ಅಹಮದಾಬಾದ್: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಐಪಿಎಲ್ ಆರಂಭಗೊಂಡು 15 ವರ್ಷ ಉರುಳಿದೆ. ಇದೀಗ 16ನೇ ಆವೃತ್ತಿಗೆ(IPL 2023) ಕಾಲಿರಿಸಿದೆ. ಕೊರೊನಾದ ಬಳಿಕ ಈ ಬಾರಿ ಟೂರ್ನಿ ಭಾರತದಲ್ಲಿ ತನ್ನ ಮೊದಲ ಸ್ವರೂಪದಲ್ಲೇ ನಡೆಯಲಿದೆ. ಕಳೆದ ಎರಡು ಆವೃತ್ತಿಗಳೂ ಕೊರೊನಾ ನಿರ್ಬಂಧಗಳಿಂದಾಗಿ ಅಷ್ಟಾಗಿ ಸಂಭ್ರಮದಲ್ಲಿ ಟೂರ್ನಿಯನ್ನು ನಡೆಸಲಾಗಿರಲಿಲ್ಲ. ಆದರೆ ಈ ಬಾರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಎಲ್ಲ ಸಿದ್ಧತೆ ನಡೆಸಿದೆ.
ರಶ್ಮಿಕಾ ಮಂದಣ್ಣ- ತಮನ್ನಾ ಭಾಟಿಯ ಭಾಗಿ
ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಉದ್ಘಾಟನಾ ಸಮಾರಂಭ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ನಡೆಯುತ್ತಿದೆ. ಈ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamanna Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ ಎಂದು ವರದಿಯಾಗಿದೆ. ಈ ಉದ್ಘಾಟನಾ ಸಮಾರಂಭ ಭಾರತದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31 ರಂದು ನಡೆಯಲಿದೆ.
ಎಂ.ಎಸ್ ಧೋನಿ vs ಹಾರ್ದಿಕ್ ಪಾಂಡ್ಯ
ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(hardik pandya) ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಧೋನಿ(MS Dhoni) ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯ ಶುಕ್ರವಾರ ಅಹಮದಾಬಾದ್ನಲ್ಲಿ ನಡೆಯಲಿದೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ಪಾಂಡ್ಯ ಪಡೆ ಚೆನ್ನೈ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿತ್ತು. ಮೊದಲ ಪಂದ್ಯ 3 ವಿಕೆಟ್ನಿಂದ ಗೆದ್ದರೆ, ದ್ವಿತೀಯ ಪಂದ್ಯ 7 ವಿಕೆಟ್ಗಳಿಂದ ಗೆದ್ದಿತ್ತು.
ಇದನ್ನೂ ಓದಿ IPL 2023: ಅನ್ ಸೋಲ್ಡ್ ಆಗಿದ್ದ ಸ್ಟೀವನ್ ಸ್ಮಿತ್ ಮತ್ತೆ ಐಪಿಎಲ್ಗೆ ಎಂಟ್ರಿ
ಗಾಯದ ಸಮಸ್ಯೆ
ಕಳೆದ 15 ಆವೃತ್ತಿಯ ಐಪಿಎಲ್ನಲ್ಲಿ ಇಷ್ಟು ದೊಡ್ಡ ಮಟ್ಟದ ಗಾಯದ ಸಮಸ್ಯೆ ಕಾಡಿಲ್ಲ. ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಸ್ಟಾರ್ ಆಟಗಾರರು ಈ ಬಾರಿ ಗಾಯದಿಂದ ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಇಂಜುರಿ ಲೀಗ್ ಎಂದೇ ಕರೆಯಲಾಗುತ್ತಿದೆ. ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಜಾನಿ ಬೇರ್ಸ್ಟೋ, ಪ್ರಸಿದ್ಧ್ ಕೃಷ್ಣ ಸೇರಿ ಹಲವು ಆಟಗಾರರು ಗಾಯದಿಂದ ಅಲಭ್ಯರಾಗಿದ್ದಾರೆ.
ಧೋನಿಗೆ ವಿದಾಯ ಕೂಟ ಸಾಧ್ಯತೆ
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ. ಮೆ.14 ರಂದು ಕೆಕೆಆರ್ ವಿರುದ್ಧದ ಪಂದ್ಯವು ಸಿಎಸ್ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ Team Leaders Of IPL 2023: ಐಪಿಎಲ್ 2023ನೇ ಆವೃತ್ತಿಯ ತಂಡಗಳ ನಾಯಕರು ಇವರು
ಈ ಹಿಂದೆಯೇ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಣಕ್ಕಿಳಿಯುವ ಮೂಲಕ ಧೋನಿ ಐಪಿಎಲ್ಗೆ ಗುಡ್ ಬೈ ಹೇಳಲು ಇಚ್ಛಿಸಿರುವುದಾಗಿ ತಿಳಿಸಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಕಳೆದ ಮೂರು ಸೀಸನ್ನಲ್ಲಿ ತವರು ಮೈದಾನದಲ್ಲಿ ಪಂದ್ಯಗಳು ನಡೆದಿರಲಿಲ್ಲ. ಆದರೆ ಈ ಬಾರಿ ಇಲ್ಲಿ ಪಂದ್ಯ ನಡೆಯಲಿದೆ. ಹೀಗಾಗಿ ಧೋನಿ ಈ ಬಾರಿ ವಿದಾಯ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಕೃತ ಮಾಹಿತಿ ನೀಡಿಲ್ಲ.