Site icon Vistara News

IPL 2023: ಕೋವಿಡ್​ ಮಾರ್ಗಸೂಚಿ ಪಾಲನೆ ಕಡ್ಡಾಯ; ಐಪಿಎಲ್​ ಫ್ರಾಂಚೈಸಿಗಳಿಗೆ ಬಿಸಿಸಿಐ ಆದೇಶ

IPL 2023: Compliance with Covid guidelines mandatory; BCCI order for IPL franchisee

IPL 2023: Compliance with Covid guidelines mandatory; BCCI order for IPL franchisee

ಮುಂಬಯಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​(IPL 2023) ಆರಂಭಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ದೇಶದಲ್ಲಿ ಕೊರೊನಾ ಭಿನ್ನ ತಳಿಯ ರೂಪಾಂತರ ವೈರಸ್​ಗಳ ಕೇಸ್​ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಐಪಿಎಲ್​ನ ಎಲ್ಲ ಫ್ರಾಂಚೈಸಿಗಳು ಕೊರೊನಾ(COVID-19) ಮಾರ್ಗಸೂಚಿಗೆ ಬದ್ಧವಾಗಿರಬೇಕು ಎಂದು ಬಿಸಿಸಿಐ(BCCI) ಸ್ಪಷ್ಟ ಸಂದೇಶ ನೀಡಿದೆ. ಈಗಾಗಲೇ ಐಪಿಎಲ್​ ಆಡಳಿತ ಮಂಡಳಿ ಕೋವಿಡ್​ ಮಾರ್ಗಸೂಚಿಯನ್ನು(COVID-19 guidelines) ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಬುಧವಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್-19(COVID-19) ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ವಿಭಿನ್ನ ತಳಿಯ ರೂಪಾಂತರ ವೈರಸ್​ಗಳ ಕೇಸ್ ಭಾರತದ ಕೆಲ ನಗರಗಳಲ್ಲಿ​ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಕೆಲವು ರಾಜ್ಯಗಳಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಈ ನಿಯವನ್ನು ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳು ಪಾಲಿಸಬೇಕು ಎಂದು ಬಿಸಿಸಿಐ ತಿಳಿಸಿದೆ. ಒಂದೊಮ್ಮೆ ಈ ನಿಯವನ್ನು ಪಾಲಿಸದೇ ಇದ್ದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಘಟಕರಿಗೆ ಬಿಸಿಸಿಐ ಆದೇಶದಲ್ಲಿ ತಿಳಿಸಿದೆ.

ಮಾರ್ಗಸೂಚಿಯ ಪ್ರಕಾರ ಐಪಿಎಲ್​ ಆಡುವ ವೇಳೆ ಯಾವುದೇ ಆಟಗಾರನಿಗೆ ಅಥವಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದರೆ ಕೂಡಲೇ ಅವರು ತಂಡವನ್ನು ತೊರೆಯಬೇಕು. ಜತೆಗೆ ಒಂದು ವಾರಗಳ ಕಾಲ ಕ್ವಾರಂಟೈನ್​ವಾಸದಲ್ಲಿರಬೇಕು.

ಇದನ್ನೂ ಓದಿ IPL 2023: ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮತ್ತೆ ಚಿಂತೆಯಾದ ಬೆನ್​ ಸ್ಟೋಕ್ಸ್​ ಫಿಟ್​ನೆಸ್​

ಕೋವಿಡ್ ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್​ ಐದನೇ ದಿನ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್​ನ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಈ ಬಾರಿ ಬಯೋ ಬಬಲ್​ ಇಲ್ಲದಿದ್ದರೂ ಆಟಗಾರರು ಅಭಿಮಾನಿಗಳೊಂದಿಗೆ ಸಂವಹನವನ್ನು ಮಿತಿಗೊಳಿಸಬೇಕು ಎಂದು ಆಟಗಾರರಿಗೆ ಬಿಸಿಸಿಐ ಸಲಹೆ ನೀಡಿದೆ. ಎಲ್ಲ ಆಟಗಾರರ ಮೇಲು ತಂಡಗಳ ವೈದ್ಯರು ಹೆಚ್ಚಿನ ನಿಗಾ ಇರಿಸಬೇಕು. ಒಂದೊಮ್ಮೆ ಆಟಗಾರರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದರೂ ಅವರನ್ನು ತಕ್ಷಣ ಪ್ರತ್ಯೇಕ ವಾಸದಲ್ಲಿರುವಂತೆ ಮಾಡಬೇಕು ಎಂದು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.

Exit mobile version