ಅಹಮದಾಬಾದ್: ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಐಪಿಎಲ್ಗೆ(IPL 2023) ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಗುಜರಾತ್ ಟೈಟಾನ್ಸ್(Gujarat Titans) ಮುಖಾಮುಖಿಯಾಗಲು ಸಜ್ಜಾಗಿದೆ. ಆದರೆ ಇದೀಗ ಚೆನ್ನೈ ತಂಡಕ್ಕೆ ಮತ್ತು ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಧೋನಿ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಹೀಗಾಗಿ ಅವರು ಗುರುವಾರ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸಿಲ್ಲ. ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಅನುಮಾನ ಮೂಡಿದೆ.
16ನೇ ಆವೃತ್ತಿಯ ಈ ಐಪಿಎಲ್ಗೆ ಈಗಾಗಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಇಂಜುರಿ ಟೂರ್ನಿ ಎಂದು ಕರೆಯಲಾಗುತ್ತಿದೆ. ಇದೀಗ ಧೋನಿ ಕೂಡ ಗಾಯಕ್ಕೆ ತುತ್ತಾಗಿರುವುದು ಅವರ ಅಭಿಮಾನಿಗಳಿಗೆ ಭಾರಿ ಚಿಂತೆ ಉಂಟುಮಾಡಿದೆ.
ಧೋನಿ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸುಳಿವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಿಇಒ ನೀಡಿದ್ದಾರೆ. ಆದರೆ ಅವರ ಹೇಳಿಕೆ ಒಂದು ರೀತಿ ಗೊಂದಲದಿಂದ ಕೂಡಿದೆ. ಆರಂಭದಲ್ಲಿ “ನನಗೆ ತಿಳಿದಿರುವಂತೆ ಧೋನಿ ಶೇ 100 ರಷ್ಟು ಆಡುತ್ತಾರೆ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೇಳಿದರು. ಆ ಬಳಿಕ ಒಂದು ವೇಳೆ ಧೋನಿ ಆಡದಿದ್ದರೆ, ಡೆವೊನ್ ಕಾನ್ವೇ ಅಥವಾ ಅಂಬಾಟಿ ರಾಯುಡು ವಿಕೆಟ್ ಕೀಪಿಂಗ್ ಮಾಡಬಹುದು. ಟೀಮ್ನಲ್ಲಿ ಧೋನಿ ಬಿಟ್ಟರೆ ಇವರಿಬ್ಬರು ಕೀಪಿಂಗ್ ಸಾಮರ್ಥ್ಯ ಹೊಂದಿದ್ದಾರೆ” ಎಂದರು. ಒಟ್ಟಾರೆ ಇವರ ಈ ಹೇಳಿಕೆ ಗಮನಿಸುವಾಗ ಧೋನಿ ಆಡುವುದು ಅನುಮಾನ ಎಂಬಂತಿದೆ.
ಇದನ್ನೂ ಓದಿ IPL 2023: ಧೋನಿ ವಿಶ್ವದ ಗ್ರೇಟ್ ಫಿನಿಶರ್; ರಿಯಾನ್ ಪರಾಗ್
ಇತ್ತೀಚೆಗೆ ಸಿಎಸ್ಕೆ ತನ್ನ ಟ್ವಿಟರ್ನಲ್ಲಿ ಧೋನಿ ಅಭ್ಯಾಸಕ್ಕೆ ಮೈದಾನಕ್ಕೆ ಬರುತ್ತಿರುವ ವಿಡಿಯೊ ಹಂಚಿಕೊಂಡಿತ್ತು. ಇದು ಕೆಲವೇ ಗಂಟೆಯಲ್ಲಿ ವೈರಲ್ ಆದದ್ದಲ್ಲದೇ, ಮೈದಾನಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಈ ಬಾರಿಯ ಐಪಿಎಲ್ ಬಳಿಕ ಧೋನಿ ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕೊನೆಯಾ ಬಾರಿ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ ಈ ಮಧ್ಯೆ ಧೋನಿ ಅವರಿಗೆ ಮೊಣಕಾಲಿನ ಗಾಯವಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ. ಒಂದೊಮ್ಮೆ ಧೋನಿ ಅವರು ಮೊದಲ ಪಂದ್ಯದಿಂದ ಹೊರಗುಳಿದರೆ ಬೆನ್ ಸ್ಟೋಕ್ಸ್ ಅವರು ತಂಡದ ನಾಯಕತ್ವ ನಿರ್ವಹಿಸುವ ಸಾಧ್ಯತೆ ಇದೆ.