Site icon Vistara News

Year Ender 2023: ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಸಾಧನೆ

India's Sporting Triumphs In 2023

ಬೆಂಗಳೂರು: ವರ್ಷದ ತುದಿಯಲ್ಲಿ ಎಲ್ಲ ಕ್ಷೇತ್ರಗಳ ಸಿಂಹಾವಲೋಕನವನ್ನೂ(Year Ender 2023) ಮಾಡಿದಂತೆ, ಕ್ರೀಡಾ ಕ್ಷೇತ್ರದಲ್ಲಿ ಮಾಡಿದಾಗ ಕೆಲವು ಮಹತ್ವದ ಏಳು-ಬೀಳುಗಳು ಕಂಡು ಬರುತ್ತದೆ. ಇದರಲ್ಲಿ ಮರೆಯಲಾಗದ ಮತ್ತು ಅತ್ಯಂತ ನೋವುಂಟು ಮಾಡಿದ ಘಟನೆ ಎಂದರೆ, ತವರಿನಲ್ಲೇ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದ್ದು. 2023ರ ಕ್ರೀಡಾ ಜಗತ್ತಿನಲ್ಲಿ ಭಾರತ ಸಾಧಿಸಿದ ಹಲವಾರು ಗಮನಾರ್ಹ ಸಾಧನೆಗಳ ಸಂಪೂರ್ಣ ಮೆಲುಕು ಈ ಕೆಳಗಿನಂತಿದೆ.

ಎಲ್ಲ ಮಾದರಿಲ್ಲಿ ನಂ.1 ಸ್ಥಾನ ಪಡೆದ ಟೀಮ್​ ಇಂಡಿಯಾ

ಟೀಮ್​ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ನಂತಹ ಪ್ರಮುಖ ಫೈನಲ್‌ಗಳಲ್ಲಿ ಸೋಲುಗಳನ್ನು ಎದುರಿಸುತ್ತಿದ್ದರೂ 2023 ರಲ್ಲಿ ಭಾರತದ ಕ್ರಿಕೆಟ್ ಪ್ರಯಾಣವು ಅದ್ಭುತ ಕ್ಷಣಗಳಿಂದ ಗುರುತಿಸಲ್ಪಟ್ಟಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತವು ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್​ನಲ್ಲಿ ಅಗ್ರ ಶ್ರೇಯಾಂಕಗಳನ್ನು ಪಡೆದುಕೊಂಡಿದೆ.


ಐತಿಹಾಸಿಕ ಸಾಧನೆ ತೋರಿದ ಸಾತ್ವಿಕ್- ಚಿರಾಗ್

ಭಾರತದ ಭರವಸೆಯ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಇದೇ ವರ್ಷ ನಡೆದಿದ್ದ ಪ್ರತಿಷ್ಠಿತ ಇಂಡೋನೇಷ್ಯಾ ಓಪನ್‌ ಟೂರ್ನಿಯ ಪುರುಷರ ಡಬಲ್ಸ್​ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು. ಜತೆಗೆ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿದ್ದಿದ್ದರು. ಇದು ಬ್ಯಾಡ್ಮಿಂಟನ್​ ಕೇತ್ರದಲ್ಲಿ ಭಾರತದ ಈ ವರ್ಷದ ಶ್ರೇಷ್ಠ ಸಾಧನೆಯಾಗಿದೆ.

ಇದನ್ನೂ ಓದಿ Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್‌ ನಟರ ಚಿತ್ರಗಳಿವು


9ನೇ ಸ್ಯಾಫ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಫುಟ್ಬಾಲ್​ ತಂಡ

14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌‌‌ನಲ್ಲಿ(SAFF Championship) ಸುನೀಲ್​ ಚೆಟ್ರಿ(sunil chhetri) ಸಾರಥ್ಯದ ಭಾರತ ತಂಡ ಐತಿಹಾಸಿಕ ಸಾಧನೆ ತೋರಿತ್ತು. ಜಿದ್ದಾಜಿದ್ದಿನ ಫೈನಲ್​ ಪಂದ್ಯದಲ್ಲಿ ​ಕುವೈತ್​ ತಂಡವನ್ನು ಸಡನ್​ ಡೆತ್​ ನಿಯಮದಂತೆ ​5-4 ಗೋಲ್​ಗಳಿಂದ ಸೋಲಿಸಿದ ಭಾರತ ತಂಡ ದಾಖಲೆಯ 9ನೇ ಟ್ರೋಫಿ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಭಾರತದ ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಎದುರಾಳಿ ತಂಡದ ಕೊನೇ ಗೋಲ್ ಅವಕಾಶವನ್ನು ವಿಫಲಗೊಳಿಸುವ ಮೂಲಕ ಭಾರತಕ್ಕೆ ಚಾಂಪಿಯನ್​​ಶಿಪ್​ ಕಿರೀಟ ಉಳಿಸಿಕೊಳ್ಳುವಲ್ಲಿ ನೆರವಾಗಿದ್ದರು. ಇದಕ್ಕೂ ಮುನ್ನ ನಡದಿದ್ದ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿಯೂ ಭಾರತ ತಂಡ ಟ್ರೋಫಿ ಗೆದ್ದಿತ್ತು. ಒಟ್ಟಾರೆಯಾಗಿ ಭಾರತ ಫುಟ್ಬಾಲ್​ ತಂಡ ಈ ವರ್ಷ ಅಗ್ರಗಣ್ಯ ಸಾಧನೆಯೊಂದಿಗೆ ವರ್ಷವನ್ನು ಕೊನೆಗೊಳಿಸಿದೆ.

ಇದನ್ನೂ ಓದಿ Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್‌ ನಟರ ಚಿತ್ರಗಳಿವು


ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

ಚೆನ್ನೈಯಲ್ಲಿ ನಡೆದಿದ್ದ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy) ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ಹರ್ಮನ್​ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡ ಫೈನಲ್​ನಲ್ಲಿ ಬಲಿಷ್ಠ ಮಲೇಷ್ಯಾ ತಂಡವನ್ನು 4-3 ಗೋಲ್​ಗಳಿಂದ ಮಣಿಸಿ 4ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಸಾಧನೆ ತೋರಿತ್ತು. ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ ಭಾರತ ಫೇವರಿಟ್ ತಂಡವಾಗಿ ಕಣಕ್ಕಿಳಿದಿತ್ತು. ನಿರೀಕ್ಷೆ ಮಾಡಿದಂತೆ ತಂಡ ಕಪ್​ ಕೂಡ ಗೆದ್ದಿತ್ತು.


ಮೋಡಿ ಮಾಡಿದ ಆರ್. ಪ್ರಜ್ಞಾನಂದ

ಭಾರತ ವಿಶ್ವಮಟ್ಟದ ಚೆಸ್ ಪ್ರಶಸ್ತಿಗಾಗಿ (World Chess Championship) 21 ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕೂತಿತ್ತು. 2002ರಲ್ಲಿ ಚೆಸ್ ಐಕಾನ್ ವಿಶ್ವನಾಥನ್ ಆನಂದ್ (Grand Master Vishwanathan Anand) ವಿಶ್ವ ಮಟ್ಟದ ಪ್ರಶಸ್ತಿಯನ್ನು ಗೆದ್ದ ನಂತರ ಬೇರೆ ಯಾವ ಚೆಸ್ ಆಟಗಾರನೂ ಇಷ್ಟೊಂದು ಎತ್ತರವನ್ನು ತಲುಪಿರಲಿಲ್ಲ. ಕೇವಲ 18 ವರ್ಷದ ರಮೇಶ್‌ ಬಾಬು ಪ್ರಜ್ಞಾನಂದ (R Praggnanandhaa) 12 ವರ್ಷಗಳಿಂದ ವಿಶ್ವದ ನಂಬರ್ ಒನ್ ಆಟಗಾರ ಎಂದು ಎಲ್ಲೆಡೆ ಕರೆಸಿಕೊಂಡಿರುವ ನಾರ್ವೆ ದೇಶದ 34 ವರ್ಷ ಪ್ರಾಯದ ಮ್ಯಾಗ್ನಸ್ ಕಾರ್ಲಸೆನ್ (Magnus Carlsen) ಅವರಿಗೆ ಫೈನಲ್ ಪಂದ್ಯದಲ್ಲಿ ತೀವ್ರ ಪೈಪೋಟಿ ನೀಡಿ ಸೋಲು ಕಂಡರು. ಪ್ರಶ್ತಿ ಮತ್ತೆ ಮರಿಚಿಕೆಯಾಯಿತು. ಆದರೆ ಪ್ರಜ್ಞಾನಂದ ತೋರಿದ ಈ ಸಾಧನೆಗೆ ವಿಶ್ವವೇ ಬೆರಗಾಗಿತ್ತು. ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ, 18 ವರ್ಷದಲ್ಲಿ ಈ ಮಟ್ಟದ ಸಾಧನೆ ತೋರಿ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ AFG vs SL: ಆಫ್ಘನ್​ ಆಟಕ್ಕೆ ಮನಸೋತ ಸೆಹವಾಗ್​; ಪೋಸ್ಟ್​ ಮೂಲಕ ಮೆಚ್ಚುಗೆ


ಐತಿಹಾಸಿಕ ಚಿನ್ನ ಗೆದ್ದ ನೀರಜ್​ ಚೋಪ್ರಾ

ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಗೆದ್ದಿದ್ದ ನೀರಜ್ ಚೋಪ್ರಾ ಅವರು ಬುಡಾಪೆಸ್ಟ್​ನಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) 88.17 ಮೀ. ದೂರ ಜಾವೆಲಿನ್​ ಎಸೆದು(Javelin Throw) ಭಾರತಕ್ಕೆ ಚೊಚ್ಚಲ ಮತ್ತು ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಕೇವಲ ಎರಡು ಪದಕ ಮಾತ್ರ ಗೆದ್ದಿತ್ತು. ಇದರಲ್ಲಿ ಒಂದು ಪದಕ ಕಳೆದ ವರ್ಷ ನೀರಜ್​ ಅವರೇ ತಂದುಕೊಟ್ಟಿದ್ದರು. 2003ರ ಪ್ಯಾರಿಸ್‌ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಮೊದಲ ಪದಕ ಪಡೆದಿದ್ದರು. ಅವರು ಕಂಚಿನ ಪದಕ ಗೆದ್ದಿದ್ದರು. ನೀರಜ್ ಗೆದ್ದ ಐತಿಹಾಸಿಕ ಚಿನ್ನದ​ ಪದಕದಿಂದ ಈ ಭಾರತದ ಪದಕ ಸಂಖ್ಯೆ ಮೂರಕ್ಕೆರಿದೆ. ಇದೇ ಕೂಟದಲ್ಲಿ ಭಾಗವಹಿಸಿದ್ದ ಕನ್ನಡಿಗ ಡಿ. ಮನು(84.14 ಮೀ.) 6ನೇ ಸ್ಥಾನ ಪಡೆದರೆ, ಮತ್ತೋರ್ವ ಭಾರತೀಯ ಜೇನಾ(84.77 ಮೀ.) 5ನೇ ಸ್ಥಾನಿಯಾದ್ದರು. ಒಟ್ಟಾರೆ ಜಾವೆಲಿನ್ ಕ್ಷೇತ್ರದಲ್ಲಿ ಭಾರತಕ್ಕೆ ಈ ವರ್ಷ ಸ್ಮರಣೀಯವಾಗಿದೆ.

ಇದನ್ನೂ ಓದಿ Neeraj Chopra: ಪ್ಯಾರಿಸ್​ನಲ್ಲಿಯೂ ನೀರಜ್​ ಚೋಪ್ರಾಗೆ ಚಿನ್ನ ಒಲಿಯಲಿದೆ; ಶಿರಸಿಯ ಕಾಶಿನಾಥ್ ನಾಯ್ಕ್ ವಿಶ್ವಾಸ


ಚಿನ್ನ ಗೆದ್ದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ

ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ (IBSA) ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿತ್ತು. ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗೆದ್ದು ಐತಿಹಾಸಿಕ ಸಾಧನೆ ತೋರಿತ್ತು. ನಿಗದಿತ 20 ಓವರ್‌ಗಳಲ್ಲಿ ಆಸ್ಟ್ರೇಲಿಯಾವನ್ನು 114/8ಕ್ಕೆ ಕಟ್ಟಿ ಹಾಕಿದ್ದ ಭಾರತ ಡಕ್​ವರ್ತ್​ ಲೂಯಿಸಿ ನಿಯಮದಂತೆ ನಿಗದಿ ಮಾಡಿದ 42 ರನ್‌ಗಳ ಪರಿಷ್ಕೃತ ಗುರಿಯನ್ನು 3.3 ಓವರ್‌ಗಳಲ್ಲಿ ಬೆನ್ನಟ್ಟಿ ಅಮೋಘ ಗೆಲುವು ಸಾಧಿಸಿತ್ತು.


ಏಷ್ಯನ್‌ ಗೇಮ್ಸ್​ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಭಾರತ

ಏಷ್ಯಾ ಖಂಡದ ಕ್ರೀಡಾಪಟುಗಳ ಮೆರೆದಾಟಕ್ಕೆ, ಪದಕ ಬೇಟೆಗೆ ವೇದಿಕೆ ಒದಗಿಸುವ ಬೃಹತ್‌ ಕ್ರೀಡಾಕೂಟವೇ ಈ ಏಷ್ಯಾಡ್‌ ಅಥವಾ ಏಷ್ಯನ್‌ ಗೇಮ್ಸ್‌. ಚೀನದ ಹ್ಯಾಂಗ್‌ಝೂನಲ್ಲಿ ನಡೆದ ಈ ಟೂರ್ನಿಯಲ್ಲಿ “ಟಾರ್ಗೆಟ್‌ ಪೋಡಿಯಂ-100” ಮಿಷನ್​ನೊಂದಿಗೆ ಕಣಕ್ಕಿಳಿದ್ದ ಭಾರತ ಇದನ್ನು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿತ್ತು. 28 ಚಿನ್ನ, 38 ಬೆಳ್ಳಿ, 41 ಕಂಚು ಗೆದ್ದು ಒಟ್ಟು 107 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಸಾರ್ವಕಾಲಿಕ ದಾಖಲೆ ಬರೆದಿತ್ತು. ಪ್ಯಾರಾ ಏಷ್ಯಾಡ್‌(para asian game) ಕೂಟದಲ್ಲಿಯೂ ಭಾರತ 111 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. 29 ಚಿನ್ನ, 31 ಬೆಳ್ಳಿ, 51 ಕಂಚು ಸೇರಿ ಒಟ್ಟು 111 ಪದಕ ಗೆದ್ದಿತ್ತು.

ಇದನ್ನೂ ಓದಿ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ’ಪದಕ ಶತಕ’ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತ

Exit mobile version