ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್(Rishabh Pant) 2023ರ ಐಪಿಎಲ್‌ನಿಂದ(IPL 2023) ಹೊರಗುಳಿದ ಹಿನ್ನೆಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್(David Warner) ನಾಯಕತ್ವ ವಹಿಸಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಈ ಹಿಂದೆಯೇ ಪಂತ್ ಅವರು ಐಪಿಎಲ್ ಆಡುವುದಿಲ್ಲ ಎಂದು ಖಚಿತಪಡಿಸಿದ್ದರು. ಇದಾದ ಬಳಿಕ ಫ್ರಾಂಚೈಸಿ ಸೂಕ್ತ ನಾಯಕನ ಹುಡುಕಾಟದಲ್ಲಿ ತೊಡಗಿತ್ತು. ಅದಾಗಲೇ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅಧಿಕೃತಗೊಂಡಿದೆ.
ವಾರ್ನರ್ ಅವರು ತಂಡದ ನಾಯಕತ್ವ ವಹಿಸಿಕೊಂಡ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸಿ ಟ್ವಿಟರ್ ಮೂಲಕ ಅಧಿಕೃತಗೊಳಿಸಿದೆ. ಜತೆಗೆ ಟೀಮ್ ಇಂಡಿಯಾದ ಆಲ್ರೌಂಡರ್ ಅಕ್ಷರ್ ಪಟೇಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ IPL 2023 : ಜಿಯೊ ಸಿನಿಮಾಗೆ ಸೂರ್ಯಕುಮಾರ್ ಯಾದವ್ ಬ್ರ್ಯಾಂಡ್ ಅಂಬಾಸಿಡರ್
ಡೇವಿಡ್ ವಾರ್ನರ್ ಈಗಾಗಲೇ ಐಪಿಎಲ್ನಲ್ಲಿ ನಾಯಕತ್ವವಹಿಸಿರುವ ಅನುಭವ ಹೊಂದಿದ್ದಾರೆ. 2016ರಲ್ಲಿ ಅವರ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ಬಳಿಕ ಅವರ ನಾಯಕತ್ವದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಇದೇ ಕಾರಣದಿಂದ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್ಗೆ ನಾಯಕನ ಪಟ್ಟ ನೀಡಲಾಗಿತ್ತು.