ಮುಂಬಯಿ: ಅದು ಉದ್ಘಾಟನಾ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯ, ಇಲ್ಲಿ ಕೆಕೆಆರ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗಿದ್ದವು. ಕೆಕೆಆರ್ ಪರ ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಬ್ರೆಂಡನ್ ಮೆಕಲಮ್ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ 158 ರನ್ ಬಾರಿಸಿದ್ದರು. ಈ ಮೂಲಕ ಚೊಚ್ಚಲ ಆವೃತ್ತಿಯಲ್ಲೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ವಿಪರ್ಯಾಸ ಎಂದರೆ ಇದಾದ ಬಳಿಕ ಕೆಕೆಆರ್ ತಂಡದ ಪರ ಯಾವ ಆಟಗಾರನು ಶತಕ ಬಾರಿಸಿರಲಿಲ್ಲ. ಇದೀಗ ಮುಂಬೈ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರು ಶತಕ ಸಿಡಿಸಿ 15 ವರ್ಷಗಳ ಬಳಿಕ ಈ ಕೊರಗನ್ನು ನೀಗಿಸಿದ್ದಾರೆ.
ಗಾಯದ ಮಧ್ಯೆಯೂ ಶತಕ ಸಿಡಿಸಿದ ವೆಂಕಿ
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಕೆಕೆಆರ್ ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್(8) ಮತ್ತು ಎನ್. ಜಗದೀಶನ್(0) ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ರೀಸ್ಗೆ ಬಂದ ವೆಂಕಟೇಶ್ ಅಯ್ಯರ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಮುಂಬೈ ಬೌಲರ್ಗಳ ಮೇಲೆ ಸವಾರಿ ನಡೆಸಿದರು. ಇದರ ಮಧ್ಯೆ 13 ರನ್ ಗಳಿಸಿದ್ದ ವೇಳೆ ಅವರ ಮಂಡಿಗೆ ಚೆಂಡು ಬಡಿದು ಗಾಯಗೊಂಡರು. ಈ ಗಾಯದ ಮಧ್ಯೆಯೂ ಛಲ ಬಿಡದೆ ಆಟ ಮುಂದುವರಿಸಿದ ಅವರು ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ದಾಖಲಾದ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಸನ್ರೈಸರ್ಸ್ ತಂಡದ ಹ್ಯಾರಿ ಬ್ರೂಕ್ ಶತಕ ಬಾರಿಸಿದ್ದರು. ಒಟ್ಟು 51 ಎಸೆತ ಎದುರಿಸಿದ ಅವರು ಬರೋಬ್ಬರಿ 9 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 104 ರನ್ ಗಳಿಸಿದರು. ಇವರ ವಿಕೆಟ್ ರಿಲೆ ಮೆರೆಡಿತ್ ಪಾಲಾಯಿತು.
ಇದನ್ನೂ ಓದಿ IPL 2023: ಗಾಯದ ಮಧ್ಯೆಯೂ ಶತಕ ಸಿಡಿಸಿದ ವೆಂಕಟೇಶ್ ಅಯ್ಯರ್; ಮುಂಬೈ ಗೆಲುವಿಗೆ 186 ರನ್ ಸವಾಲು
ವೆಂಕಟೇಶ್ ಅಯ್ಯರ್ ಅವರು ಶತಕ ಬಾರಿಸುತ್ತಿದ್ದಂತೆ ಕೆಕೆಆರ್ ಅಭಿಮಾನಿಗಳಲ್ಲಿ ಮತ್ತು ತಂಡದಲ್ಲಿ ವಿಶೇಷ ಸಂಭ್ರಮಾಚರಣೆ ಮನೆ ಮಾಡಿತು. ಇದಕ್ಕೆ ಕಾರಣ ಬರೋಬ್ಬರಿ 15 ವರ್ಷಗಳ ಬಳಿಕ ಕೆಕೆಆರ್ ಪರ ದಾಖಲಾದ ಶತಕ ಇದಾಗಿತ್ತು. 2008ರ ಏಪ್ರಿಲ್ 18ರಂದು ಮೆಕಲಮ್ ಅವರು ಮೊದಲ ಶತಕ ಬಾರಿಸಿದ್ದರು. ಇದೀಗ 2023ರ ಏಪ್ರಿಲ್ 16ರಂದು ವೆಂಕಟೇಶ್ ಅಯ್ಯರ್ ಅವರು ಶತಕ ಬಾರಿಸಿದರು. ಅಂದರೆ 5477 ದಿನಗಳ ಬಳಿಕ ಕೆಕೆಆರ್ ಪರ ದಾಖಲಾದ ಶತಕ ಇದಾಗಿದೆ. ಅಂದು ಮೆಕಲಮ್ ಅವರು 73 ಎಸೆತಗಳಿಂದ ಅಜೇಯ 158 ರನ್(10 ಬೌಂಡರಿ 13 ಸಿಕ್ಸರ್) ಗಳಿಸಿದ್ದರು. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 222 ರನ್ ರಾಶಿ ಹಾಕಿತ್ತು. ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆರ್ಸಿಬಿ ಕೇವಲ 82 ರನ್ಗೆ ಆಲೌಟ್ ಆಗಿ 140 ರನ್ಗಳ ಅಂತರದ ಹೀನಾಯ ಸೋಲು ಕಂಡಿತ್ತು.