ಮುಂಬಯಿ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಬುಧವಾರದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರಾಜಸ್ಥಾನ್ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಸತತ ಎರಡು ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಜತೆಗೆ ಇದು ಚೆನ್ನೈಗೆ ತವರಿನ ಪಂದ್ಯವೂ ಆಗಿದೆ. ಆದರೆ ರಾಜಸ್ಥಾನ್ ಸವಾಲು ಅಷ್ಟೂ ಸುಲಭವಲ್ಲ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ರಾಜಸ್ಥಾನ್ ಸಮರ್ಥವಾಗಿದೆ.
ಈ ಪಂದ್ಯ ಧೋನಿಗೆ ಐತಿಹಾಸಿಕ ಪಂದ್ಯವಾಗಿದೆ. ಏಕೆಂದರೆ ಇದು ಧೋನಿಗೆ ಚೆನ್ನೈ ಪರ ನಾಯಕನಾಗಿ 200ನೇ ಪಂದ್ಯವಾಗಿದೆ. ಈಗಾಗಲೇ ತಂಡದ ಸಹ ಆಟಗಾರ ರವೀಂದ್ರ ಜಡೇಜಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಧೋನಿಗೆ ಉಡುಗೊರೆ ನೀಡಲಾಗುವದು ಎಂದು ಹೇಳಿದ್ದಾರೆ. ಇದೀಗ ಜಡೇಜಾ ಮಾತು ನಿಜವಾಗಲಿದೆಯಾ ಎಂದು ಕಾದು ನೋಡಬೇಕಿದೆ.
ಪಿಚ್ ರಿಪೋರ್ಟ್
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂ ಸಾಮಾನ್ಯವಾಗಿ ಸ್ಪಿನ್ ಸ್ನೇಹಿಯಾಗಿದೆ. ಆದರೆ ಇಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಬಹುದು. ಏಕೆಂದರೆ ಇಲ್ಲಿ ಆಡಿದ ಕಳೆದ ಪಂದ್ಯದಲ್ಲಿಯೂ 200 ಪ್ಲಸ್ ಮೊತ್ತ ದಾಖಲಾಗಿತ್ತು. ವೇಗಿಗಳಿಗೆ ಇಲ್ಲಿನ ಪಿಚ್ ಕಡಿಮೆ ಪ್ರಮಾಣದಲ್ಲಿ ನೆರವು ನೀಡುತ್ತದೆ. ಈ ಪಿಚ್‌ನಲ್ಲಿ ಇದುವರೆಗೆ 68 ಪಂದ್ಯಗಳು ನಡೆದಿದ್ದು, 42 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ದಾಖಲಿಸಿದೆ.
ಬಲಾಬಲದ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಜಯಿಸಿದೆ. ಈ ಲೆಕ್ಕಾಚಾರದಲ್ಲಿ ಚೆನ್ನೈ ತಂಡ ಬಲಿಷ್ಠವಾಗಿ ಗೋಚರಿಸಿದೆ.
ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಡೇವಿಡ್ ವಾರ್ನರ್
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಹಮ್ಮದ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್/ ಮಹೀಶ್ ತೀಕ್ಷಣ, ಸಿಸಂಡ ಮಗಾಲ, ಎಂ.ಎಸ್ ಧೋನಿ(ನಾಯಕ), ಎಸ್ ಹಂಗರ್ಗೇಕರ್, ತುಷಾರ್ ದೇಶಪಾಂಡೆ.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಡಿ.ಸಿ ಜುರೆಲ್, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್, ಸಂದೀಪ್ ಶರ್ಮಾ.