Site icon Vistara News

IPL 2022 | IPLಗಷ್ಟೇ ಹೊಸಬರು, ಕ್ರಿಕೆಟ್‌ಗಲ್ಲ !: ಮೊದಲ ಟೂರ್ನಿಯಲ್ಲೇ ಗುಜರಾತ್‌ ಟೈಟಾನ್ಸ್‌ ಚಾಂಪಿಯನ್

IPL 2022: ಟಾಟಾ ಐಪಿಎಲ್‌ 2022ರ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್ ತಂಡವು ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಫೈನಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಬಗ್ಗುಬಡಿದ ಹಾರ್ದಿಕ್‌ ಪಾಂಡ್ಯ ಪಡೆ ಐಪಿಎಲ್‌ನ ಚೊಚ್ಚಲ ಪ್ರವೇಶದಲ್ಲೇ ಟ್ರೋಫಿ ಎತ್ತಿ ಮಹತ್ಸಾಧನೆ ಮಾಡಿದೆ.

ಇದದೊಂದಿಗೆ ಊರಿನ ಜಾತ್ರೆಯಂತೆ ಸಂಭ್ರಮದಿಂದ ಇಡೀ ದೇಶವೇ ಆಚರಿಸುವ ಐಪಿಎಲ್‌ 15ನೇ ಆವೃತ್ತಿ ಈ ಮೂಲಕ ಮುಕ್ತಾಯಗೊಂಡಿದೆ. ಒಂದಿಷ್ಟು ಹೊಸ ದಾಖಲೆಗಳು, ಹೊಸ ಆಟಗಾರರ ಅದ್ಭುತ ಪ್ರದರ್ಶನ, ಹಳೇ ಆಟಗಾರರ ಹೊಸ ದಾಖಲೆಗಳು ಹಾಗೂ ವಿಫಲರಾದವರು ಕೆಲವರು. ಹೀಗೇ ಅನೇಕ ವಿವಿಧ ಹೊಸತನದೊಂದಿಗೆ ಈ ಆವೃತ್ತಿ ಸಮಾಪ್ತಿಯಾಗಿದೆ.

ಒಂದೆಡೆ ಮ್ಯಾಚ್‌ ಗೆದ್ದ ಸಂಭ್ರಮದಲ್ಲಿ ಗುಜರಾತ್‌ ಟೈಟಾನ್ಸ್. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಕಪ್‌ ಗೆಲ್ಲುವ ಕೊನೆಯ ಹಂತದವರೆಗೂ ತಲುಪಿ ಕಪ್‌ ತಲುಪಲು ಸಾಧ್ಯವಾಗದೇ ದುಃಖಿಸುತ್ತಿರುವ ರಾಜಸ್ಥಾನ್‌ ತಂಡದವರು. ಪ್ರತಿಯೊಂದು ಆಟವನ್ನೂ ಗೆಲ್ಲುವ ವಿಶ್ವಾಸದಲ್ಲಿಯೇ ಆಡಲಾಗುತ್ತದೆ. ಸೋಲುವುದಕ್ಕೆ ಅಂಜಬಾರದು. ಅದೊಂದು ಅನುಭವಕ್ಕೆ ಕಾರಣವಾಗತ್ತದೆ ಎಂದು ಎಷ್ಟೇ ಸಮಾಧಾನ ಮಾಡಿಕೊಂಡರೂ ಸೋಲು ಎನ್ನುವುದು ಒಂದು ಕ್ಷಣ ನೋವು ನೀಡುತ್ತದೆ. ರಾಜಸ್ಥಾನ್‌ ತಂಡ 2008ರಲ್ಲಿ ಚಾಂಪಿಯನ್‌ ಆದ ಬಳಿಕ ಇದೇ ಮೊದಲ ಬಾರಿ ಫೈನಲ್‌ ಮೆಟ್ಟಿಲೇರಿದ್ದು. ಈ ಬಾರಿ ಚಾಂಪಿಯನ್‌ ಆಗಿದ್ದರೆ, 14 ವರ್ಷದ ಬಳಿಕ ಮತ್ತೆ ಚಾಂಪಿಯನ್‌ ಆದ ಸಂಭ್ರಮದಲ್ಲಿರುತ್ತಿತ್ತು. 14 ವರ್ಷದ ವನವಾಸ ಮುಗಿಸಿ ಪಟ್ಟಾಭೀಷೆಕಕ್ಕೆ ಪಾತ್ರರಾಗುವ ಸಡಗರ ಕೈತಪ್ಪಿಹೋಗಿದೆ.

ಆದರೆ ಆ ನೋವನ್ನು ಮೆಟ್ಟಿ ನಿಂತು ಚಾಂಪಿಯನ್‌ ಆಗಿರುವ ತಂಡದ ಸಂಭ್ರಮದಲ್ಲಿ ರಾಜಸ್ಥಾನ್‌ ಭಾಗಿಯಾದರು.

ಗುಜರಾತ್‌ ತಂಡವು ಇದೇ ಮೊದಲ ಬಾರಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು. ಇದು ಹೊಸ ತಂಡ. ಕಾಲಿಟ್ಟ ಮೊದಲ ಆವೃತ್ತಿಯಲೇ ಚಾಂಪಿಯನ್‌ ಆಗಿ ವಿಶೇಷ ದಾಖಲೆ ಬರೆದಿದೆ. ಹಾರ್ದಿಕ್‌ ಪಾಂಡ್ಯ ಇದೇ ಮೊದಲ ಬಾರಿಗೆ ಒಂದು ತಂಡದ ನೇತೃತ್ವವನ್ನು ವಹಿಸಿದ್ದು. ಈ ಗೆಲುವಿನಿಂದ ನಾಯಕನಾಗಿ ಅವರ ಸಾಮರ್ಥ್ಯ ಸಾಬೀತಾಗಿದೆ.

ರಾಜಸ್ಥಾನ್‌ ಮೊದಲ ಬ್ಯಾಟಿಂಗ್:

ಟಾಸ್‌ ಗೆದ ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡರು. ಜೋಸ್‌ ಬಟ್ಲರ್‌ ಹಾಗೂ ಯಶಸ್ವಿ ಜೈಸ್‌ವಾಲ್‌ ಭರವಸೆಯ ಆರಂಭ ನೀಡಿದರು. ಆದರೆ ನಂತರದಲ್ಲಿ ಗುಜರಾತ್‌ ತಂಡದ ಬೌಲಿಂಗ್‌ ದಾಳಿಗೆ ರನ್‌ ಗಳಿಸಲು ಬಾಟರ್ಸ್‌ ಪರದಾಡಿದರು. ರಾಜಸ್ಥಾನ್‌ ತಂಡದ ಸ್ಟಾರ್‌ ಬ್ಯಾಟರ್‌ ಜೋಸ್‌ ಬಟ್ಲರ್‌ ತಂಡದ ಭರವಸೆಯನ್ನು ಸುಳ್ಳಾಗಿಸಿ 39 ರನ್‌ಗೆ ವಿಕೆಟ್‌ ಒಪ್ಪಿಸದರು. ಕ್ಯಾಪ್ಟನ್‌ ಸಂಜು ಸ್ಯಾಮ್ಸನ್‌ ಕೂಡ ಕೇವಲ 14ರನ್‌ಗೆ ಔಟಾದರು. ಗುಜರಾತ್‌ ಬೌಲಿಂಗ್‌ ದಾಳಿಗೆ ರಾಜಸ್ಥಾನ್‌ ಒಂದು ಹಂತದಲ್ಲಿ 120 ರನ್ನ ತಲುಪುವುದು ಅನುಮಾನ ಎಂಬಂತೆ ಕಂಡಿತ್ತು. ಫೈನಲ್‌ ಪಂದ್ಯದಲ್ಲಿ ಸಾಧಾರಣ ಎಂಬಂತೆ ಆಟವನ್ನು ಪ್ರದರ್ಶಿಸಿ ಒಟ್ಟು 130 ಸ್ಕೋರ್‌ ಗಳಿಸಿದರು.

ಆತ್ಮವಿಶ್ವಾಸ ಹೆಚ್ಚಿಸಿದ ಗುಜರಾತ್‌ ಬೌಲಿಂಗ್‌

ಗುಜರಾತ್‌ ತಂಡ ಆರಂಭದಿಂದಲೇ ಅದ್ಭುತ ಆಟವನ್ನು ಪ್ರದರ್ಶಿಸಿ ರಾಜಸ್ಥಾನ ತಂಡದವರಿಗೆ ಕಾಡಿದರು. ಕ್ಯಾಪ್ಟನ್‌ ಹಾರ್ದಿಕ್‌ ಪಾಂದ್ಯ ಇಂದು ನಿಜವಾಗಿಯೂ ಕ್ಯಾಪ್ಟನ್‌ ಆಟವನ್ನಾಡಿದರು. ಬೌಲಿಂಗ್‌ನಲಗಲ್ಲಿ 3ವಿಕೆಟ್‌ ಪಡೆದು ಕೇವಲ 14 ರನ್‌ ನೀಡಿದರು. 130ರನ್‌ಗೆ ರಾಜಸ್ಥಾನ್‌ ತಂಡಕ್ಕೆ ಕಡಿವಾಣ ಹಾಕಿದ್ದರಿಂದ ಗುಜರಾತ್‌ ತಂಡದ ಆತ್ಮವಿಶ್ವಾಸ ಹಚ್ಚಿತ್ತು. ಆದರೆ, ರಾಜಸ್ಥಾನ್‌ ತಂಡವೂ ಈ ರೀತಿ ಬೌಲಿಂಗ್‌ ಮಾಡಿದರೆ ಎಂದು ಗುಜರಾತ್‌ ತಂಡ ಎಚ್ಚರಿಕೆಯೂ ವಹಿಸಿದಂತೆ ಕಂಡಿತ್ತು. ಬೌಲಿಂಗ್‌ ಪಿಚ್‌ ಆದ ಕಾರಣದಿಂದ ಬೌಲರ್ಸ್‌ಗೆ ಅನುಕೂಲವಾಗಿತ್ತು. ಚಾಹಲ್‌ ಹಾಗೂ ಟ್ರೆಂಟ್‌ ಬೌಲ್ಟ್‌ ಏನಾದರು ಮ್ಯಾಜಿಕ್‌ ಮಾಡಿದ್ದರೆ ಗುಜರಾತ್‌ ತಂಡಕ್ಕೆ ಗೆಲ್ಲುವುದು ಕಷ್ಟವಾಗುತ್ತಿತ್ತು.

130 ರನ್‌ ಚೇಸ್‌ ಮಾಡಿದ ಗುಜರಾತ್‌ ತಂಡವು ತನ್ನ ಮೊದಲೆರಡು ವಿಕೆಟ್‌ ಅತಿ ಬೇಗ ಕಳೆದುಕೊಂಡಿತು. ಆದರೆ ನಂತರ ಹಾರ್ದಿಕ್‌ ಪಾಂಡ್ಯ ಹಾಗೂ ಶುಭಮನ್‌ ಗಿಲ್‌ ಅದ್ಭುತ ಜತೆಯಾಟ ತಂಡದ ಗೆಲುವಿಗೆ ಆಶಾಕಿರಣವಾಯಿತು. ಆದರೆ, ಲೆಗ್‌ ಸ್ಪಿನ್ನರ್‌ ಯುಝುವೇಂದ್ರ ಚಾಹಲ್‌ ಹಾರ್ದಿಕ್‌ ಪಾಂಡ್ಯ ವಿಕೆಟ್‌ ಪಡೆಯುವ ಮೂಲಕ ಈ ಜತೆಯಾಟವನ್ನು ಮುರಿದರು. ಒಂದೆಡೆ ವಿಕೆಟ್‌ ಉರುಳಿತ್ತಿದ್ದರೂ ಶುಭಮನ್‌ ಗಿಲ್‌ ದೃಢವಾಗಿ ನಿಂತು ಬೌಲರ್‌ಗಳನ್ನು ಎದುರಿಸಿದರು. ಸಾಧಾರಣ ಗತಿಯಲ್ಲಿ ಸಾಗುತ್ತಿದ್ದ ಪಂದ್ಯವನ್ನು ರೋಚಕಗೊಳಿಸಿದ್ದು ಡೇವಿಡ್‌ ಮಿಲ್ಲರ್. ಡೇವಿಡ್‌ ಮಿಲ್ಲರ್‌ ಅದ್ಭುತ ಆಟಕ್ಕೆ ಕ್ರೀಡಾಂಗಣದಲ್ಲಿದ್ದ ಜನರೆಲ್ಲಾ ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ‌

ಕೊನೆ ಹಂತದಲ್ಲಿ 4ರನ್‌ ಅವಶ್ಯಕತೆಯಿರುವಾಗ ಶುಭಮನ್‌ ಗಿಲ್‌ ಅವರ ವಿನ್ನಿಂಗ್‌ ಸಿಕ್ಸ್‌ ನಿಜಕ್ಕೂ ಸ್ಮರಣೀಯ! ಎಲ್ಲೆಡೆ ಗುಜರಾತ್‌ ಟೇಟಾನ್ಸ್‌ ತಂಡವರು ಚಾಂಪಿಯನ್ಸ್‌ ಆಗಿ ಕಪ್‌ ಎತ್ತಿದ ಸಡಗರ.

ಈವರೆಗೆ ಚಾಂಪಿಯನ್‌ ಪಟ್ಟಕ್ಕೆ ಏರಿದವರ ಪಟ್ಟಿ:

ವರ್ಷತಂಡ
2008ರಾಜಸ್ಥಾನದ ರಾಯಲ್ಸ್
2009ಡೆಕ್ಕನ್‌ ಚಾರ್ಜರ್ಸ್
2010ಚೆನ್ನೈ ಸೂಪರ್‌ ಕಿಂಗ್ಸ್
2011ಚೆನ್ನೈ ಸೂಪರ್‌ ಕಿಂಗ್ಸ್
2012ಕೊಲ್ಕತ್ತಾ ನೈಟ್‌ ರೈಡರ್ಸ್
2013ಮುಂಬೈ ಇಂಡಿಯನ್ಸ್
2014ಕೊಲ್ಕತ್ತಾ ನೈಟ್‌ ರೈಡರ್ಸ್
2015ಮುಂಬೈ ಇಂಡಿಯನ್ಸ್‌
2016ಸನ್‌ರೈಸರ್ಸ್‌ ಹೈದ್ರಾಬಾದ್
2017ಮುಂಬೈ ಇಂಡಿಯನ್ಸ್
2018ಚೆನ್ನೈ ಸೂಪರ್‌ ಕಿಂಗ್ಸ್
2019ಮುಂಬೈ ಇಂಡಿಯನ್ಸ್
2020ಮುಂಬೈ ಇಂಡಿಯನ್ಸ್
2021ಚೆನ್ನೈ ಸೂಪರ್‌ ಕಿಂಗ್ಸ್
2022ಗುಜರಾತ್‌ ಟೈಟಾನ್ಸ್‌

ಇದನ್ನೂ ಓದಿ: IPL 2022 | ಫೈನಲ್‌ ಪಂದ್ಯದಲ್ಲಿ ರಾಜಸ್ಥಾನ್‌ ಮೊದಲು ಬ್ಯಾಟಿಂಗ್!

Exit mobile version