Site icon Vistara News

IPL 2023: ಡೆಲ್ಲಿ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​

MA Chidambaram Stadium At Chennai

ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್​ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಾಯಕ ಮಹೇಂದ್ರ ಸಿಂಗ್​ ಧೋನಿ ಮತ್ತು ಜಡೇಜಾ ಅವರು ಕೊನೆಯ ಹಂತದಲ್ಲಿ ಸಿಡಿದು ನಿಂತ ಪರಿಣಾಮ ​ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಡೆಲ್ಲಿ ಪರ ಮಿಚೆಲ್​ ಮಾರ್ಷ್​(3) ಅಕ್ಷರ್​ ಪಟೇಲ್(2) ವಿಕೆಟ್​ ಕಿತ್ತು ಮಿಂಚಿದರು.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 167 ರನ್​ ಗಳಿಸಿ ಸವಾಲೊಡ್ಡಿದೆ. ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವಿಗೆ 168 ರನ್​ ಬಾರಿಸಬೇಕಿದೆ.​

ಇನಿಂಗ್ಸ್​ ಆರಂಭಿಸಿದ ಚೆನ್ನೈ ತಂಡ ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಋತುರಾಜ್​ ಗಾಯಕ್ವಾಡ್​(24), ಡೆವೋನ್​ ಕಾನ್ವೆ(10), ಅಜಿಂಕ್ಯ ರಹಾನೆ(21) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಸೇರಿದರು. ಆರಂಭಿಕರಿಬ್ಬರ ವಿಕೆಟ್​ ಅಕ್ಷರ್​ ಪಟೇಲ್​ ಪಾಲಾದರೆ, ರಹಾನೆ ವಿಕೆಟ್​ ಕುಲ್​ದೀಪ್​ ಕಿತ್ತರು. ಅರ್ಧದಾರಿ ಕ್ರಮಿಸುವ ವೇಳೆಗೆ ಚೆನ್ನೈ ಶೋಚನೀಯ ಸ್ಥಿತಿಗೆ ತಲುಪಿತು. ಮೊಯಿನ್​ ಅಲಿ ಕೂಡ 7 ರನ್​ಗೆ ಆಟ ಮುಗಿಸಿದರು.

ಶಿವಂ ದುಬೆ ಅವರು ಬಡಬಡನೆ ಮೂರು ಸಿಕ್ಸರ್​ ಸಿಡಿಸುವ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದರೂ ಅವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 12 ಎಸೆತಗಳಲ್ಲಿ 25 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ವೃತ್ತಿಜೀವನದ 200ನೇ ಐಪಿಎಲ್​ ಪಂದ್ಯದಲ್ಲಿ ಆಡಲಿಳಿದ ಅಂಬಾಟಿ ರಾಯುಡು ಅವರು ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟ​ ನಡೆಸುವ ಮೂಲಕ 23 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ನಾಯಕ ಎಂ.ಎಸ್​ ಧೋನಿ ಅವರು ಬಿರುಸಿನ ಬ್ಯಾಟಿಂಗ್​ ನಡೆಸಿದ ಪರಿಣಾಮ ಚೆನ್ನೈ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

17 ಓವರ್​ ತನಕ ಉತ್ತಮ ಬೌಲಿಂಗ್​ ಕಾಯ್ದುಕೊಂಡಿದ್ದ ಡೆಲ್ಲಿ ಬೌಲರ್​ಗಳಿಗೆ ಧೋನಿ ಮತ್ತು ಜಡೇಜಾ ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಿದರು. ಜಡೇಜಾ 21 ರನ್​ ಗಳಿಸಿದರೆ, ಧೋನಿ ಅವರು 9 ಎಸೆತಗಳಲ್ಲಿ 20 ರನ್​ ಬಾರಿಸಿದರು. ಡೆಲ್ಲಿ ಪರ ಮಿಚೆಲ್​ ಮಾರ್ಷ್​ ಅವರು ಮೂರು ಓವರ್​ ಬೌಲಿಂಗ್​ ನಡೆಸಿ ಕೇವಲ 18 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಉಡಾಯಿಸಿದರು.

ಇದನ್ನೂ ಓದಿ IPL 2023: ಸೂರ್ಯಕುಮಾರ್​ ಬ್ಯಾಟಿಂಗ್​ಗೆ ವಿಶೇಷ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಗವಾಸ್ಕರ್​​

ಪಂದ್ಯ ವೀಕ್ಷಿಸಿದ ಬೊಮ್ಮನ್-ಬೆಳ್ಳಿ ದಂಪತಿ

ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್‌ʼ (The Elephant Whisperers)ನಲ್ಲಿ ನಟಿಸಿದ ಸ್ಥಳೀಯ ದಂಪತಿ ಬೊಮ್ಮನ್(Bomman) ಮತ್ತು ಬೆಳ್ಳಿ(Bellie) ಅವರು ಈ ಪಂದ್ಯಕ್ಕೆ ಸಾಕ್ಷಿಯಾದರು. ಜತೆಗೆ ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಕೂಡ ಉಪಸ್ಥಿತರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಈ ಮೂವರು ಅತಿಥಿಗಳಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಪರವಾಗಿ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ತಂಡದ ಜೆರ್ಸಿಯನ್ನು ನೀಡಿ ಗೌರವಿಸಿದರು. ಸ್ಮರಣಿಕೆ ನೀಡಿದ ಬಳಿಕ ಧೋನಿ ಕೆಲ ಕಾಲ ಈ ದಂಪತಿಗಳೊಂದಿಗೆ ಕುಶಲೋಪರಿ ನಡೆಸಿದರು.

Exit mobile version