋ ರೂಟ್ 29 ರನ್ ಮಾಡಿ ಜಸ್ಪ್ರೀತ್ ಬುಮ್ರಾಗೆ ಒಂದು ವಿಕೆಟ್ ಒಪ್ಪಿಸಿದರು.
ಆರಂಭಿಕ ಸ್ಪೆಲ್ನ್ಲಲಿ ವಿಕೆಟ್ ಪಡೆಯದ ಬುಮ್ರಾ, ರೆಹಾನ್ ಅಹ್ಮದ್ ಅವರನ್ನು ಮೊದಲ ವಿಕೆಟ್ ರೂಪದಲ್ಲಿ ಪಡೆದರು. ಹೀಗಾಗಿ ಇಂಗ್ಲೆಂಡ್ನ ಹೋರಾಟ 155 ರನ್ಗಳಿಗೆ 7ವಿಕೆಟ್ ಕಳೆದುಕೊಳ್ಳುವಷ್ಟು ಮಟ್ಟಿಗೆ ಕಳೆಗುಂದಿತು. ಪ್ರವಾಸಿ ತಂಡದ ನಾಯಕ ಬೆನ್ ಸ್ಟೋಕ್ಸ್ ಕೇವಲ 88 ಎಸೆತಗಳಲ್ಲಿ 70 ರನ್ ಗಳಿಸುವ ಮೂಲಕ ಸೆಡ್ಡು ಹೊಡೆದರು. ಆದರೆ, ಬುಮ್ರಾ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ 64.3 ಒವರ್ಗಳಿಗೆ ಇಂಗ್ಲೆಂಡ್ 246 ರನ್ ಬಾರಿಸಿ ಆಲೌಟ್ ಆಯಿತು. ಅಶ್ವಿನ್ ಮತ್ತು ಜಡೇಜಾ ವಿಕೆಟ್ ಪಡೆದರೆ, ಅಕ್ಷರ್ ಸದ್ದಿಲ್ಲದೆ 33 ರನ್ ನೀಡಿ 2 ವಿಕೆಟ್ ಪಡೆದರು.
ಪ್ರಾಬಲ್ಯ ವಿಸ್ತರಿಸಿದ ಜೈಸ್ವಾಲ್
ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಜೇಯ 76 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಸಾಧಿಸಲು ನೆರವಾದರು. ಹೀಗಾಗಿ ಭಾಋತ 119 ರನ್ ಬಾರಿಸಿ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಪಾಲುದಾರ ಮತ್ತು ನಾಯಕ ರೋಹಿತ್ ಶರ್ಮಾ (24) ಜೈಸ್ವಾಲ್ ಅವರೊಂದಿಗೆ 80 ರನ್ಗಳ ಜತೆಯಾಟವಾಡಿದರು.
ಇಂಗ್ಲೆಂಡ್ದ ಮೊದಲ ಇನ್ನಿಂಗ್ಸ್ನ ಮೊತ್ತವನ್ನು ದಾಟಲು ಭಾರತಕ್ಕೆ 127 ರನ್ಗಳ ಅಗತ್ಯವಿದೆ. ಜೈಸ್ವಾಲ್ 3ನೇ ದಿನದಂದು ಶುಭ್ಮನ್ ಗಿಲ್ (14*) ಅವರೊಂದಿಗೆ ಭಾರತದ ಬ್ಯಾಟಿಂಗ್ ಆರಂಭಿಸಲಿದ್ದಾರೆ.