ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಆಟವನ್ನು ನೋಡುವಾಗ ಈ ಬಾರಿಯು ತಂಡ ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ. ಇದಕ್ಕೆ ತಂಡದ ಸಂಘಟಿತ ಪ್ರದರ್ಶನೇ ಸಾಕ್ಷಿ. ಸದ್ಯ ಗುಜರಾತ್ ತಂಡ ಕಳೆದ ಆವೃತ್ತಿಯಲ್ಲಿ ಯಾವ ರೀತಿ ಪ್ರದರ್ಶನ ತೋರಿತ್ತು, ಈ ಬಾರಿ ತಂಡದ ಪ್ರದರ್ಶನ ಹೇಗಿದೆ, ತಂಡದ ಬಲಾಬಲ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಲೆಕ್ಕ ಭರ್ತಿಯ ತಂಡ ಎಂಬ ಅವಮಾನ
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಯಿತು. ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸಲಾಯಿತು. ಹೀಗಾಗಿ ಲಕ್ನೋ ಸೂಪರ್ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಹೊಸದಾಗಿ ಐಪಿಎಲ್ಗೆ ಕಾಲಿರಿಸಿತು. ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡ ನಾಯಕನ ಪಟ್ಟವನ್ನು ನೀಡಲಾಯಿತು. ತಂಡದಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಅನ್ಕ್ಯಾಪ್ಡ್ ಮತ್ತು ತೀರಾ ಕಳಪೆ ಪ್ರದರ್ಶನ ತೋರಿ ಇತರ ತಂಡಗಳಿಂದ ಕೈ ಬಿಟ್ಟ ಆಟಗಾರರಾಗಿದ್ದರು. ಈ ತಂಡವನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಇದೊಂದು ಲೆಕ್ಕ ಭರ್ತಿಗೆ ಮಾಡಿದ ತಂಡದಂತಿದೆ. ಇದು ಒಂದು ಪಂದ್ಯ ಗೆದ್ದರೆ ಅಚ್ಚರಿ ಎಂಬಂತೆ ಈ ತಂಡವನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಕಪ್ ಎತ್ತಿದಾಗ ಈ ತಂಡದ ಸಾಮರ್ಥ್ಯವೇನು ಎಂಬುವುದು ಜಗಜ್ಜಾಹೀರಾಗಿತ್ತು.
ಚಾಣಕ್ಯ ಆಶಿಶ್ ನೆಹ್ರಾ
ಟೀಮ್ ಇಂಡಿಯಾ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಒಂದಾಗಿರುವ ಆಶಿಶ್ ನೆಹ್ರಾ ಅವರು ಈ ತಂಡದ ಬೆನ್ನೆಲುಬು. ತಂಡದ ಮುಖ್ಯ ಕೋಚ್ ಆಗಿರುವ ಅವರು ಪಂದ್ಯ ಆರಂಭಗೊಂಡ ಕ್ಷಣದಿಂದ ಅಂತ್ಯದ ವರೆಗೂ ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ಬೌಂಡರಿ ಲೈನ್ ಸುತ್ತಲೂ ಓಡಾಡುತ್ತ ಆಟಗಾರರಿಗೆ ಆತ್ಮ ವಿಶ್ವಾಸ ಮತ್ತು ಆಟದ ತಂತ್ರಗಾರಿಕೆಯನ್ನು ಹೇಳಿಕೊಡುತ್ತಲೇ ಇರುತ್ತಾರೆ. ಇದನ್ನೂ ಪ್ರತಿ ಪಂದ್ಯದಲ್ಲಿಯೂ ಕಾಣಬಹುದಾಗಿದೆ. ಚಾಣಕ್ಯನಂತೆ ಅವರು ತಂಡದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದು ಕೂಡ ತಂಡದ ಶ್ರೇಷ್ಠ ಪ್ರದರ್ಶನಕ್ಕೆ ಕಾರಣ. ಇದರ ಜತೆಗೆ 28 ವರ್ಷಗಳ ಬಳಿಕ ಭಾರತ ತಂಡ ಏಕದಿನ ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಕಾರಣಕರ್ತರಾದ ಕೋಚ್ ಗ್ಯಾರಿ ಕರ್ಸ್ಟನ್ ಅವರ ಬ್ಯಾಟಿಂಗ್ ಮಾರ್ಗದರ್ಶನ ತಂಡಕ್ಕೆ ಪ್ಲಸ್ ಪಾಯಿಂಟ್.
ಒಂದೇ ಆಟಗಾರನನ್ನು ನಂಬಿ ಕುಳಿತಿಲ್ಲ
ಗುಜರಾತ್ ತಂಡದ ವಿಶೇಷತೆ ಎಂದರೆ ಈ ತಂಡ ಒಂದೇ ಆಟಗಾರನ ಪ್ರದರ್ಶನವನ್ನು ನಂಬಿ ಕುಳಿತಿಲ್ಲ. ಪ್ರತಿಯೊಬ್ಬ ಆಟಗಾರನು ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶುಭಮನ್ ಗಿಲ್ ಅವರು ಪಂದ್ಯದಿಂದ ಪಂದ್ಯಕ್ಕೆ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಈ ಬಾರಿ ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಕಳೆದ ಆವೃತ್ತಿಯಲ್ಲಿಯೂ 10 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಜತೆಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಬಾರಿಯೂ ತಂಡ ಕಪ್ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023 : ರೋಹಿತ್ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 2ನೇ ಭಾರತೀಯ; ಏನಿದು ಸಾಧನೆ?
ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್
ಕಳೆದ ವರ್ಷ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತೀರಾ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿ 9 ವಿಕೆಟ್ಗೆ 130 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಕೇವಲ ಮೂರು ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿ ಕಪ್ ಎತ್ತಿ ಮೆರೆದಾಡಿತ್ತು.