ಮುಂಬಯಿ: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಮುಗಿದ ಬಳಿಕ ಭಾರತ ತಂಡ (Team India) ವೆಸ್ಟ್ ಇಂಡೀಸ್ಗೆ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ನಿಗದಿಯಾಗಿರುವುದಕ್ಕಿಂತ ಹೆಚ್ಚುವರಿ ಎರಡು ಪಂದ್ಯಗಳಲ್ಲಿ ಭಾರತ ತಂಡ ಆಡಲಿದೆ ಎಂಬುದಾಗಿ ವರದಿಯಾಗಿದೆ. ಬಿಸಿಸಿಐ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಟಿ20 ಸರಣಿಯಲ್ಲಿ ನಿಗದಿಯಾಗಿದ್ದ ಮೂರು ಪಂದ್ಯಕ್ಕೆ ಬದಲಾಗಿ ಒಟ್ಟು ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಡಲಿದೆ ಎಂದು ಹೇಳಲಾಗುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸ ಜುಲೈನ್ನಲ್ಲಿ ಆರಂಭವಾಗಲಿದ್ದು ಆಗಸ್ಟ್ 13ಕ್ಕೆ ಕೊನೆಯಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಜೂನ್ನಲ್ಲಿ ಇಂಗ್ಲೆಂಡ್ನ ಕೆನಿಂಗ್ಟನ್ ಓವಲ್ನಲ್ಲಿ ನಡೆಯಲಿದೆ. ಅದು ಮುಗಿದ ಬಳಿಕ ತಂಡ ಭಾರತಕ್ಕ ಬರಲಿದೆ. ಮುಂದಿನ ಸರಣಿಯ ವೆಸ್ಟ್ ಇಂಡೀಸ್ ಪ್ರವಾಸ. ಈ ಎರಡು ಯೋಜಿತ ಪ್ರವಾಸಗಳ ಮಧ್ಯೆ ಪ್ರವಾಸಿ ಅಫಘಾನಿಸ್ತಾನ ವಿರುದ್ಧ ಮೂರು ಏಕ ದಿನ ಪಂದ್ಯಗಳ ಸರಣಿಯನ್ನು ಬಿಸಿಸಿಐ ಆಯೋಜಿಸಿದೆ. ಇದು ಫ್ಯೂಚರ್ ಟೂರ್ ಪ್ರೋಗ್ರಾಮ್ನ ಭಾಗವಾಗಿಲ್ಲವಾದರೂ ಮುಂದಿನ ಏಕ ದಿನ ವಿಶ್ವ ಕಪ್ ಹಿನ್ನೆಲೆಯಲ್ಲಿ ಸರಣಿಯನ್ನು ಆಯೋಜಿಸಿದೆ ಬಿಸಿಸಿಐ. ಇದು ಮುಗಿದ ಬಳಿ ಭಾರತ ತಂಡ ವೆಸ್ಟ್ ಇಂಡೀಸ್ಗೆ ಪ್ರವಾಸ ಬೆಳೆಸಲಿದೆ.
ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳು, ಮೂರು ಟಿ20 ಪಂದ್ಯಗಳು ಹಾಗೂ ಅಷ್ಟೇ ಸಂಖ್ಯೆಯ ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಇದೀಗ ಎರಡು ಹೆಚ್ಚುವರಿ ಟಿ20 ಪಂದ್ಯಗಳು ಆಯೋಜನೆಗೊಳ್ಳಲಿವೆ. ಜುಲೈ 12ರಂದು ಟೆಸ್ಟ್ ಸರಣಿ ಆರಂಭವಾಗಲಿದ್ದು ಬಳಿಕ ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ. ಹೆಚ್ಚುವರಿ ಎರಡು ಪಂದ್ಯಗಳನ್ನು ಅಮೆರಿಕದಲ್ಲಿ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವೆಸ್ಟ್ ಇಂಡೀಸ್ ಸರಣಿ ಮುಕ್ತಾಯಗೊಂಡ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ಗೆ ಪ್ರವಾಸ ಬೆಳೆಸಲಿದೆ. ಅಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಕ್ರಿಕೆಟ್ ಐರ್ಲೆಂಡ್ ಈ ಬಗ್ಗೆ ಮಾಹಿತಿ ನೀಡಿದ್ದು ಆಗಸ್ಟ್ 18ರಿಂದ 23ರ ತನಕ ಪಂದ್ಯ ನಡೆಯಲಿದೆ ಎಂದು ಹೇಳಿದೆ.
ಭಾರತ ಕ್ರಿಕೆಟ್ ತಂಡದ ಆಟಗಾರರು ಈಗ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದಾರೆ. ಮೇ ಅಂತ್ಯಕ್ಕೆ ಐಪಿಎಲ್ ಮುಕ್ತಾಯಗೊಳ್ಳಲಿದೆ. ಬಳಿಕ ಅವರು ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಅಣಿಯಾಗಲಿದ್ದಾರೆ. ಇಂಗ್ಲೆಂಡ್ಗೆ ಪ್ರವಾಸ ಮಾಡಿ ಅಲ್ಲಿ ಅಭ್ಯಾಸ ನಡೆಸಲಿದ್ದಾರೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡಲಿದೆ. ಕಳೆದ ಆವೃತ್ತಿಯಲ್ಲೂ ಭಾರತ ತಂಡ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೇರಿತ್ತು. ಆದರೆ, ನ್ಯೂಜಿಲ್ಯಾಂಡ್ ವಿರುದ್ಧ ಸೋತು ನಿರಾಸೆ ಎದುರಿಸಿತ್ತು. ಈ ಬಾರಿ ಟ್ರೋಫಿ ಗೆಲ್ಲುವ ಹಠದೊಂದಿಗೆ ಇಂಗ್ಲೆಂಡ್ಗೆ ತೆರಳಲಿದೆ.