ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈಯ ಚೆಪಾಕ್ ಕ್ರೀಡಾಂಗಣದ ಸಿಬ್ಬಂದಿಗಳಿಗೆ ನಗದು ಮತ್ತು ಆಟೋಗ್ರಾಫ್ ನೀಡಿ ಔದಾರ್ಯ ಮೆರೆದಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಧೋನಿ ಅಹಮದಾಬಾದ್ನಲ್ಲಿ ಮೇ 28ಕ್ಕೆ ನಡೆಯುವ ಫೈನಲ್ ಪಂದ್ಯಕ್ಕೆ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
2019ರ ಬಳಿಕ ಈ ಬಾರಿಯ ಐಪಿಎಲ್(IPL 2023) ಆವೃತ್ತಿಯಲ್ಲಿ ಚೆನ್ನೈ ತಂಡ ಮೊದಲ ಬಾರಿ ಚೆಪಾಕ್ನಲ್ಲಿ ಪಂದ್ಯಗಳನ್ನು ಆಡಿತ್ತು. ಒಟ್ಟು ಲೀಗ್ನಲ್ಲಿ 7 ಪಂದ್ಯ ಮತ್ತು ಕ್ವಾಲಿಫೈಯರ್ ಸೇರಿ 8 ಪಂದ್ಯಗಳಲ್ಲಿ ಚೆನ್ನೈ ತಂಡ ಇಲ್ಲಿ ಕಣಕ್ಕಿಳಿದಿತ್ತು. ಧೋನಿಯ ನೆಚ್ಚಿನ ಮೈದಾನ ಕೂಡ ಇದಾಗಿದೆ. ಕಳೆದ ಗುಜರಾತ್ ವಿರುದ್ಧದ ಕ್ವಾಲಿಫೈಯರ್ ಪಂದ್ಯ ಗೆದ್ದು ಚೆನ್ನೈ ಫೈನಲ್ ತಲುಪಿದೆ. ಈ ಪಂದ್ಯ ಮುಗಿದ ಬಳಿಕ ತಂಡದ ನಾಯಕ ಧೋನಿ ಅವರು ಇಲ್ಲಿನ ಕ್ರೀಡಾಂಗಣದ ಒಟ್ಟು 20 ಮಂದಿ ಸಿಬ್ಬಂದಿಗೆ ಆಟೋಗ್ರಾಫ್ ನೀಡುವ ಜತೆಗೆ ನಗದು ನೀಡಿದ್ದಾರೆ. ಬಳಿಕ ಇವರೊಂದಿಗೆ ಗ್ರೂಪ್ ಫೋಟೊ ಕೂಡ ತೆಗೆಸಿಕೊಂಡಿದ್ದಾರೆ. ಈ ವಿಡಿಯೊ ಕಂಡ ಧೋನಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಅವರು ಈ ಹಿಂದೆಯೂ ಇದೇ ರೀತಿ ಮೈದಾನ ಸಿಬ್ಬಂದಿಗಳಿಗೆ ನೆರವು ನೀಡಿದ್ದರು. ಭಾರತ ತಂಡದ ಪರ ಆಡುವ ವೇಳೆಯೂ ಧೋನಿ ಅವರು ಈ ರೀತಿಯ ಸಹಾಯ ಮಾಡಿದ್ದರು.
ಇದನ್ನೂ ಓದಿ IPL 2023 : ಧೋನಿ ಬಗ್ಗೆ ಹೊಗಳಿ ಬರೆದ ಲಂಕಾ ಬೌಲರ್ ಮತೀಶ್ ಪತಿರಾನಾ ಸಹೋದರಿ ವಿಶುಕಾ; ಕಾರಣವೇನು?
Anbuden Thala – A mark of respect for the markers and the ground staff who toil hard to make us game ready! 💛📹#WhistlePodu #Yellove 🦁💛 @msdhoni pic.twitter.com/MTyFpvEWud
— Chennai Super Kings (@ChennaiIPL) May 25, 2023
ಸದ್ಯಕ್ಕಿಲ್ಲ ನಿವೃತ್ತಿ
ಈ ಬಾರಿಯ ಐಪಿಎಲ್ ಬಳಿಕ ಧೋನಿ ಅವರು ನಿವೃತ್ತಿ ನೀಡಲಿದ್ದಾರೆ ಎಂಬ ಟಾಕ್ಗೆ ಧೋನಿಯೇ ಕಳೆದ ಪಂದ್ಯದಲ್ಲಿ ಉತ್ತರ ನೀಡಿದ್ದರು. “ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಫೈನಲ್ಗೆ ಬೇಕಾದ ತಯಾರಿ ಮತ್ತು ಕಪ್ ಗೆಲ್ಲುವುದು. ನಿವೃತ್ತಿ ಬಗ್ಗೆ ಯೋಚಿಸಲು ನನಗೆ ಇನ್ನೂ 8 ರಿಂದ 9 ತಿಂಗಳು ಅವಕಾಶವಿದೆ. ಹೀಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆಗಿನ ನಂಟು ಯವಾಗಲೂ ಇದ್ದೇ ಇರುತ್ತದೆ” ಎಂದು ಧೋನಿ ಹೇಳಿದ್ದರು.