Site icon Vistara News

IPL 2023: ಪ್ಲೇ ಆಫ್​ ಪ್ರವೇಶಿಸಿದ ಗುಜರಾತ್​; ಉಳಿದ ತಂಡಗಳ ಭವಿಷ್ಯವೇನು?; ಸಂಪೂರ್ಣ ಮಾಹಿತಿ ಇಲ್ಲಿದೆ

play-offs

ಮುಂಬಯಿ: ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ 2023ರ ಐಪಿಎಲ್‌ನಲ್ಲಿ(IPL 2023) ಪ್ಲೇ ಆಫ್ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಉಳಿದ ಮೂರು ಸ್ಥಾನಗಳಿಗಾಗಿ 7 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸೋಮವಾರ ರಾತ್ರಿ ನಡೆದ ಐಪಿಎಲ್​ ಮುಖಾಮುಖಿಯಲ್ಲಿ ಗುಜರಾತ್​ ಟೈಟನ್ಸ್​ ತಂಡ ಸನ್‌ರೈಸರ್ ಹೈದರಾಬಾದ್‌ ವಿರುದ್ಧ 34 ರನ್ನುಗಳ ಗೆಲುವಿನೊಂದಿಗೆ ಪ್ಲೇ ಆಫ್​ ಪ್ರವೇಶಿಸಿತು. 12 ಪಂದ್ಯಗಳಲ್ಲಿ 8ನೇ ಸೋಲುಂಡ ಹೈದರಾಬಾದ್‌ ಕೂಟದಿಂದ ಹೊರಬಿತ್ತು. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ ಟೂರ್ನಿಯಿಂದ ಹೊರಬಿದ್ದಿತ್ತು. ಸದ್ಯದ ಪ್ಲೇ ಆಫ್​ ಲೆಕ್ಕಾಚಾರ ಹೇಗಿದೆ ಎಂಬ ಮಾಹಿತಿ ಇಂತಿದೆ.

ಚೆನ್ನೈ ಸೂಪರ್ ಕಿಂಗ್ಸ್: ಧೋನಿ ಪಡೆ 13 ಪಂದ್ಯಗಳಲ್ಲಿ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈಗೆ ಇನ್ನು ಒಂದು ಪಂದ್ಯ ಬಾಕಿ ಉಳಿದಿದೆ. ಒಂದೊಮ್ಮೆ ಕೆಕೆಆರ್​ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲ್ಲುತ್ತಿದ್ದರೆ ಧೋನಿ ಪಡೆ ಈಗಾಗಲೇ ಪ್ಲೇ ಆಫ್​ ಪ್ರವೇಶ ಪಡೆಯುತ್ತಿತ್ತು. ಚೆನ್ನೈ ತನ್ನ ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ಒಂದೊಮ್ಮೆ ಚೆನ್ನೈ ಸೋತರೆ ಕೂಟದಿಂದ ನಿರ್ಗಮಿಸುವುದಿಲ್ಲ. ಆಗ ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿ ಅರ್ಹತೆ ಪಡೆಯುವ ಅವಕಾಶವಿದೆ. ಮಂಗಳವಾರ ನಡೆಯುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಯಾರೇ ಗೆದ್ದರೂ ದ್ವೀತೀಯ ಸ್ಥಾನಕ್ಕೆ ಏರಲಿದ್ದಾರೆ.

ಮುಂಬೈ ಇಂಡಿಯನ್ಸ್: ರೋಹಿತ್​ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಆರಂಭಿಕ ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿ ಆ ಬಳಿಕ ಪಿನಿಕ್ಸ್​ನಂತೆ ಎದ್ದು ಬಂದು ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮಂಗಳವಾರ ಲಕ್ನೋ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ 16 ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೇರಲಿದೆ. ಒಂದೊಮ್ಮೆ ಸೋತರೂ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೂ ತಂಡಕ್ಕೆ ಪ್ಲೇ ಆಫ್​ಗೇರಬಹುದು. ಜತೆಗೆ ಇತರ ತಂಡಗಳ ಪಂದ್ಯದ ಫಲಿತಾಂಶವೂ ಮುಂಬೈ ಪ್ಲೇ ಆಫ್​ ಕನಸಿಗೆ ವರದಾನವಾಗಬಹುದು.

ಲಕ್ನೋ ಸೂಪರ್ ಜೈಂಟ್ಸ್: ಕೆ.ಎಲ್​ ರಾಹುಲ್​ ಅವರು ಗಾಯದಿಂದಾಗಿ ಐಪಿಎಲ್​ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡವನ್ನು ಮುನ್ನಡೆಸುತ್ತಿರುವ ಕೃಣಾಲ್​ ಪಾಂಡ್ಯ ನೇತೃತ್ವದ ಲಕ್ನೋ ತಂಡದ ಸ್ಥಿತಿಯೂ ಮುಂಬೈ ತಂಡದ ಸ್ಥಿತಿಯಂತೇ ಇದೆ. ಲಕ್ನೋ ಸದ್ಯ 12 ಪಂದ್ಯಗಳನ್ನು ಆಡಿದ್ದು 6 ಗೆಲುವು ಸಾಧಿಸಿ 13 ಅಂಕ ಸಂಪಾದಿಸಿದೆ. ತಂಡಕ್ಕೆ ಇನ್ನು 2 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಒಂದು ಪಂದ್ಯ ಮುಂಬೈ ವಿರುದ್ಧ ನಡೆಯಲಿದೆ. ಈ ಪಂದ್ಯ ಇಂದು(ಮಂಗಳವಾರ) ನಡೆಯಲಿದೆ. ಇಲ್ಲಿ ಗೆದ್ದರೆ 15 ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೇರಲಿದೆ. ಸೋತರೆ ಅಂತಿಮ ಪಂದ್ಯದಲ್ಲಿ ಗೆಲುವಿನ ಜತೆಗೆ ತನಗಿಂತ ಕೆಳಗಿರುವ ತಂಡಗಳ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಮಾಡಬೇಕಿದೆ.

ಇದನ್ನೂ ಓದಿ IPL 2023 : ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ ಗುಜರಾತ್​ ತಂಡಕ್ಕೆ 34 ರನ್​ ಜಯ

ಆರ್​ಸಿಬಿ: ಕನ್ನಡಿಗರ ನೆಚ್ಚಿನ ತಂಡ ಆರ್​ಸಿಬಿ ಕಳೆದ ಪಂದ್ಯದಲ್ಲಿ ರಾಜಸ್ಥಾನ್​ ವಿರುದ್ಧ ಗೆದ್ದ ಕಾರಣ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಂಡಿದೆ. ಆರ್​ಸಿಬಿ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಡು ಪ್ಲೆಸಿಸ್​ ಪಡೆಗೆ ಇನ್ನು ಎರಡು ಲೀಗ್ ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಒಂದು ಪಂದ್ಯ ತವರಿನಲ್ಲಿ ಕೆಕೆಆರ್​ ವಿರುದ್ಧ ಆಡಲಿದೆ. ಆರ್​ಸಿಬಿಗೆ ಈ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಒಂದು ಪಂದ್ಯ ಸೋತರೂ ಪ್ಲೇ ಆಫ್​ ರೇಸ್​ನಿಂದ ಹೊರಬೀಳಲಿದೆ. ಇನ್ನೊಂದು ಲೆಕ್ಕಾಚಾರದಲ್ಲಿ ಆರ್​ಸಿಬಿ ಒಂದು ಪಂದ್ಯ ಗೆದ್ದರೆ ಆಗ ರನ್ ರೇಟ್ ಜತೆಗೆ, ಲಕ್ನೋ ಎದುರು ಮುಂಬೈ ಸೋಲಬೇಕು. ಹೈದರಾಬಾದ್​ ವಿರುದ್ಧವೂ ಮುಂಬೈ ಸೋಲು ಕಾಣಬೇಕು.

ರಾಜಸ್ಥಾನ್ ರಾಯಲ್ಸ್: ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಕಾರಣ ರಾಜಸ್ಥಾನ್​ ರಾಯಲ್ಸ್​ಗೆ ಪ್ಲೇ ಆಫ್​ ಪ್ರವೇಶಿಸಲು ಅಂತಿಮ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದೊಮ್ಮೆ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಸದ್ಯ ಸಂಜು ಪಡೆ 13 ಪಂದ್ಯಗಳನ್ನಾಡಿ 12 ಅಂಕ ಹೊಂದಿದೆ. ಒಂದೊಮ್ಮೆ ಗೆದ್ದರೂ ತನಗಿಂತ ಮೇಲಿರುವ ತಂಡಗಳು ಸೋತರಷ್ಟೇ ರಾಜಸ್ಥಾನ್​ಗೆ ಪ್ಲೇ ಆಫ್​ಗೇರುವ ಅವಕಾಶವಿದೆ. ಹೀಗಾಗಿ ರಾಜಸ್ಥಾನ್​ ತಂಡದ ಪ್ಲೇ ಆಫ್​ ಭವಿಷ್ಯ ತಂತಿ ಮೇಲಿನ ನಡಿಗೆಯಂತಿದೆ.

ಇದನ್ನೂ ಓದಿ IPL 2023 : ಐಪಿಎಲ್​ನ 62ನೇ ಪಂದ್ಯದ ಬಳಿಕ ಅಂಕಪಟ್ಟಿ ಹೇಗಿದೆ

ಪಂಜಾಬ್ ಕಿಂಗ್ಸ್: ಗಬ್ಬರ್​ ಖ್ಯಾತಿಯ ಶಿಖರ್​ ಧವನ್​ ಸಾರಥ್ಯದ ಪಂಜಾಬ್​ ಕಿಂಗ್ಸ್​ ತಂಡ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಎಡವಿದರೂ ತಂಡ ಟೂರ್ನಿಯಿಂದ ಹೊರ ಬೀಳಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವಿನ ಜತೆಗೆ ರನ್​ ರೇಟ್​ ಕೂಡ ತಂಡಕ್ಕೆ ಅತ್ಯಗತ್ಯವಾಗಿದೆ. ಏಕೆಂದರೆ ತನಗಿಂತ ಮೇಲಿರುವ ತಂಡಗಳು ಕೂಡ 16 ಅಂಕ ಸಂಪಾದಿಸಿದ್ದಲ್ಲಿ ಆಗ ರನ್​ ರೇಟ್​ ಪಾತ್ರ ಮುಖ್ಯವಾತ್ತದೆ. ಒಟ್ಟಾರೆ ಪಂಜಾಬ್​ಗೆ ಇನ್ನುಳಿದ ಎರಡು ಪಂದ್ಯಗಳ ಮಾಡಿ ಇಲ್ಲ ಮಡಿ ಪಂದ್ಯವಾಗಿದೆ.

ಕೆಕೆಆರ್​ ತಂಡ 13 ಪಂದ್ಯಗಳನ್ನು ಆಡಿ 12 ಅಂಕ ಹೊಂದಿದೆ. ಸದ್ಯ ಈ ತಂಡಕ್ಕೆ ಮುಂದಿನ ಪಂದ್ಯ ಗೆದ್ದರೂ ಪ್ಲೇ ಆಫ್​ ಪ್ರವೇಶ ಕಷ್ಟ ಸಾಧ್ಯ. ಏಕೆಂದರೆ ತಂಡದ ರನ್​ ರೇಟ್​ ಕೂಡ ಕಡಿಮೆ ಇದೆ. ಒಂದೊಮ್ಮೆ ಪವಾಡ ಸೃಷ್ಟಿಯಾದರೆ ಮಾತ್ರ ತಂಡಕ್ಕೆ ಪ್ಲೇ ಆಫ್​ಗೆ ಏರಬಹುದಾಗಿದೆ. ಸದ್ಯದ ಸ್ಥಿತಿಯಲ್ಲಿ ಅದು ಕೂಡ ಕಷ್ಟ ಸಾಧ್ಯ ಎನ್ನುವಂತಿದೆ.

Exit mobile version