ಅಹಮದಾಬಾದ್: ಅತ್ಯಂತ ಸಮರ್ಥ ತಂಡವಾದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಆಟವನ್ನು ನೋಡುವಾಗ ಈ ಬಾರಿಯು ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ. ಇದಕ್ಕೆ ತಂಡದ ಸಂಘಟಿತ ಪ್ರದರ್ಶನೇ ಸಾಕ್ಷಿ. ಗುಜರಾತ್ ತಂಡ ಐಪಿಎಲ್ನಲ್ಲಿ ನಡೆದು ಬಂದ ಹಾದಿ ಹೇಗಿದೆ. ಈ ಬಾರಿ ತಂಡದ ಏಳು-ಬೀಳುಗಳ ಮಾಹಿತಿ ಇಲ್ಲಿದೆ.
ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್
ಕಳೆದ ವರ್ಷ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತೀರಾ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿ 9 ವಿಕೆಟ್ಗೆ 130 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಕೇವಲ ಮೂರು ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿ ಕಪ್ ಎತ್ತಿ ಮೆರೆದಾಡಿತ್ತು. ಈ ಬಾರಿಯೂ ಫೈನಲ್ನಲ್ಲಿ ಚೆನ್ನೈ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಇರಾದೆಯಲ್ಲಿದೆ.
ಒಂದೇ ಆಟಗಾರನನ್ನು ನಂಬಿ ಕುಳಿತಿಲ್ಲ
ಗುಜರಾತ್ ತಂಡದ ವಿಶೇಷತೆ ಎಂದರೆ ಈ ತಂಡ ಒಂದೇ ಆಟಗಾರನ ಪ್ರದರ್ಶನವನ್ನು ನಂಬಿ ಕುಳಿತಿಲ್ಲ. ಪ್ರತಿಯೊಬ್ಬ ಆಟಗಾರನು ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶುಭಮನ್ ಗಿಲ್ ಅವರು ಪಂದ್ಯದಿಂದ ಪಂದ್ಯಕ್ಕೆ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಅವರು ಈ ಆವೃತ್ತಿಯಲ್ಲಿ ಒಟ್ಟು ಮೂರು ಶತಕ ಬಾರಿಸಿ 851 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರ ಹೊರತಾಗಿಯೂ ತಂಡದಲ್ಲಿ ಆಡುವ ಎಲ್ಲರೂ ಕೂಡ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಮೋಹಿತ್ ಶರ್ಮ ಅವರಂತು ಯುವ ಬೌಲರ್ಗಳು ನಾಚುಚಂತೆ ಪ್ರದರ್ಶನ ತೋರುತ್ತಿದ್ದಾರೆ. ಒಟ್ಟಾರೆ ತಂಡ ಪ್ರದರ್ಶನ ಸಮರ್ಥವಾಗಿದೆ.
ಈ ಬಾರಿ ತಂಡದ ಪ್ರದರ್ಶನ ಹೇಗಿತ್ತು
ಈ ಬಾರಿ ಆಡಿದ 14 ಲೀಗ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿಯೂ 10 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಸಂಪಾದಿಸಿತ್ತು. ಜತೆಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಬಾರಿಯೂ ತಂಡ ಕಪ್ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.
The 𝗙𝗜𝗡𝗔𝗟𝗜𝗦𝗧𝗦 of #TATAIPL 2023 🏆
— IndianPremierLeague (@IPL) May 26, 2023
It's going to be the Chennai Super Kings facing the Gujarat Titans in the summit clash 🙌
BRING. IT. ON 😍 pic.twitter.com/FYBhhsN808
ಅವಮಾನಕ್ಕೆ ಒಳಗಾಗಿದ್ದ ಗುಜರಾತ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಯಿತು. ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸಲಾಯಿತು. ಹೀಗಾಗಿ ಲಕ್ನೋ ಸೂಪರ್ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಹೊಸದಾಗಿ ಐಪಿಎಲ್ಗೆ ಕಾಲಿರಿಸಿತು. ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡ ನಾಯಕನ ಪಟ್ಟವನ್ನು ನೀಡಲಾಯಿತು. ತಂಡದಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಅನ್ಕ್ಯಾಪ್ಡ್ ಮತ್ತು ತೀರಾ ಕಳಪೆ ಪ್ರದರ್ಶನ ತೋರಿ ಇತರ ತಂಡಗಳಿಂದ ಕೈ ಬಿಟ್ಟ ಆಟಗಾರರಾಗಿದ್ದರು. ಈ ತಂಡವನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಇದೊಂದು ಲೆಕ್ಕ ಭರ್ತಿಗೆ ಮಾಡಿದ ತಂಡದಂತಿದೆ. ಇದು ಒಂದು ಪಂದ್ಯ ಗೆದ್ದರೆ ಅಚ್ಚರಿ ಎಂಬಂತೆ ಈ ತಂಡವನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಕಪ್ ಎತ್ತಿದಾಗ ಈ ತಂಡದ ಸಾಮರ್ಥ್ಯವೇನು ಎಂಬುವುದು ಜಗಜ್ಜಾಹೀರಾಗಿತ್ತು.