ಮೊಹಾಲಿ: ಶ್ರೀಲಂಕಾ ಕ್ರಿಕೆಟಿಗ ಭಾನುಕ ರಾಜಪಕ್ಷ ಅವರ ಅರ್ಧಶತಕದ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 191 ರನ್ ಬಾರಿಸಿದೆ. ಶನಿವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಸವಾಲೊಡ್ಡಿದೆ. ಕೆಕೆಆರ್ ಗೆಲುವಿಗೆ 192 ರನ್ ಬಾರಿಸಬೇಕಿದೆ.
ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡಕ್ಕೆ ನಾಯಕ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆದರೆ ಈ ಜೋಡಿ ಹೆಚ್ಚು ಕಾಲ ಕ್ರೀಸ್ನಲ್ಲಿ ಇರಲು ಟಿಮ್ ಸೌಥಿ ಬಿಡಲಿಲ್ಲ 23 ರನ್ ಗಳಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ವಿಕೆಟ್ ಕಿತ್ತು ಕೆಕೆಆರ್ಗೆ ಮೊದಲ ಯಶಸ್ಸು ತಂದು ಕೊಟ್ಟರು. ವಿಶೇಷವೆಂದರೆ ತಂಡದ ಮೊದಲ ವಿಕೆಟ್ನ 23ರನ್ ಪ್ರಭಾಸಿಮ್ರಾನ್ ಸಿಂಗ್ ಅವರೇ ಬಾರಿಸಿದರು. ಅಲ್ಲಿಯ ವರೆಗೆ ಧವನ್ ಖಾತೆ ತೆರೆದಿರಲಿಲ್ಲ. ಈ ವಿಕೆಟ್ ಪತನ ಬಳಿಕ ಆಡಲಿಳಿದ ಭಾನುಕ ರಾಜಪಕ್ಷ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದರು.
ಶಿಖರ್ ಧವನ್ ಜತೆಗೂಡಿ ಉತ್ತಮ ಇನಿಂಗ್ಸ್ ಕಟ್ಟಿದ ಭಾನುಕ ರಾಜಪಕ್ಷ ಅರ್ಧಶತಕ ಬಾರಿಸಿ ಮಿಂಚಿದರು. 32 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 50 ರನ್ಗಳಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ದ್ವಿತೀಯ ವಿಕೆಟ್ಗೆ ಧವನ್ ಮತ್ತು ರಾಜಪಕ್ಷ 86 ರನ್ಗಳ ಜತೆಯಾಟ ನಡೆಸಿತು.
ಶಿಖರ್ ಧವನ್ 29 ಎಸೆತ ಎದುರಿಸಿ 40 ರನ್ ಬಾರಿಸಿದರು. ಜಿತೇಶ್ ಶರ್ಮಾ 21 ರನ್ಗೆ ಆಟ ಮುಗಿಸಿದರು. ಧವನ್ ಮತ್ತು ರಾಜಪಕ್ಷ ವಿಕೆಟ್ ಪತನದ ಬಳಿಕ ಒಂದು ಹಂತದಲ್ಲಿ ಪಂಜಾಬ್ ತಂಡದ ಸ್ಕೋರ್ ವೇಗ ಕುಂಟಿತಗೊಂಡಿತು. ಆದರೆ ಅಂತಿಮ ಕ್ಷಣದಲ್ಲಿ ಬಿಸರುಸಿನ ಬ್ಯಾಟ್ ಬೀಸಿದ ಇಂಗ್ಲೆಂಡ್ ಟಿ20 ವಿಶ್ವ ಕಪ್ ತಂಡದ ಹೀರೊ ಸ್ಯಾಮ್ ಕರನ್ ಮತ್ತು ಜಿಂಬಾಬ್ವೆ ತಂಡದ ಅನುಭವಿ ಆಟಗಾರ ಸಿಕಂದರ್ ರಾಜಾ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿಕಂದರ್ ರಾಜಾ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ 19 ರನ್ ಬಾರಿಸಿದರು. ಇದು ಅವರ ಐಪಿಎಲ್ ಪದಾರ್ಪಣ ಪಂದ್ಯವಾಗಿದೆ. ಸ್ಯಾಮ್ ಕರನ್ 17 ಎಸೆತ ಎದುರಿಸಿ 26 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ IPL 2023: ಧೋನಿ ಗಾಯದ ಬಗ್ಗೆ ಮಾಹಿತಿ ನೀಡಿದ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್
ಕೆಕೆಆರ್ ಪರ ಉಮೇಶ್ ಯಾದವ್ ಒಂದು ವಿಕೆಟ್ ಕಿತ್ತರೂ 27 ರನ್ ಬಿಟ್ಟುಕೊಟ್ಟರು. ವರುಣ್ ಚಕ್ರವರ್ತಿ ಮತ್ತು ಸುನೀಲ್ ನಾರಾಯಣ್ ತಲಾ ಒಂದು ವಿಕೆಟ್ ಪಡೆದರು. ಟಿಮ್ ಸೌಥಿ 2 ವಿಕೆಟ್ ಕಲೆಹಾಕಿದರು. ಆದರೆ 54 ರನ್ ಬಿಟ್ಟುಕೊಟ್ಟು ದುಬಾರಿಯಾಗಿ ಕಂಡುಬಂದರು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ ಕಿಂಗ್ಸ್: 20 ಓವರ್ಗಳಲ್ಲಿ 5 ವಿಕೆಟ್ಗೆ 191 (ಶಿಖರ್ ಧವನ್ 40, ಭಾನುಕ ರಾಜಪ್ಷ 50, ಸ್ಯಾಮ್ ಕರನ್ ಅಜೇಯ 26, ಟಿಮ್ ಸೌಥಿ 54ಕ್ಕೆ 2, ಉಮೇಶ್ ಯಾದವ್ 27ಕ್ಕೆ 1)