Site icon Vistara News

India vs West Indies: ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ದಾಖಲೆ ಜಯ, ಪಾಕ್‌ ದಾಖಲೆಯೂ ಭಗ್ನ

india vs wi

ಟ್ರಿನಿಡಾಡ್: ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ನಡೆಯುತ್ತಿರುವ (India vs West Indies) ಸರಣಿಯ ನಿರ್ಣಾಯಕ ಮೂರನೇ ಮತ್ತು ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯವನ್ನು (ODI Cricket series) ಭಾರತ ಜಯಿಸಿದೆ. ಇದು ಕ್ರಿಕೆಟ್‌ ಇತಿಹಾಸದಲ್ಲಿ ಎರಡು ದಾಖಲೆಗಳನ್ನು ಬರೆದಿದೆ.

ಟ್ರಿನಿಡಾಡ್‌ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 200 ರನ್‌ಗಳ ಅಂತರದ ಜಯ ದಾಖಲಿಸಿತು. ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತು. ಇದು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಸತತ 13ನೇ ಏಕದಿನ ಕ್ರಿಕೆಟ್‌ ಸರಣಿ ಜಯವಾಗಿದ್ದು, ವಿಶ್ವ ದಾಖಲೆ ಆಗಿದೆ. 2007ರಿಂದೀಚೆಗೆ ವಿಂಡೀಸ್ ವಿರುದ್ಧ ಯಾವುದೇ ODI ಸರಣಿಯನ್ನು ಭಾರತ ಸೋತಿಲ್ಲ. ಜಿಂಬಾಬ್ವೆ ವಿರುದ್ಧ 11 ಬ್ಯಾಕ್-ಟು-ಬ್ಯಾಕ್ ODI ಸರಣಿಗಳನ್ನು ಗೆದ್ದಿರುವ ಪಾಕಿಸ್ತಾನ ಏರಡನೇ ಸ್ಥಾನಕ್ಕೆ ಹೋಗಿದೆ. ಮಂಗಳವಾರದಂದು ಭಾರತ ಗಳಿಸಿದ 200 ರನ್‌ಗಳ ಅಂತರದ ಗೆಲುವು ಕೂಡ ವೆಸ್ಟ್ ಇಂಡೀಸ್ ವಿರುದ್ಧ ODIಗಳಲ್ಲಿ (ರನ್‌ಗಳ ವಿಷಯದಲ್ಲಿ) ಭಾರತದ ಎರಡನೇ ಅತಿ ದೊಡ್ಡ ಗೆಲುವಾಗಿದೆ.

ಇಶಾನ್ ಕಿಶನ್, ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್ ಮತ್ತು ನಂತರ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರತ 5 ವಿಕೆಟ್‌ ನಷ್ಟಕ್ಕೆ 351 ರನ್‌ ಪೇರಿಸಿ ಅಸಾಧ್ಯ ಸವಾಲನ್ನು ಎದುರಾಳಿಗಳ ಮುಂದಿಟ್ಟಿತು. ಇಶಾನ್ ಕಿಶನ್ ಸ್ಫೋಟಕ ಆಟವಾಡಿ 64 ಎಸೆತಗಳಲ್ಲಿ 77 ರನ್ ಗಳಿಸಿದರು. 20ನೇ ಓವರ್‌ನಲ್ಲಿ ಯಾನಿಕ್ ಕರಿಯಾಗೆ ವಿಕೆಟ್‌ ನೀಡಿದರು. ಶುಬ್ಮನ್ ಗಿಲ್ ಅವರೊಂದಿಗೆ ಆರಂಭಿಕ ಪಾಲುದಾರಿಕೆಯಲ್ಲಿ ಅವರು 143 ರನ್ ಗಳಿಸಿದ್ದರು. ಇದು ಕೂಡ ವೆಸ್ಟ್ ಇಂಡೀಸ್‌ ಎದುರು ಏಕದಿನ ಪಂದ್ಯದಲ್ಲಿ ಭಾರತದ ಅತ್ಯಧಿಕ ಆರಂಭಿಕ ಪಾಲುದಾರಿಕೆಯಾಗಿದೆ. ಈ ಆಟದಲ್ಲಿ ಕಿಶನ್ ತಮ್ಮ ಸತತ ಮೂರನೇ ODI ಅರ್ಧಶತಕವನ್ನು ಗಳಿಸಿದರು. ಈ ಮೂಲಕ ಮೂರು ಪಂದ್ಯಗಳ ODI ಸರಣಿಯ ಪ್ರತಿ ಪಂದ್ಯದಲ್ಲೂ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡರು. ಈ ಹಿಂದೆ ಶ್ರೇಯಸ್ ಅಯ್ಯರ್ 2020ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಆಡಿದ ಮೂರೂ ಪಂದ್ಯದಲ್ಲೂ ಅರ್ಧ ಶತಕಗಳನ್ನು ಗಳಿಸಿದ್ದರು.

ಕೃಷ್ಣಮಾಚಾರಿ ಶ್ರೀಕಾಂತ್ ಈ ಸಾಧನೆ ಮಾಡಿದ ಮೊದಲಿಗ. ಅವರು 1982ರಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್. ದಿಲೀಪ್ ವೆಂಗ್‌ಸರ್ಕರ್ ನಂತರ 1985ರಲ್ಲಿ ಶ್ರೀಲಂಕಾ ವಿರುದ್ಧ, ಮೊಹಮ್ಮದ್ ಅಜರುದ್ದೀನ್ 1993ರಲ್ಲಿ ಮತ್ತೆ ಶ್ರೀಲಂಕಾ ವಿರುದ್ಧ, ಬಹುಕಾಲದ ಬಳಿಕ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂಎಸ್ ಧೋನಿ ಈ ದಾಖಲೆಗಳನ್ನು ಮಾಡಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ಭಾರತದ ಗರಿಷ್ಠ ODI ಸ್ಕೋರ್

ಈ ಪಂದ್ಯದ ಸ್ಕೋರ್‌, ವೆಸ್ಟ್ ಇಂಡೀಸ್‌ನಲ್ಲಿ ಭಾರತದ ಅತ್ಯುನ್ನತ ODI ಸ್ಕೋರ್ ಆಗಿದೆ. 2009ರ ಜೂನ್ 26ರಂದು ಈ ಹಿಂದಿನ ಅತ್ಯುತ್ತಮ ಸ್ಕೋರ್‌ 339/6 ದಾಖಲಿಸಲಾಗಿತ್ತು. ಆ ಪಂದ್ಯವನ್ನು ಭಾರತ 20 ರನ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ 102 ಎಸೆತಗಳಲ್ಲಿ 131 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಯಾರೂ ಶತಕ ದಾಖಲಿಸಿಲ್ಲ. ಯಾವುದೇ ಆಟಗಾರ ಶತಕ ದಾಖಲಿಸದೆ ಅತ್ಯಧಿಕ ರನ್‌ ದಾಖಲಿಸಿದ ಪಂದ್ಯವೂ ಇದಾಗಿದೆ.

ಬದಲಾಗಿ, ಭಾರತದ ಅಗ್ರ ಐವರಲ್ಲಿ ನಾಲ್ಕು ಮಂದಿ ಅರ್ಧಶತಕಗಳನ್ನು ಗಳಿಸಿದರು. ಕಿಶನ್ 64 ಎಸೆತಗಳಲ್ಲಿ 77 ರನ್, ಶುಭಮನ್ ಗಿಲ್ 92 ಎಸೆತಗಳಲ್ಲಿ 85 ರನ್, ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 51 ರನ್, ನಾಯಕ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಬಿರುಸಿನ 70 ರನ್ ಗಳಿಸಿದರು. ಏತನ್ಮಧ್ಯೆ, ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 35 ರನ್ ಗಳಿಸಿ ರೊಮಾರಿಯೊ ಶೆಫರ್ಡ್‌ಗೆ ವಿಕೆಟ್‌ ನೀಡಿದರು.‌

ಇದನ್ನೂ ಓದಿ: IND vs WI: ಭಾರತ-ವೆಸ್ಟ್​ ಇಂಡೀಸ್​ ನಡುವಿನ ಏಕದಿನ ಸರಣಿಯ ಇತಿಹಾಸವೇ ರೋಚಕ

Exit mobile version