ಲಕ್ನೋ: ಆರಂಭದಲ್ಲಿ ಕೈಲ್ ಮೇಯರ್ಸ್ ಮತ್ತು ನಿಕೋಲಸ್ ಪೂರನ್ ಬ್ಯಾಟಿಂಗ್ ಅಬ್ಬರ ಆ ಬಳಿಕ ಮಾರ್ಕ್ ವುಡ್ ಅವರ ಫಾತಕ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್(Lucknow Super Giants) ಭರ್ಜರಿ 50 ರನ್ಗಳ ಗೆಲುವು ಸಾಧಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ನ(IPL 2023) ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್‌ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿತು. ಜವಾಬಿತ್ತ ಡೆಲ್ಲಿ ಉತ್ತಮ ಆರಂಭ ಪಡೆದ ಹೊರಾತಾಗಿಯೂ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ ಶರಣಾಯಿತು.
ಮಾರ್ಕ್ ವುಡ್ ದಾಳಿಗೆ ಕುಸಿದ ಡೆಲ್ಲಿ
ದೊಡ್ಡ ಮೊತ್ತವನ್ನು ಬೆನ್ನಟಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ನಾಯಕ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಲಾರಂಭಿಸಿದರು. ಇವರ ಬ್ಯಾಟಿಂಗ್ ವೇಗವನ್ನು ನೋಡುವಾಗ ಈ ಮೊತ್ತವನ್ನು ಸಲೀಸಾಗಿ ಚೇಸ್ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ ಇವರ ಜತೆಯಾಟಕ್ಕೆ ಮಾರ್ಕ್ ವುಡ್(Mark Wood) ತಾನೆಸೆದ ಮೊದಲ ಓವರ್ನಲ್ಲಿಯೇ ಬ್ರೇಕ್ ಹಾಕಿದರು. ಪೃಥ್ವಿ ಶಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆದರೆ ವುಡ್ ಅವರ ವಿಕೆಟ್ ಬೇಟೆ ಇಲ್ಲಿಗೆ ನಿಲ್ಲಲಿಲ್ಲ, ಮುಂದಿನ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಮಿಚೆಲ್ ಮಾರ್ಷ್ ಅವರನ್ನು ಬೌಲ್ಡ್ ಮಾಡಿ ಡೆಲ್ಲಿಗೆ ಅವಳಿ ಆಘಾತವಿಕ್ಕಿದರು. ಮಾರ್ಷ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಇಲ್ಲಿಗೆ ಲಕ್ನೋ ಕೈ ಮೇಲಾಯಿತು. ಪೃಥ್ವಿ ಶಾ ಮತ್ತು ವಾರ್ನರ್ ಮೊದಲ ವಿಕೆಟ್ಗೆ 41 ರನ್ ಒಟ್ಟುಗೂಡಿಸಿದರು.
ಆರಂಭಿಕರಿಬ್ಬರ ವಿಕೆಟ್ ಕಿತ್ತ ಮಾರ್ಕ್ ವುಡ್ ಮುಂದಿನ ಓವರ್ನಲ್ಲಿ ಸರ್ಫರಾಜ್ ಖಾನ್ ವಿಕೆಟ್ ಬೇಟೆಯಾಡಿದರು. ಅಲ್ಲಿಗೆ ಆರಂಭದ ಮೂರೂ ವಿಕೆಟ್ ಕೂಡ ವುಡ್ ಪಾಲಾಯಿತು. ಕಳದೆ ಬಾರಿ ಗಾಯದಿಂದಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳದ ಅವರು ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸುವ ಮೂಲಕ ಗ್ರೇಟ್ ಕಮ್ಬ್ಯಾಕ್ ಮಾಡಿದರು. ಡೆಲ್ಲಿ 48ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಂಬುಗೆಯ ಬ್ಯಾಟರ್ಗಳೆಲ್ಲ ಕೈಕೊಟ್ಟರೂ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತ ನಾಯಕ ಡೇವಿಡ್ ವಾರ್ನರ್, ಲಕ್ನೋ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಇನಿಂಗ್ಸ್ ಬೆಳೆಸಿದರು. ಇದೇ ವೇಳೆ ಅರ್ಧಶತಕವನ್ನೂ ಪೂರೈಸಿದರು. ಅಂತಿಮ ನಾಲ್ಕು ಓವರ್ನಲ್ಲಿ ದೊಡ್ಡ ಮೊತ್ತ ಬೆನ್ನಟ್ಟುವ ಸವಾಲು ಎದುರಾದಾಗ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ವಾರ್ನರ್ ಆವೇಶ್ ಖಾನ್ ಅವರ ಎಸತಕ್ಕೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಎಡವಿ ಕೆ.ಗೌತಮ್ಗೆ ಕ್ಯಾಚ್ ನೀಡಿ ಔಟಾದರು. ಈ ಬೀಳುತ್ತಿದ್ದಂತೆ ಡೆಲ್ಲಿಯ ಸೋಲು ಕೂಡ ಖಚಿತಗೊಂಡಿತು. ವಾರ್ನರ್ 7 ಬೌಂಡರಿ ನೆರೆವಿನಿಂದ 56 ರನ್ ಬಾರಿಸಿದರು. ವಾರ್ನರ್ ಹೊರತು ಪಡಿಸಿ ರಿಲೀ ರೊಸೊ 30 ರನ್ ಗಳಿಸಿದರು. ಲಕ್ನೋ ಪರ ಜಯ್ದೇವ್ ಉನಾದ್ಕತ್ ದುಬಾರಿಯಾಗಿ ಕಂಡು ಬಂದರು. 3 ಓವರ್ನಲ್ಲಿ 39 ರನ್ ಬಿಟ್ಟುಕೊಟ್ಟು ವಿಕೆಟ್ ಲೆಸ್ ಎನಿಸಿಕೊಂಡರು. ಇದರಲ್ಲಿ ಆರು ವೇಡ್ ಸೇರಿತ್ತು. ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಕಿತ್ತರು. ಮಾರ್ಕ್ ವುಡ್ ನಾಲ್ಕು ಓವರ್ಗೆ ಕೇವಲ 14 ರನ್ ಬಿಟ್ಟು ಕೊಟ್ಟು 5 ವಿಕೆಟ್ ಉಡಾಯಿಸಿದರು.
ಇದನ್ನೂ ಓದಿ IPL 2023: ಆರ್ಸಿಬಿ-ಮುಂಬೈ ವಿರುದ್ಧದ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?
ಸಿಕ್ಸರ್ಗಳ ಸುರಿಮಳೆ ಸುರಿಸಿದ ಮೇಯರ್ಸ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಲಕ್ನೋ ತಂಡದ ಪರ ವಿಂಡೀಸ್ನ ಸ್ಫೋಟಕ ಬ್ಯಾಟರ್ ಕೈಲ್ ಮೇಯರ್ಸ್(73) ಅವರ ಸ್ಫೋಟಕ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭದಿಂದಲೇ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಅವರು ಡೆಲ್ಲಿ ಬೌಲರ್ಗಳ ಬೆವರಳಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಬೌಂಡರಿ ಬಾರಿಸಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು.
ಪ್ರತಿ ಓವರ್ಗೂ ಸಿಕ್ಸರ್ ಬಾರಿಸುತ್ತಿದ್ದ ಅವರ ಬ್ಯಾಟಿಂಗ್ ಗಮನಿಸಿದಾಗ ಈ ಆವೃತ್ತಿಯಲ್ಲಿ ಮೊದಲ ಶತಕ ಬಾರಿಸುವ ನಿರೀಕ್ಷೆಯೊಂದು ಹುಟ್ಟಿಕೊಂಡಿತು. ಜತೆಗೆ ತಂಡ 200 ಮೊತ್ತ ದಾಖಲಿಸುವ ಯೋಜನೆಯಲ್ಲಿತ್ತು. ಆದರೆ ಅಕ್ಷರ್ ಪಟೇಲ್ ಅವರ ಸ್ಲೋ ಬೌಲಿಂಗ್ ತಂತ್ರವನ್ನು ಸರಿಯಾಗಿ ಅರಿತುಕೊಳ್ಳುವಲ್ಲಿ ವಿಫಲರಾದ ಅವರು ವಿಕೆಟ್ ಕೈಚೆಲ್ಲಿದರು. ಒಟ್ಟು 38 ಎಸೆತ ಎದುರಿಸಿದ ಅವರು 73 ರನ್ ಬಾರಿಸಿದರು. ಈ ಮನಮೋಹಕ ಇನಿಂಗ್ಸ್ ವೇಳೆ ಬರೋಬ್ಬರಿ 7 ಸಿಕ್ಸರ್ ಮತ್ತು 2 ಬೌಂಡರಿ ದಾಖಲಾಯಿತು. ಇದಕ್ಕೂ ಮುನ್ನ ಅಕ್ಷರ್ ಪಟೇಲ್ಗೆ ಸತತ ಸಿಕ್ಸರ್ಗಳ ರುಚಿ ತೋರಿಸಿದ್ದರು. ಈ ವಿಕೆಟ್ ಪತನದ ಬಳಿಕ ತಂಡದ ಮೊತ್ತ ಧಿಡೀರ್ ಕುಸಿತ ಕಂಡಿತು. ಮಾರ್ಕಸ್ ಸ್ಟೋಯಿನಿಸ್ 12, ದೀಪಕ್ ಹೂಡಾ 17 ರನ್ಗಳಿ ಆಟ ಮುಗಿಸಿದರು.
ನಾಟಕೀಯ ಕುಸಿತ ಕಂಡ ತಂಡಕ್ಕೆ ವಿಂಡೀಸ್ನ ಮತೋರ್ವ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಆಸರೆಯಾದರು. ಕೈಲ್ ಮೇಯರ್ಸ್ ಅವರಂತೆ ಪೂರನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಕಳೆದ ಎರಡು ಸೀಸನ್ನಲ್ಲಿ ಕಂಡ ಘೋರ ಬ್ಯಾಟಿಂಗ್ ವೈಫಲ್ಯದ ಕೊಂಡಿಯನ್ನು ಈ ಪಂದ್ಯದಲ್ಲಿ ಕಳಚಿಕೊಂಡರು. 21 ಎಸೆತ ಎದುರಿಸಿದ ಅವರು ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ನೆರವಿನಿಂದ 36 ರನ್ ಗಳಿಸಿದರು. ಇವರ ವಿಕೆಟ್ ಖಲೀಲ್ ಅಹ್ಮದ್ ಪಾಲಾಯಿತು. ಅಂತಿಮ ಹಂತದಲ್ಲಿ ಸಿಡಿದು ನಿಂತ ಯುವ ಆಟಗಾರ ಆಯುಷ್ ಬದೋನಿ 7 ಎಸೆತದಲ್ಲಿ 18 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಂತಿಮ ಎಸೆತಕ್ಕೆ ಬ್ಯಾಟ್ ಬೀಸಿದ ಕನ್ನಡಿಗ ಕೆ.ಗೌತಮ್ ಸಿಕ್ಸರ್ ಬಾರಿಸಿ ಮಿಂಚಿದರು.
ರಾಹುಲ್ ಮತ್ತೆ ವಿಫಲ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ವೈಫಲ್ಯ ಇದೀಗ ಐಪಿಎಲ್ನಲ್ಲಿಯೂ ಮುಂದುವರಿದಂತೆ ಕಾಣುತ್ತಿದೆ. ರನ್ ಗಳಿಸಿಲು ಪರದಾಡಿದ ಅವರು 12 ಎಸೆತ ಎದುರಿಸಿ ಕೇವಲ 8 ರನ್ಗೆ ಸೀಮಿತರಾದರು.
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಬದಲು ತಂಡಕ್ಕೆ ಆಯ್ಕೆಯಾದ ಬಂಗಾಳದ ಯುವ ವಿಕೆಟ್ ಕೀಪರ್ ಅಭಿಷೇಕ್ ಪೋರೆಲ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಪಂತ್ ಬದಲು ಮುಂಬೈಯ ಹಾರ್ಡ್ ಹಿಟ್ಟರ್ ಸರ್ಫರಾಜ್ ಖಾನ್ ಅವರು ಕೀಪಿಂಗ್ ಗ್ಲೌಸ್ ತೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್ 2 ವಿಕೆಟ್ ಕಿತ್ತರೆ ಉಳಿದಂತೆ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.