ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಧೋನಿ ಪಡೆ ಈ ಗೆಲುವಿನೊಂದಿಗೆ 13 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.
4 ವರ್ಷಗಳ ಬಳಿಕ ಇತ್ತಂಡಗಳ ನಡುವೆ ಚೆನ್ನೈಯಲ್ಲಿ ನಡೆದ ಮುಖಾಮುಖಿ ಇದಾಗಿತ್ತು. 2019ರಲ್ಲಿ ಇಲ್ಲಿ ನಡೆದಿದ್ದ ಎರಡೂ ಪಂದ್ಯದಲ್ಲಿಯೂ ಮುಂಬೈ ಜಯ ಸಾಧಿಸಿತ್ತು. ಇದೀಗ 4 ವರ್ಷಗಳ ಬಳಿಕ ಈ ಸೋಲಿಗೆ ಚೆನ್ನೈ ಸೇಡು ತೀರಿಸಿಕೊಂಡಿದೆ. ಜತೆಗೆ ಚೆನ್ನೈ ಈ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಆಡಿದ 2 ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿತು.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 139 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 17.4 ಓವರ್ಗಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈಗೆ ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಉತ್ತಮ ಆರಂಭ ಒದಗಿಸಿದರು. ಓವರ್ಗೆ 10 ಸರಾಸರಿಯಲ್ಲಿ ಬ್ಯಾಟ್ ಬೀಸಿದ ಉಭಯ ಆಟಗಾರರು ನಾಲ್ಕು ಓವರ್ ಮುಕ್ತಾಯಕ್ಕೆ 46 ರನ್ ಒಟ್ಟುಗೂಡಿಸಿದರು. ಇದೇ ವೇಳೆ 30 ರನ್ ಗಳಿಸಿದ್ದ ಗಾಯಕ್ವಾಡ್ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಸ್ಪಿನ್ ಮೋಡಿಗೆ ಸಿಲುಕಿ ವಿಕೆಟ್ ಕೈಚೆಲ್ಲಿದರು. ರಹಾನೆ 21 ರನ್ಗಳ ಕೊಡುಗೆ ನೀಡಿದರು.
ರಹಾನೆ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಂಬಾಟಿ ರಾಯುಡು ಅವರು ಒಂದು ಸಿಕ್ಸರ್ ಬಾರಿಸಿ 12ರನ್ಗೆ ಔಟಾದರು. ಆದರೆ ಎಡಗೈ ಬ್ಯಾಟರ್ ಡೆವೋನ್ ಕಾನ್ವೆ ಮತ್ತು ಶಿವಂ ದುಬೆ ಅವರು ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಅದರಲ್ಲೂ ದುಬೆ ಅವರ ಆಟ ಕೊಂಚ ಆಕ್ರಮಣಕಾರಿಯಾಗಿತ್ತು. ಮೂರು ಸಿಕ್ಸರ್ ನೆರವಿನಿಂದ ಅಜೇಯ 26 ರನ್ ಬಾರಿಸಿದರು. ಕಾನ್ವೆ ಅವರು 42 ಎಸೆತದಿಂದ 44 ರನ್ ಬಾರಿಸಿ ಔಟಾದರು. 6 ರನ್ ಅಂತರದಿಂದ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಅಂತಿಮವಾಗಿ ಎಂ.ಎಸ್ ಧೋನಿ ಅವರು ಅಜೇಯ 2 ರನ್ ಬಾರಿಸಿ ತಂಡದ ಗೆಲುವನ್ನು ಸಾರಿದರು.
ಮುಂಬೈಗೆ ಆರಂಭಿಕ ಆಘಾತ
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಮುಂಬೈಗೆ ದೀಪಕ್ ಚಹರ್ ಮತ್ತು ತುಷಾರ್ ದೇಶ್ಪಾಂಡೆ ಸೇರಿಕೊಂಡು ಆರಂಭಿಕ ಆಘಾತ ನೀಡಿದರು. ಅಗ್ರ ಕ್ರಮಾಂಕದ ಆಟಗಾರರಾದ ಇಶಾನ್ ಕಿಶನ್(7), ಕ್ಯಾಮರೂನ್ ಗ್ರೀನ್(6), ನಾಯಕ ರೋಹಿತ್ ಶರ್ಮ(0) ವಿಕೆಟ್ ಕಿತ್ತು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡರು. ತಂಡದ ಮೊತ್ತ 14 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ತಲುಪಿತು.
ಪ್ರಯೋಗ ಮಾಡಲು ಮುಂದಾಗಿ ಬ್ಯಾಟಿಂಗ್ ಭಡ್ತಿ ಪಡೆದು ಬಂದ ಹಾರ್ಡ್ ಹಿಟ್ಟರ್ ಕ್ಯಾಮರೂನ್ ಗ್ರೀನ್ ಅಗ್ಗಕ್ಕೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಬಳಿಕ ಬಂದ ರೋಹಿತ್ ಶರ್ಮ ಕೂಡ ಖಾತೆ ತೆರೆಯುವಲ್ಲಿ ವಿಫಲರಾದರು. ಶೂನ್ಯಕ್ಕೆ ಔಟಾಗುವ ಮೂಲಕ ಅವರು ಐಪಿಎಲ್ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಒಟ್ಟು 16ನೇ ಬಾರಿಗೆ ರೋಹಿತ್ ಅವರು ಡಕೌಟ್ ಆಗುವ ಮೂಲಕ ಸುನೀಲ್ ನಾರಾಯಣ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಸುನೀಲ್ ನಾರಾಯಣ್ ಅವರು 15 ಬಾರಿ ಶೂನ್ಯ ಸುತ್ತಿದ್ದರು. ಇದೀಗ ಅವರನ್ನು ಹಿಂದಿಕ್ಕಿ ರೋಹಿತ್ ಅಗ್ರಸ್ಥಾನ ಪಡೆದಿದ್ದಾರೆ.
ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದ ವದೇರಾ
ನಂಬುಗೆಯ ಬ್ಯಾಟರ್ಗಳೆಲ್ಲ ಅಗ್ಗಕ್ಕೆ ಔಟಾದಾಗ ಚೆನ್ನೈ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಯುವ ಬ್ಯಾಟರ್ ನೆಹಾಲ್ ವದೇರಾ ಅವರು ಚೊಚ್ಚಲ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಕೊಂಚ ಹೊತ್ತು ಸೂರ್ಯಕುಮಾರ್ ಯಾದವ್ ಸಾಥ್ ನೀಡಿದರು. ಸೂರ್ಯಕುಮಾರ್ ಮೂರು ಬೌಂಡರಿ ನೆರವಿನಿಂದ 26 ರನ್ ಗಳಿಸಿ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಜೋಡಿ 4ನೇ ವಿಕೆಟ್ಗೆ 55 ರನ್ ಒಟ್ಟುಗೂಡಿಸಿತು.
ಸೂರ್ಯಕುಮಾರ್ ಯಾದವ್ ವಿಕೆಟ್ ಪತನದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ನೆಹಾಲ್ ವದೇರಾ 64 ರನ್ ಗಳಿಸಿ ಔಟಾದರು. ಅವರ ಈ ಇನಿಂಗ್ಸ್ನಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿ ದಾಖಲಾಯಿತು. ಗಾಯದಿಂದಾಗಿ ಹಲವು ಪಂದ್ಯಗಳಿಂದ ಹೊರಗುಳಿದಿದ್ದ ದೀಪಕ್ ಚಹರ್ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಉತ್ತಮ ಕಮ್ಬ್ಯಾಕ್ ಮಾಡಿದರು. ಮೂರು ಓವರ್ ಎಸೆದ ಅವರು ಕೇವಲ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಇದನ್ನೂ ಓದಿ IPL 2023: ದುರ್ಬಲ ಸನ್ರೈಸರ್ಸ್ಗೆ ರಾಜಸ್ಥಾನ್ ಸವಾಲು
ಶಿವಂ ದುಬೆ ಅವರಿಂದ ಜೀವದಾನ ಪಡೆದ ಟ್ರಿಸ್ಟಾನ್ ಸ್ಟಬ್ಸ್ ಅಂತಿಮ ಹಂತದಲ್ಲಿ 20 ರನ್ ಗಳಿಸಿದರು. ಅವರ ಈ ಸಣ್ಣ ಹೋರಾಟದ ನೆರವಿನಿಂದ ತಂಡ 130 ರನ್ಗಳ ಗಡಿ ದಾಟಿತು. ಚೆನ್ನೈ ಪರ ಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರಂತೆಯೇ ಸ್ಲಿಂಗ್ಲಿಂಗ್ ಬೌಲಿಂಗ್ ನಡೆಸುವ ಮತೀಶ ಪತಿರಣ ಅವರು ನಾಲ್ಕು ಓವರ್ ಎಸೆದು ಕೇವಲ 15 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ತುಷಾರ್ ದೇಶ್ಪಾಂಡೆ 2 ವಿಕೆಟ್ ಉರುಳಿಸಿದರು. ಮುಂಬೈ ಪರ ಮೂರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಆಟಗಾರರು ಒಂದಂಕಿಗೆ ಸೀಮಿತಗೊಂಡರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 8 ವಿಕೆಟ್ಗೆ 139(ನೆಹಾಲ್ ವದೇರಾ 64, ಸೂರ್ಯಕುಮಾರ್ ಯಾದವ್ 26, ಮತೀಶ ಪತಿರಣ 15ಕ್ಕೆ 3, ದೀಪಕ್ ಚಹರ್ 18ಕ್ಕೆ 2, ತುಷಾರ್ ದೇಶ್ಪಾಂಡೆ 26ಕ್ಕೆ 2).
ಚೆನ್ನೈ ಸೂಪರ್ ಕಿಂಗ್ಸ್: 17.4 ಓವರ್ಗಳಲ್ಲಿ 4 ವಿಕೆಟ್ಗೆ 140( ಡೆವೋನ್ ಕಾನ್ವೆ 44, ಗಾಯಕ್ವಾಡ್ 30, ಶಿವಂ ದುಬೆ ಅಜೇಯ 26, ಪಿಯೂಷ್ ಚಾವ್ಲಾ 25ಕ್ಕೆ 2).