ಬೆಂಗಳೂರು: ಐಪಿಎಲ್ನಲ್ಲಿ(IPL 2023) ಬುಕ್ಕಿಗಳ ಕಾಟ ಮತ್ತೆ ಆರಂಭವಾದಂತೆ ಕಾಣುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಅವರನ್ನು ವ್ಯಕ್ತಿಯೊಬ್ಬ ಫೋನ್ ಮೂಲಕ ಸಂಪರ್ಕಿಸಿ ಬೆಂಗಳೂರು ತಂಡದ ಬಗ್ಗೆ ಮಾಹಿತಿ ಕೇಳಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ವಿಚಾರವನ್ನು ಸಿರಾಜ್ ಅವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಬಳಿಕ ಮೊಹಮ್ಮದ್ ಸಿರಾಜ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಆರ್ಸಿಬಿ ತಂಡದ ಆಟಗಾರರ ಬಗ್ಗೆ ಹಾಗೂ ತಂಡದೊಳಗಿನ ಆಂತರಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಈ ಬಗ್ಗೆ ಸಿರಾಜ್ ಯಾವುದೇ ಪ್ರತಿಕ್ರಿಯೆ ನೀಡದೆ ಕರೆಯನ್ನು ನಿರಾಕರಿಸಿದ್ದಾರೆ, ಜತೆಗೆ ತಕ್ಷಣ ಈ ವಿಚಾರವನ್ನು ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಿಳಿಸಿದ್ದಾರೆ.
ಸಿರಾಜ್ ಅವರು ನೀಡಿರುವ ಮಾಹಿತಿಯನ್ವಯ ಬಿಸಿಸಿಐ ತನಿಖೆ ನಡೆಸಿದೆ. ಆದರೆ ಇದು ಸಿರಾಜ್ಗೆ ಬಂದಿರುವ ಕರೆ ಬುಕ್ಕಿಯದಲ್ಲ ಬದಲಾಗಿ ಹೈದರಾಬಾದ್ ಮೂಲದ ಚಾಲಕನೊಬ್ಬ ಮ್ಯಾಚ್ ಬೆಟ್ಟಿಂಗ್ಗೋಸ್ಕರ ಮಾಹಿತಿ ಕೇಳಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2022 : ಮುಂಬೈ ಇಂಡಿಯನ್ಸ್ಗೆ 14 ರನ್ಗಳಿಂದ ಮಣಿದ ಸನ್ ರೈಸರ್ಸ್ ಹೈದರಾಬಾದ್
ಬೆಟ್ಟಿಂಗ್ ವ್ಯಸನಿಯಾಗಿರುವ ಈತ ಈಗಾಗಲೇ ಬೆಟ್ಟಿಂಗ್ನಿಂದ ಅಪಾರ ಹಣ ಕಳೆದುಕೊಂಡಿದ್ದ ಇದೇ ಕಾರಣಕ್ಕೆ ಆತ ಕಳೆದುಕೊಂಡ ಹಣವನ್ನು ಮತ್ತೆ ಪಡೆಯುವ ಸಲುವಾಗಿ ಸಿರಾಜ್ಗೆ ಕರೆ ಮಾಡಿ ಆಂತರಿಕ ಮಾಹಿತಿಗಾಗಿ ಅವರನ್ನು ಸಂಪರ್ಕಿಸಿದ್ದಾನೆ. ಸದ್ಯದ ಮಾಹಿತಿ ಪ್ರಕಾರ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಈ ವ್ಯಕ್ತಿಯನ್ನು ಬಂಧಿಸಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.
ಐಪಿಎಲ್ನಲ್ಲಿ ಈ ಹಿಂದೆ ಕೇರಳದ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಾಂಡಿಲಾ ಚೆನ್ನೈ ಫ್ರಾಂಚೈಸಿಯ ಗುರುನಾಥ್ ಮೇಯಪ್ಪನ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದ ಬಳಿಕ ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ಐಪಿಎಲ್ ಪಂದ್ಯಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ. ಒಂದೊಮ್ಮೆ ಆಟಗಾರರನ್ನು ಬುಕ್ಕಿಗಳು ಸಂಪರ್ಕಿಸಿದ ವಿಚಾರನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೇ ಹೋದರೆ ಈ ಆಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಬಿಸಿಸಿಐಗೆ ಇದೆ. ಸದ್ಯ ಸಿರಾಜ್ ಅವರು ತಕ್ಷಣ ಈ ವಿಚಾರವನ್ನು ಬಿಸಿಸಿಐಗೆ ತಿಳಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಆರ್ಸಿಬಿ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಆಡಲಿದೆ. ಈ ಪಂದ್ಯ ಏ.23 ರಂದು ನಡೆಯಲಿದೆ.