ಅಹಮದಾಬಾದ್: IPL 2022 : ಐಪಿಎಲ್ 15ನೇ ಆವೃತ್ತಿಯ ಅಂತಿಮ ಪಂದ್ಯ. ಐಪಿಎಲ್ ಮೊದಲ ಆವೃತ್ತಿಯ ಚಾಂಪಿಯನ್ ಆದ ರಾಜಸ್ಥಾನ್ ಹಾಗೂ ಇದೇ ಮೊದಲ ಬಾರಿ ಐಪಿಎಲ್ ಆಡುತ್ತಿರುವ ಗುಜರಾತ್ ತಂಡದ ನಡುವೆ ಸೆಣೆಸಾಟ. ಈ ಪಂದ್ಯದಲ್ಲಿ ಗೆದ್ದವರ ಮುಡಿಗೆ ಚಾಂಪಿಯನ್ ಕಿರೀಟ!
ರಾಜಸ್ಥಾನ್ ಹಾಗೂ ಗುಜರಾತ್ ಎರಡು ತಂಡಗಳಿಗೆ ಇಂದಿನ ಪಂದ್ಯದಲ್ಲಿ ಅನೇಕ ಭಾವನಾತ್ಮಕ ಸಂಗತಿಗಳೂ ಬೆಸೆದುಕೊಂಡಿವೆ.
ರಾಜಸ್ಥಾನ್ ರಾಯಲ್ಸ್:
ರಾಜಸ್ಥಾನ್ ತಂಡವು 14 ವರ್ಷಗಳ ಹಿಂದೆ ಆರಂಭವಾದ ಐಪಿಎಲ್‌ನಲ್ಲಿ ಮೊಟ್ಟಮೊದಲು ಚಾಂಪಿಯನ್ ಪಟ್ಟಕ್ಕೆ ಏರಿತ್ತು. ಆಗ ಶೇನ್ ವಾರ್ನ್ ತಂಡದ ಕ್ಯಾಪ್ಟನ್. ಈ ಬಾರಿ ಸಂಜು ಸ್ಯಾಮ್ಸನ್ ಕ್ಯಾಪ್ಟನ್‌ಶಿಪ್‌ನಲ್ಲಿ ಮತ್ತೊಮ್ಮೆ ಕಪ್ ಎತ್ತಬೇಕು ಎಂಬ ಆಸೆ ತಂಡದವರಿಗೆ ಗಟ್ಟಿಯಾಗಿದೆ. ಈ ಬಾರಿಯೂ ಚಾಂಪಿಯನ್ ಆದರೆ, 2008ರ ಅಪೂರ್ವ ಘಳಿಗೆ ಮತ್ತೊಮ್ಮೆ ಮರುಕಳಿಸುತ್ತದೆ.
ಕ್ವಾಲಿಫೈಯರ್ 1 ಪಂದ್ಯದಲಿ ರಾಜಸ್ಥಾನ್ ಹಾಗೂ ಗುಜರಾತ್ ನಡುವೆ ಗುಜರಾತ್ ಗೆಲುವು ಸಾಧಿಸಿತ್ತು. ಈಗ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ರಾಜಸ್ಥಾನ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ರಾಜಸ್ಥಾನ್ ತಂಡ ಈವರೆಗೆ ಅದ್ಭುತ ಆಟವನ್ನು ಪ್ರದರ್ಶಿಸಿದೆ. ತಂಡದ ಸ್ಟಾರ್ ಪ್ಲೇಯರ್ ಜಾಸ್ ಬಟ್ಲರ್ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಈವರೆಗೆ ಒಟ್ಟು 4 ಶತಕವನ್ನು ಬಾರಿಸಿ, 824 ರನ್ ಗಳಿಸಿದ್ದಾರೆ. ಜಾಸ್ ಬಟ್ಲರ್ ಇಂದಿನ ಪಂದ್ಯದಲ್ಲಿ ಸೆಂಚುರಿ ಬಾರಿಸಿದರೆ, ವಿರಾಟ್ ಕೋಹ್ಲಿ ಅವರ ರೆಕಾರ್ಡ್ ಮುರಿದು ಅತಿ ಹೆಚ್ಚು ಶತಕ ಬಾರಿಸಿದವರಲ್ಲಿ ಅಗ್ರಗಣ್ಯರಾಗುತ್ತಾರೆ.
ಗುಜರಾತ್ ಟೈಟಾನ್ಸ್:
ಗುಜರಾತ್ ತಂಡ ಈ ಬಾರಿ ರಚನೆಯಾದ ನೂತನ ತಂಡ. ಆರಂಭದಿಂದಲೂ ಅದ್ಭುತ ಎನ್ನಿಸುವಂತೆ ಆಟವನ್ನಾಡಿ ಫೈನಲ್ ತಲುಪಿದ ಮೊದಲ ತಂಡ. ಗುಜಾರತ್ ಟೈಟಾನ್ಸ್ ಈ ಪಂದ್ಯ ಗೆದ್ದರೆ, ಡೆಬ್ಯೂ ಮಾಡಿದ ಆವೃತ್ತಿಯಲ್ಲೇ ಐಪಿಎಲ್ ಚಾಂಪಿಯನ್ ಆಗುವ ಹಿರಿಮೆಗೆ ಪಾತ್ರವಾಗುತ್ತದೆ.
ಈ ಎರಡೂ ತಂಡಗಳ ಕೀ ಆಟಗಾರರು ಯಾರು?
ಗುಜರಾತ್ ಟೈಟಾನ್ಸ್:
ಡೇವಿಡ್ ಮಿಲ್ಲರ್: ದಕ್ಷಿಣ ಆಫ್ರಿಕಾದ ಅನುಭವೀ ಆಟಗಾರ ಗುಜರಾತ್ ಪರ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ನಿರಂತರವಾಗಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಶರ್ಮ ಹಾಕಿದ್ದಾರೆ. ಇಕ್ಕಟ್ಟಿನ ಸಂದರ್ಭದಲ್ಲಿ, ಅವಶ್ಯಕತೆಯಿದ್ದಾಗ ಪಾರ್ಟ್‌ನರ್‌ಶಿಪ್ ಗಟ್ಟಿಯಾಗಿಸಿದ್ದಾರೆ. ಇಂದಿನ ಪಂದ್ಯದಲ್ಲೂ ಅವರ ಆಟದ ಬಗ್ಗೆ ಭರವಸೆಯಿದೆ.
ಮೊಹಮ್ಮದ್ ಶಮಿ: ಈ ಬಾರಿ ಒಟ್ಟು 19 ವಿಕೆಟ್ ಪಡೆದು, 7.18 ಎಕಾನಮಿ ಕಾಪಾಡಿಕೊಂಡಿದ್ದಾರೆ. ಅನಿವಾರ್ಯ ಹಂತದಲ್ಲಿ ವಿಕೆಟ್ ಪಡೆದು ಎದುರಾಳಿ ತಂಡದ ಪಾರ್ಟ್‌ನರ್‌ಶಿಪ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಡೆತ್ ಓವರ್‌ನಲ್ಲಿ ಅವರ ಯಾರ್ಕರ್‌ಗಳು ಗುಜರಾತ್ ತಂಡಕ್ಕೆ ಪಾಸಿಟಿವ್ ಫ್ಯಾಕ್ಟರ್.
ರಶೀದ್ ಖಾನ್: ಟ20 ಆಟದಲ್ಲಿ ರಶೀದ್ ಖಾನ್ ಶ್ರೇಷ್ಠ ಸ್ಪಿನ್ ಮಾಂತ್ರಿಕ. ನಿರಂತರವಾಗಿ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ಒಟ್ಟು 18 ವಿಕೆಟ್ ಪಡೆದು, 6.73ಎಕಾನಮಿ ಹೊಂದಿದ್ದಾರೆ. ರಶೀದ್ ಖಾನ್ ಸ್ಪಿನ್ ದಾಳಿಗೆ ಬ್ಯಾಟ್ಸ್‌ಮನ್‌ಗಳು ರನ್ ಹೊಡೆಯಲು ಪರದಾಡುತ್ತಾರೆ. ಅಲ್ಲದೆ, ಈ ಬಾರಿ ರಶೀದ್ ಖಾನ್ ಬ್ಯಾಟಿಂಗ್‌ನಲ್ಲಿ ಕೂಡ ಮೋಡಿ ಮಾಡಿದ್ದಾರೆ. ಹಲವು ಪಂದ್ಯಗಳಲ್ಲಿ ಗುಜರಾತ್‌ನ ಗೆಲುವಿಗೆ ಕಾರಣರಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್:
ಜಾಸ್ ಬಟ್ಲರ್: ಆರೇಂಜ್ ಕ್ಯಾಪ್‌ನ ಸರದಾರ. ಈ ಆಟಗಾರ ಐಪಿಎಲ್‌ನಲ್ಲಿ ರೋಚಕ ಆಟವನ್ನು ಪ್ರದಶರ್ಶಿಸಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ತಂಡಕ್ಕೆ ಆಸರೆಯಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಶಮಿ ಹಾಗೂ ರಶೀದ್ ಖಾನ್ ದಾಳಿಯನ್ನು ಎದುರಿಸಿ ಅಬ್ಬರಿಸಿದರೆ ತಂಡಕ್ಕೆ ಗೆಲುವು ಸುಲಭವಾಗುತ್ತದೆ.
ಸಂಜು ಸ್ಯಾಮ್ಸನ್: ಸಂಜು ಸ್ಯಾಮ್ಸನ್ ಖಾತೆಯಲ್ಲಿ ಅನೇಕ ಅರ್ಧಶತಕಗಳು ಇಲ್ಲದಿರಬಹುದು. ಆದರೆ, ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಮುಖ್ಯಪಾತ್ರನಿರ್ವಹಿಸಿದ್ದಾರೆ. ಈ ಬಾರಿ ಒಟ್ಟು 444 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಜಾಸ್ ಬಟ್ಲರ್ ಬೇಗ ಔಟಾದರೆ ಸಂಜು ಸ್ಯಾಮ್ಸನ್ ಜವಾಬ್ದಾರಿಯುತವಾಗಿ ಆಡಬೇಕಾಗುತ್ತದೆ. ರಾಜಸ್ಥಾನ್ ತಂಡದ ನೌಕೆಯನ್ನು ಗೆಲುವಿನ ದಡ ಸೇರಿಸುವ ಹೊಣೆ ಸಂಜು ಸ್ಯಾಮ್ಸನ್ ಹೆಗಲಮೇಲಿದೆ.
ಯುಜವೇಂದ್ರ ಚಾಹಲ್: ಒಟ್ಟು 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದ ಲೆಗ್ ಸ್ಪಿನ್ನರ್. 16 ಪಂದ್ಯಗಳಲ್ಲಿ ಒಟ್ಟು 7.96 ಎಕಾನಮಿ ಹೊಂದಿದ್ದಾರೆ. ಇವರ ಲಗ್ ಸ್ಪಿನ್ ಜಾದುವನ್ನು ಡೆತ್ ಓವರ್‌ನಲ್ಲಿ ಕೂಡ ಬಳಸಬಹುದು. ಗುಜರಾತ್ ತಂಡದ ಮಿಲ್ಲರ್ ಹಾಗೂ ರಾಹುಲ್ ಟೆವೆಟಿಯಾ ಅವರನ್ನು ಚಾಹಲ್ ಇಕ್ಕಟ್ಟಿಗೆ ಸಿಲುಕಿಸಬಹುದಾಗಿದೆ.