ಚೆನ್ನೈ: ತವರಿನ ‘ಎಲ್ಲೋ ಆರ್ಮಿ’ ಫ್ಯಾನ್ಸ್ ಸಮ್ಮುಖದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಮಣಿಸಿ, ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಚೆನ್ನೈ 10ನೇ ಬಾರಿ ಫೈನಲ್ ಪ್ರವೇಶಿಸಿದಂತಾಗಿದೆ.
ಸೋತ ಗುಜರಾತ್ ತಂಡ ಬುಧವಾರ ನಡೆಯುವ ಮುಂಬೈ ಮತ್ತು ಲಕ್ನೋ ವಿರುದ್ಧದ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್ನಲ್ಲಿ ಶುಕ್ರವಾರ ನಡೆಯಲಿದೆ. ಗುಜರಾತ್ ವಿರುದ್ಧ ಚೆನ್ನೈ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಈ ಹಿಂದೆ ಆಡಿದ್ದ ಮೂರು ಪಂದ್ಯಗಳಲ್ಲಿಯೂ ಧೋನಿ ಪಡೆ ಸೋಲು ಕಂಡಿತ್ತು.
ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಟ್ರ್ಯಾಕ್ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಜವಾಬಿತ್ತ ಗುಜರಾತ್ ತಂಡ ತನ್ನ ಪಾಲಿನ ಆಟದಲ್ಲಿ 157 ರನ್ಗಳಿಗೆ ಸರ್ವಪತನ ಕಂಡಿತು.
ಬೌಲಿಂಗ್ ಟ್ರ್ಯಾಕ್ನಲ್ಲಿ ಬೃಹತ್ ಮೊತ್ತದ ಗುರಿಯನ್ನು ಬೆನ್ನಟಿದ ಗುಜರಾತ್ಗೆ ದೀಪಕ್ ಚಹರ್ ಅವರು ಆರಂಭದಲ್ಲೇ ಆಘಾವಿಕ್ಕಿದರು. ವೃದ್ಧಿಮಾನ್ ಸಾಹ ಅವರ ವಿಕೆಟ್ ಕಿತ್ತರು. 22 ರನ್ಗೆ ಮೊದಲ ವಿಕೆಟ್ ಕಳೆದುಕೊಂಡು ಗುಜರಾತ್ ಆರಂಭಿಕ ಆಘಾತ ಎದುರಿಸಿತು. ಸಾಹಾ 15 ರನ್ ಬಾರಿಸಿದರು. ಈ ವಿಕೆಟ್ ಪತನದ ಬೆನ್ನಲೇ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕೈಚೆಲ್ಲಿದರು. 7 ಎಸೆತಗಳಲ್ಲಿ 8 ರನ್ ಗಳಿಸಿದರು. ಬಾರಿಸಿದ್ದು ಒಂದು ಬೌಂಡರಿ. ಇಲ್ಲಿಂದ ಗುಜರಾತ್ ಕುಸಿತವು ಆರಂಭವಾಯಿತು. ಡೇವಿಡ್ ಮಿಲ್ಲರ್, ದಸುನ್ ಶಣಕ, ರಾಹುಲ್ ತೆವಾಟಿಯಾ ಪೆವಿಲಿಯನ್ ಪರೇಡ್ ನಡೆಸಿದರು. ಇವರ ಗಳಿಕೆ ಕೇವಲ ಒಂದಂಕಿಗೆ ಸೀಮಿತವಾಯಿತು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಚೆನ್ನೈ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಶುಭಮನ್ ಗಿಲ್ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರದರ್ಶನ ತೋರಿದರು. ಆದರೆ ಇವರ ಆಟವೂ 42 ರನ್ಗೆ ಅಂತ್ಯಕಂಡಿತು. ಈ ವಿಕೆಟ್ ಪತನಗೊಂಡ ಕೂಡಲೇ ಗುಜರಾತ್ ತಂಡದ ಸೋಲು ಕೂಡ ಖಚಿತವಾಯಿತು. ಅಂತಿಮ ಹಂತದಲ್ಲಿ ವಿಜಯ್ ಶಂಕರ್ ಮತ್ತು ರಶೀದ್ ಖಾನ್ ಅವರು ಸಿಡಿದು ನಿಂತ ವೇಳೆ ಗುಜರಾತ್ ಗೆಲುವು ದಾಖಲಿಸುವ ಸೂಚನೆಯೊಂದು ಕಂಡುಬಂದಿತು. ಆದರೆ ಅಂತಿಮ ಎರಡು ಓವರ್ನಲ್ಲಿ ಚೆನ್ನೈ ತಂಡದ ಬೌಲರ್ಗಳು ಹಿಡಿತ ಸಾಧಿಸಿದ ಪರಿಣಾಮ ತಂಡ ಸೋಲು ಕಂಡಿತು. ರಶೀದ್ ಖಾನ್(30) ಗಳಿಸಿದರೆ, ವಿಜಯ್ ಶಂಕರ್ 14 ರನ್ ಬಾರಿಸಿ ಔಟಾದರು. ಚೆನ್ನೈ ಪರ ರವೀಂದ್ರ ಜಡೇಜಾ(2), ಮಹೀಶ್ ತೀಕ್ಷಣ(2), ದೀಪಕ್ ಚಹರ್(2) ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅರ್ಧಶತಕ ಬಾರಿಸಿ ಮಿಂಚಿದ ಗಾಯಕ್ವಾಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆದಿದ ಚೆನ್ನೈ ಪರ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಜೀವದಾನವೊಂದನ್ನು ಪಡೆದರು. ದರ್ಶನ್ ನಾಲ್ಕಂಡೆ ಅವರ ಮೊದಲ ಓವರ್ನ ದ್ವಿತೀಯ ಎಸೆತದಲ್ಲಿ ಗಾಯಕ್ವಾಡ್ ಅವರು ಗಿಲ್ಗೆ ಕ್ಯಾಚ್ ನೀಡಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಮುಖಮಾಡಿದ್ದರು. ಗುಜರಾತ್ ಪಾಳಯದಲ್ಲಿ ಸಂಭ್ರಮ ಏರ್ಪಟಿತು. ಆದರೆ ಕ್ಷಣ ಮಾತ್ರದಲ್ಲೇ ಅಂಪೈರ್ ಅವರು ನೋ ಬಾಲ್ ಸಿಗ್ನಲ್ ನೀಡಿದರು. ಗುಜರಾತ್ ತಂಡದ ಸಂಭ್ರಮ ಮಾಸಿ ಹೋಯಿತು. ಅತ್ತ ಗಾಯಕ್ವಾಡ್ ಮುಖದಲ್ಲಿ ಮಂದಹಾಸ ಮೂಡಿತು. ಈ ವೇಳೆ ಗಾಯಕ್ವಾಡ್ ಕೇವಲ 2 ರನ್ ಗಳಿಸಿದ್ದರು.
ಸಿಕ್ಕ ಅದೃಷ್ಟವನ್ನು ಎರಡೂ ಕೈಗಳಿಂದ ಬಾಚಿದ ಗಾಯಕ್ವಾಡ್ ಅವರು ಡೆವೋನ್ ಕಾನ್ವೆ ಜತೆಗೂಡಿ ಉತ್ತಮ ಆಟ ಪ್ರದರ್ಶಿಸಿದರು. ಉಭಯ ಆಟಗಾರರು ಗುಜರಾತ್ ಬೌಲರ್ಗಳಿಗೆ ಸರಿಯಾಗಿಯೇ ದಂಡಿಸಿ ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಒಟ್ಟುಗೂಡಿಸಿದರು. ಬಿರುಸಿನ ಆಟವಾಡಿದ ಗಾಯಕ್ವಾಡ್ ಅರ್ಧಶತಕವನ್ನು ಪೂರೈಸಿದರು. ಇದೇ ವೇಳೆ ವಿಶೇಷ ದಾಖಲೆಯೊಂದನ್ನು ಅವರು ತಮ್ಮ ಹೆಸರಿಗೆ ಬರೆದರು. ಇದು ಗಾಯಕ್ವಾಡ್ ಅವರು ಗುಜರಾತ್ ವಿರುದ್ಧ ಬಾರಿಸಿದ ನಾಲ್ಕನೇ ಅರ್ಧಶತಕವಾಗಿದೆ.
ಬೌಂಡರಿ, ಸಿಕ್ಸರ್ಗಳನ್ನು ಬಾರಿಸುತ್ತಾ ಶತಕದತ್ತ ಮುನ್ನುಗುತ್ತಿದ್ದ ಅವರ ಓಟಕ್ಕೆ ಅನುಭವಿ ಬೌಲರ್ ಮೋಹಿತ್ ಶರ್ಮ ಅವರು ಬ್ರೇಕ್ ಹಾಕಿದರು. ಸ್ಲೋ ಬಾಲ್ ಎಸೆದು ಲಾಂಗ್ ಆನ್ನಲ್ಲಿ ಕ್ಯಾಚ್ ನೀಡುವಂತೆ ಮಾಡಿದರು. ಮಿಲ್ಲರ್ ಅವರು ಈ ಕ್ಯಾಚ್ ಪಡೆದರು. 44 ಎಸೆತ ಎದುರಿಸಿದ ಗಾಯಕ್ವಾಡ್ ಭರ್ತಿ 60 ರನ್ ಬಾರಿಸಿದರು. ಡೆವೋನ್ ಕಾನ್ವೆ ಜತೆ ಮೊದಲ ವಿಕೆಟ್ಗೆ 87 ರನ್ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಕಳೆದ ಪಂದ್ಯದ ಹೀರೊ, ಡೇಂಜಸರ್ ಬ್ಯಾಟರ್ ಶಿವಂ ದುಬೆ ಅವರು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿಸುವಲ್ಲಿ ಎಡವಿದರು. ನೂರ್ ಅಹ್ಮದ್ ಅವರ ಸ್ನಿನ್ ಮೋಡಿಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾದ ಅವರು ಕ್ಲೀನ್ ಬೌಲ್ಡ್ ಆದರು. ಗಾಯಕ್ವಾಡ್ ವಿಕೆಟ್ ಪತನದ ಮೂರು ರನ್ ಅಂತರದಲ್ಲಿ ಈ ವಿಕೆಟ್ ಪತನಗೊಂಡಿತು. ದುಬೆ ಒಂದಂಕಿ ಮೊತ್ತಕ್ಕೆ ಸೀಮಿತರಾದರು.
ಇದನ್ನೂ ಓದಿ IPL 2023: ಮುಂದಿನ ಆವೃತ್ತಿಯಲ್ಲಿ ಈ ಆಟಗಾರರಿಗೆ ಆರ್ಸಿಬಿಯಲ್ಲಿ ಬಾಗಿಲು ಬಂದ್; ಪಟ್ಟಿ ಹೇಗಿದೆ?
90 ರನ್ಗೆ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾದ ಸಂದರ್ಭದಲ್ಲಿ ಎದೆಗುಂದದೆ ಬ್ಯಾಟಿಂಗ್ ನಡೆಸಿದ ಕಾನ್ವೆ 40 ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ವಿಕೆಟ್ ಶಮಿ ಪಾಲಾಯಿತು. ಈ ಮೂಲಕ ಶಮಿ ಅವರು ಕಾನ್ವೆ ಅವರನ್ನು ಐಪಿಎಲ್ನಲ್ಲಿ ಮೂರು ಬಾರಿ ಔಟ್ ಮಾಡಿದ ಸಾಧನೆ ಮಾಡಿದರು. ಈ ವಿಕೆಟ್ ಪತನದ ಬೆನ್ನಲ್ಲೇ ರಹಾನೆ ಕೂಡ ಆಟ ಮುಗಿಸಿದರು. ರಹಾನೆ ಗಳಿಕೆ 12 ರನ್.
ಇದನ್ನೂ ಓದಿ IPL 2023: ಲಕ್ನೋ-ಮುಂಬೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ
ಅಂತಿಮ ಹಂತದಲ್ಲಿ ಜಡೇಜಾ(22) ಸಿಡಿದು ನಿಂತ ಪರಿಣಾಮ ತಂಡ ದೊಡ್ಡ ಮೊತ್ತದ ರನ್ ಕಲೆಹಾಕಿತು. ಧೋನಿ ಅವರು ಮೊಯಿನ್ ಅಲಿಗಿಂತ ಮುನ್ನವೇ ಕ್ರೀಸ್ಗೆ ಇಳಿದರೂ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾದ್ಯವಾಗಲಿಲ್ಲ. ಮೋಹಿತ್ ಶರ್ಮ ಅವರ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಧೋನಿ ಎರಡು ಎಸೆತಗಳಿಂದ ಒಂದು ರನ್ ಗಳಿಸಿದರು. ಅಂತಿಮ ಓವರ್ನಲ್ಲಿ ಆಡಲು ಬಂದ ಮೊಯಿನ್ ಅಲಿ ಒಂದು ಸಿಕ್ಸರ್ ಬಾರಿಸಿ ಅಜೇಯರಾಗಿ ಉಳಿದರು. ಒಂದೊಮ್ಮೆ ಅವರು ಮೇಲಿನ ಕ್ರಮಾಂಕದಲ್ಲಿ ಆಡುತ್ತಿದ್ದರೆ ತಂಡ ಇನ್ನೂ ದೊಡ್ಡ ಮೊತ್ತ ದಾಖಲಿಸುವ ಸಾಧ್ಯತೆ ಇತ್ತು. ಗುಜರಾತ್ ಪರ ಬೌಲಿಂಗ್ನಲ್ಲಿ ಮೋಹಿತ್ ಶರ್ಮ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಕಿತ್ತರು.