ನವದೆಹಲಿ: ಏಷ್ಯನ್ ಗೇಮ್ಸ್(Asian Games) ಇತಿಹಾಸದಲ್ಲಿ ಇದೇ ಮೊದಲು 100 ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಇವರ ಸಾಧನೆಯನ್ನು ಕೊಂಡಾಡಿದ್ದಾರೆ.
ಭಾರತೀಯರು ರೋಮಾಂಚನಗೊಂಡಿದ್ದಾರೆ
ಭಾರತ ಐತಿಹಾಸಿಕ ಪದಕದ ಶತಕ ಬಾರಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ನಾವು 100 ಪದಕಗಳ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ಭಾರತದ ಜನರು ರೋಮಾಂಚನಗೊಂಡಿದ್ದಾರೆ. ಭಾರತದ ಈ ಐತಿಹಾಸಿಕ ಸಾಧನೆಗೆ ಕಾರಣವಾದ ನಮ್ಮ ಎಲ್ಲ ಕ್ರೀಡಾಪಟುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರತಿ ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ನಿರ್ಮಿಸಿದೆ. ಮತ್ತು ನಮ್ಮ ಹೃದಯ ಗೆದ್ದಿದೆ. ಅಕ್ಟೋಬರ್ 10 ರಂದು ನಮ್ಮ ಎಲ್ಲ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಟ್ವೀಟರ್ನಲ್ಲಿ ಬರೆದಿದ್ದಾರೆ.
A momentous achievement for India at the Asian Games!
— Narendra Modi (@narendramodi) October 7, 2023
The people of India are thrilled that we have reached a remarkable milestone of 100 medals.
I extend my heartfelt congratulations to our phenomenal athletes whose efforts have led to this historic milestone for India.… pic.twitter.com/CucQ41gYnA
ಪದಕ ಸ್ಪರ್ಧೆಯ 13ನೇ ದಿನವಾದ ಶುಕ್ರವಾರ ಭಾರತ 1 ಚಿನ್ನ, 2 ಬೆಳ್ಳಿ, 6 ಕಂಚಿನ ಪದಕ ಒಲಿಸಿಕೊಂಡು ಒಟ್ಟು 95 ಪದಕಕ್ಕೆಎ ಬಂದು ನಿಂತಿತ್ತು. ಶನಿವಾರ ಬೆಳಗ್ಗೆಯೇ 5 ಪದಕ ಗೆದ್ದು 100 ಪದಕವನ್ನು ಪೂರ್ತಿಗೊಳಿಸಿತು. ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಫೈನಲ್ನಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆಲ್ಲುವ ಜತೆಗೆ ಭಾರತಕ್ಕೆ ಪದಕದ ಶತಕವನ್ನು ಪೂರ್ತಿಗೊಳಿಸಿದರು.
ಈ ಹಿಂದೆ 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 100 ಪದಕ ಗೆದ್ದು ಐತೊಹಾಸಿಕ ಸಾಧನೆ ಮಾಡಿದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ಭಾರತೀಯರ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದೆ.
ಆರ್ಚರಿಯಲ್ಲಿ ಚಿನ್ನ
ಬೆಳಗ್ಗೆ ನಡೆದ ಪುರುಷರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಅವರು ತಮ್ಮದೇ ದೇಶದ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಸೋಲು ಕಂಡ ಅಭಿಷೇಕ್ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನ, ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಭಾರತ ಪುರುಷರ ಕ್ರಿಕೆಟ್ ತಂಡ ಮತ್ತು ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದೆ. ಇವರ ಮೇಲೂ ಚಿನ್ನ ನಿರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ Asian Games; ಪದಕದ ಶತಕ ಬಾರಿಸಿದ ಭಾರತ; ಒಂದೇ ಗಂಟೆ ಅಂತರದಲ್ಲಿ 3 ಚಿನ್ನ ಬೇಟೆ
ರೋಚಕ ಗೆಲುವು ಸಾಧಿಸಿದ ಮಹಿಳಾ ಕಬಡ್ಡಿ ತಂಡ
ಅತ್ಯಂತ ರೋಚಕವಾಗಿ ನಡೆದ ಮಹಿಳಾ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಕೊನೆಯ ಕ್ಷಣದ ವರೆಗೂ ಈ ಪಂದ್ಯ ರೋಚಕತೆ ಸೃಷ್ಟಿಸಿತು. ಆದರೆ ಅದೃಷ್ಟ ಭಾರತಕ್ಕೆ ಒಲಿಯಿತು. ಕೇವಲ ಒಂದು ಅಂಕದ ಅಂತರದಲ್ಲಿ ಭಾರತ ವನಿತೆಯರು ಗೆದ್ದು ಬೀಗಿದರು. ಗೆಲುವಿನ ಅಂತರ 26-25. ಈ ಪದಕ ಒಲಿದ ತಕ್ಷಣ ಭಾರತ ಪದಕದ ಶತಕವನ್ನು ಬಾರಿಸಿತು.