ಚೆನ್ನೈ: ಜಾಸ್ ಬಟ್ಲರ್(52) ಅವರ ಸಮಯೋಜಿತ ಬ್ಯಾಟಿಂಗ್ ನರವಿನಿಂದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧದ ಐಪಿಎಲ್ನ 17ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) 175 ರನ್ ಕಲೆಹಾಕಿದೆ. ಧೋನಿ ಪಡೆ ಗೆಲುವಿಗೆ 176 ರನ್ ಬಾರಿಸಬೇಕಿದೆ. ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ.
ಕಳೆದ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಬಡಬಡನೆ 2 ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಕೇವಲ 10 ರನ್ಗಳಿಸಿ ತುಷರ್ ದೇಶ್ಪಾಂಡೆಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಾಜಸ್ಥಾನ್ ಆರಂಭಿಕ ಆಘಾತ ಕಂಡಿತು. ಆದರೆ ಬಳಿಕ ಆಡಲು ಬಂದ ದೇವದತ್ತ ಪಡಿಕ್ಕಲ್ ಅವರು ತೀಕ್ಷಣ ಅವರ ಎಸೆತದಲ್ಲಿ ಒಂದು ಜೀವಾದಾನ ಪಡೆದರು. ಸ್ಲಿಪ್ನಲ್ಲಿದ್ದ ಮೊಯಿನ್ ಅಲಿ ಅವರು ಈ ಸುಲಭದ ಕ್ಯಾಚ್ ಕೈಚೆಲ್ಲಿದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇವರಿಗೆ ಬಟ್ಲರ್ ಕೂಡ ಉತ್ತಮ ಸಾಥ್ ನೀಡಿದರು.
ಸತತ ಬೌಂಡರಿ ಬಾರಿಸಿ ಉತ್ತಮ ರನ್ ಕಲೆಹಾಕುತ್ತಿದ್ದ ಪಡಿಕ್ಕಲ್ ಅವರು ರವೀಂದ್ರ ಜಡೇಜಾ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಎಡವಿ, ಡೆವೋನ್ ಕಾನ್ವೆಗೆ ಕ್ಯಾಚ್ ನೀಡಿದರು. 26 ಎಸೆತ ಎದುರಿಸಿದ ಅವರು 38 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ದಾಖಲಾಯಿತು. ಬಟ್ಲರ್ ಮತ್ತು ಪಡಿಕ್ಕಲ್ ಜೋಡಿ ದ್ವಿತೀಯ ವಿಕೆಟ್ಗೆ 77 ರನ್ಗಳ ಅಮೂಲ್ಯ ಜತೆಯಾಟ ನಡೆಸಿತು.
ರಾಜಸ್ಥಾನ್ ಪರ ಕೆಟ್ಟ ದಾಖಲೆ ಬರೆದ ಸಂಜು
ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿಯೂ ಶೂನ್ಯ ಸುತ್ತಿದರು. ಇದರೊಂದಿಗೆ ರಾಜಸ್ಥಾನ್ ಪರ ಅತ್ಯಧಿಕ ಸೊನ್ನೆ ಸುತ್ತಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದರು. ಸಂಜು ರಾಜಸ್ಥಾನ್ ಪರ 8 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಶೇನ್ ವಾರ್ನ್ 7 ಬಾರಿ ಆರ್ಆರ್ ಪರ ಡಕ್ ಔಟ್ ಆಗಿದ್ದರು. ಇವರನ್ನು ಹಿಂದಿಕ್ಕಿ ಸಂಜು ಇದೀಗ ಮೊದಲ ಸ್ಥಾನ ಪಡೆದಿದ್ದಾರೆ. ಸ್ಟುವರ್ಟ್ ಬಿನ್ನಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 7 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.
ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಡೇವಿಡ್ ವಾರ್ನರ್
ಅರ್ಧಶತಕ ಬಾರಿಸಿದ ಜಾಸ್ ಬಟ್ಲರ್
ಆರಂಭಿಕ ಆಟಗಾರ ಜಾಸ್ ಬಟ್ಲರ್ ಅವರ ಬ್ಯಾಟಿಂಗ್ ಪ್ರತಾಪ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭದಿಂದಲೇ ಚೆನ್ನೈ ಬೌಲರ್ಗಳಿಗೆ ಕಾಡಿದ ಅವರು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜತೆಗೆ ಐಪಿಎಲ್ನಲ್ಲಿ ಮೂರು ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದರು. ಇನ್ನೊಂದು ಬದಿಯಲ್ಲಿ ಆರ್ ಅಶ್ವಿನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೂ ಕೂಡ ಮೊಯಿನ್ ಅಲಿ ಕ್ಯಾಚ್ ಬಿಟ್ಟು ಜಿವದಾನ ನೀಡಿದರು. ಇದರ ಪರಿಣಾಮ ಅಶ್ವಿನ್ 22 ಎಸೆತಗಳಿಂದ 30 ರನ್ ಚಚ್ಚಿದರು. ಇದರಲ್ಲಿ 2 ಸಿಕ್ಸರ್ ಒಳಗೊಂಡಿತು. ಇದು ಅವರಿಗೆ ತವರಿನ ಪಂದ್ಯವಾಗಿತ್ತು. ಅಶ್ವಿನ್ ವಿಕೆಟ್ ಪತನದ ಬೆನ್ನಲ್ಲೇ ಜಾಸ್ ಬಟ್ಲರ್ ಕೂಡ ಆಟ ಮುಗಿಸಿದರು. ಎರಡು ಕ್ಯಾಚ್ ಕೈಚೆಲ್ಲಿದ ಮೊಯಿನ್ ಅಲಿ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬಟ್ಲರ್ 36 ಎಸೆತ ಎದುರಿಸಿ 52 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಯಲ್ಪಟ್ಟಿತು.
ಅಂತಿಮ ಹಂತದಲ್ಲಿ ಸಿಡಿದು ನಿಂತ ವಿಂಡೀಸ್ನ ಎಡಗೈ ಆಟಗಾರ ಶಿಮ್ರಾನ್ ಹೆಟ್ಮೈರ್ ಅಜೇಯ 30 ರನ್ ಬಾರಿಸಿದರು. ಇವರ ಈ ಬಿರುಸಿನ ಬ್ಯಾಟಿಂಗ್ ನರೆವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಚೆನ್ನೈ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ನಾಲ್ಕು ಓವರ್ ಎಸೆದು 21 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು. ಉಳಿದಂತೆ ಆಕಾಶ್ ಸಿಂಗ್ ಮತ್ತು ತುಷಾರ್ ದೇಶ್ಪಾಂಡೆ ತಲಾ 2 ವಿಕೆಟ್ ಪಡೆದರು.
ಧೋನಿಗೆ ಸನ್ಮಾನ
ಮಹೇಂದ್ರ ಸಿಂಗ್ ಧೋನಿಗೆ ಇದು ಚೆನ್ನೈ ಪರ ನಾಯಕನಾಗಿ 200ನೇ ಐತಿಹಾಸಿಕ ಪಂದ್ಯವಾಗಿದೆ. ಈ ಮೂಲಕ ತಂಡವೊಂದರ ಪರ ಅತ್ಯಧಿಕ ನಾಯಕತ್ವ ವಹಿಸಿದ ಏಕೈಕ ನಾಯಕ ಎಂಬ ಹಿರಿಮೆಗೆ ಧೋನಿ ಪಾತ್ರರಾದರು. ಸ್ಮರಣೀಯ ಪಂದ್ಯವನ್ನಾಡಲು ಮೈದಾನಕ್ಕೆ ಇಳಿದ ಧೋನಿಗೆ ತಂಡದ ಮಾಲಿಕ ಎನ್. ಶ್ರೀನಿವಾಸನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 175 (ಜಾಸ್ ಬಟ್ಲರ್ 52, ದೆವದತ್ತ ಪಡಿಕ್ಕಲ್ 38, ಆರ್. ಅಶ್ವಿನ್ 30, ಶಿಮ್ರಾನ್ ಹೆಟ್ಮೈರ್ ಅಜೇಯ 30, ರವೀಂದ್ರ ಜಡೇಜಾ 21ಕ್ಕೆ 2, ತುಷಾರ್ ದೇಶ್ಪಾಂಡೆ 37ಕ್ಕೆ 2, ಆಕಾಶ್ ಸಿಂಗ್ 40ಕ್ಕೆ 2)