ಹ್ಯಾಂಗ್ಝೌ: ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಾಬಲ್ಯ ಮುಂದುವರಿದಿದೆ. ಬಾಂಗ್ಲಾದೇಶ ಮಹಿಳಾ ತಂಡವನ್ನು ಎಂಟು ವಿಕೆಟ್‌ಗಳಿಂದ ಸುಲಭವಾಗಿ ಮಣಿಸುವ ಮೂಲಕ ಸ್ಮೃತಿ ಮಂಧಾನಾ (Smriti Mandhana) ಬಳಗವು ಫೈನಲ್‌ಗೆ ಲಗ್ಗೆ ಇಟ್ಟಿದೆ.
ಚೀನಾದ ಹ್ಯಾಂಗ್ಝೌನಲ್ಲಿರುವ ಝಡ್‌ಜೆಯುಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡವು 17.5 ಓವರ್‌ಗಳಲ್ಲಿ ಕೇವಲ 51 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭದ ಗುರಿ ಬೆನ್ನತ್ತಿದ ಸ್ಮೃತಿ ಮಂಧಾನಾ ಬಳಗವು ಕೇವಲ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.
Asian Games 2022. India Women Won by 8 Wicket(s) https://t.co/G942Qn13JI #INDvBAN #IndiaAtAG22
— BCCI Women (@BCCIWomen) September 24, 2023
ಪೂಜಾ ವಸ್ತ್ರಾಕರ್ ಮಾರಕ ಬೌಲಿಂಗ್
ಬಾಂಗ್ಲಾದೇಶ ತಂಡವು ಪೂಜಾ ವಸ್ತ್ರಾಕರ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 51 ರನ್ ಗಳಿಸಿತು. ಕೇವಲ 18 ರನ್ ಆಗುವಷ್ಟರಲ್ಲಿಯೇ ಪೂಜಾ ವಸ್ತ್ರಾಕರ್ ಪ್ರಮುಖ ಮೂರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದು ಬಾಂಗ್ಲಾ ತಂಡಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಬಾಂಗ್ಲಾ 51 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 17 ರನ್ ನೀಡಿದ ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: Asian Games 2023: 19ನೇ ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ; ನನಸಾಗಲಿ ಭಾರತದ ‘ಪದಕ ಶತಕ’ದ ಕನಸು…
51 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು. ಸ್ಮೃತಿ ಮಂಧಾನಾ 7 ರನ್ ಗಳಿಸಿದರೆ, ಶಫಾಲಿ ವರ್ಮಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಜೆಮಿಮಾ ರೊಡ್ರಿಗಸ್ ಅವರು 20 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸುಲಭದ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಫೈನಲ್ ತಲುಪಿದ ಮೊದಲ ತಂಡ ಎನಿಸಿತು. ಭಾನುವಾರ (ಸೆಪ್ಟೆಂಬರ್ 24) ಶ್ರೀಲಂಕಾ ಹಾಗೂ ಪಾಕಿಸ್ತಾನದ ಮಧ್ಯೆ ಸೆಮಿಫೈನಲ್ ಕಾಳಗ ನಡೆಯಲಿದ್ದು, ಗೆದ್ದ ತಂಡ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಸೋಮವಾರ (ಸೆಪ್ಟೆಂಬರ್ 25) ಫೈನಲ್ ಸೆಣಸಾಟ ನಡೆಯಲಿದೆ.