ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾದ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಉದ್ಘಾಟಮಾ ಕಾರ್ಯಕ್ರಮ ನಡೆಯಲಿದೆ. ಇದೇ ಕಾರಣಕ್ಕೆ ಈ ಬಾರಿಯ ಉದ್ಘಾಟನಾ ಸಮಾರಂಭ ಹಿಂದೆದಿಂತಲೂ ಅದ್ದೂರಿಯಾಗಿ ಇರಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ನ್ಯಾಶನಲ್ ಕ್ರಸ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ಅರಿಜಿತ್ ಸಿಂಗ್ ಅಭಿಮಾನಿಗಳನ್ನು ನೃತ್ಯ ಮತ್ತು ಸಂಗೀತದ ಮೂಲಕ ರಂಜಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಇದರ ಹೊರತಾಗಿ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸುವ ಸಲುವಾಗಿ ಇದೇ ಮೊದಲ ಬಾರಿ ಡ್ರೋನ್ ಶೋ ಏರ್ಪಡಿಸಲಾಗಿದೆ. ಬಿಸಿಸಿಐ ಡ್ರೋನ್ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಮತಷ್ಟು ಮೆರುಗು ತರಲು ಮುಂದಾಗಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮೊದಲು ಈ ಡ್ರೋನ್ ಪ್ರದರ್ಶನದ ಒಂದು ನೋಟವನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ವರದಿಗಳ ಪ್ರಕಾರ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 1500 ಡ್ರೋನ್‌ಗಳನ್ನು ಬಳಸಿ ವಿಶಿಷ್ಟ ಎಲ್‌ಇಡಿ ಮತ್ತು ಲೈಟ್ ಶೋ ಪ್ರದರ್ಶನ ಇದರಲಿದೆ ಎಂದು ತಿಳಿದು ಬಂದಿದೆ.
ಟೂರ್ನಿಯ ಉದ್ಘಾಟನಾ ಸಮಾರಂಭದ ಸಿದ್ಧತೆಯ ಫೋಟೊವನ್ನು ಜಯ್ ಶಾ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊದಲ್ಲಿ ಮೈದಾನದ ಮಧ್ಯದಲ್ಲಿ 10 ತಂಡಗಳ ಲೋಗೊವನ್ನು ಬಿಡಿಸಿರುವುದು ಕಂಡು ಬಂದಿದೆ.
ಮೂರು ವರ್ಷಗಳ ಬಳಿಕ ಫ್ಯಾನ್ ಪಾರ್ಕ್
ಐಪಿಎಲ್ನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದ ಐಪಿಎಲ್ ಫ್ಯಾನ್ ಪಾರ್ಕ್‌ಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ 2019ರ ಬಳಿಕ ಮತ್ತೆ ಫ್ಯಾನ್ ಪಾರ್ಕ್ ಕಾಣಿಸಿಕೊಳ್ಳಲಿದೆ. 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಇರಲಿದೆ. ಐಪಿಎಲ್ ಟೂರ್ನಿಯನ್ನು ದೇಶದ ವಿವಿಧ ನಗರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಈ ಟೂರ್ನಿಗೆ ಮತ್ತಷ್ಟು ಪ್ರಚಾರ ಸಿಗುವಂತಾಗಲು ಬಿಸಿಸಿಐ 2015ರ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು.
ಕರ್ನಾಟಕದಲ್ಲಿಯೂ ಇರಲಿದೆ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ನಾಲ್ಕು ಕಡೆ ಈ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದೊಡ್ಡ ಪರದೆಯ ಮೂಲಕ ಪಂದ್ಯ ನೋಡಲು ವ್ಯವಸ್ಥೆ ಇರಲಿದೆ. ಹುಬ್ಬಳ್ಳಿಯಲ್ಲಿ ಏಪ್ರಿಲ್ 15 ಮತ್ತು 16, ಬೆಳಗಾವಿ ಏ.22 ಮತ್ತು 23, ಶಿವಮೊಗ್ಗ ಮೇ 6 ಮತ್ತು 7 ಹಾಗೂ ಮೈಸೂರಿನಲ್ಲಿ ಮೇ 20 ಮತ್ತು 21 ರಂದು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೈನಲ್ ಪಂದ್ಯಕ್ಕೆ 5 ಕಡೆ ಫ್ಯಾನ್ ಪಾರ್ಕ್ ಇರಲಿದೆ. ಮೇ 28 ರಂದು ನಡೆಯುವ ಫೈನಲ್ ಕದನಕ್ಕೆ ಜಮ್ಮು, ಜೆಮ್‌ಶೆಡ್‌ಪುರ, ಪಾಲಕ್ಕಾಡ್, ಜೋರ್ಹತ್ ಮತ್ತು ಭೋಪಾಲ್ ಒಟ್ಟು ಐದು ಕಡೆ ಫ್ಯಾನ್ ಪಾರ್ಕ್ ಇರಲಿದೆ.