ಜೈಪುರ: ಶುಕ್ರವಾರದ ಸಣ್ಣ ಮೊತ್ತದ ಐಪಿಎಲ್ ಮೇಲಾಟದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಭರ್ಜರಿ 9 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ 48ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ತಂಡ ರಶೀದ್ ಖಾನ್(3) ಮತ್ತು ನೂರ್ ಅಹ್ಮದ್(2) ಅವರ ಬೌಲಿಂಗ್ ದಾಳಿಗೆ 17.5 ಓವರ್ಗಳಲ್ಲಿ 118 ರನ್ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ 13.5 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಕೇವಲ 15 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ವೃದ್ಧಿಮಾನ್ ಸಾಹಾ ಅಜೇಯ 41 ರನ್ ಗಳಿಸಿದರು. ಗಿಲ್ 36 ರನ್ ಬಾರಿಸಿ ಚಹಲ್ಗೆ ವಿಕೆಟ್ ಒಪ್ಪಿಸಿದರು.
ಬ್ಯಾಟಿಂಗ್ ಬರಗಾಲ ಎದುರಿಸಿದ ರಾಜಸ್ಥಾನ್
ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ 11 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದ ಜಾಸ್ ಬಟ್ಲರ್ ಅವರು 8 ರನ್ಗೆ ವಿಕೆಟ್ ಕೈಚೆಲ್ಲಿದರು. ಇದರಿಂದ ತಂಡದ ಬೃಹತ್ ಮೊತ್ತದ ಆರಂಭಕ್ಕೆ ಹಿನ್ನಡೆಯಾಯಿತು. ಬಟ್ಲರ್ ವಿಕೆಟ್ ನಾಯಕ ಹಾರ್ದಿಕ್ ಪಾಂಡ್ಯ ಪಾಲಾಯಿತು. ಪವರ್ ಪ್ಲೇಯಲ್ಲಿ ಕೇವಲ 47 ರನ್ ಮಾತ್ರ ಒಟ್ಟುಗೂಡಿತು.
ದ್ವಿತೀಯ ವಿಕೆಟ್ಗೆ ಜತೆಯಾದ ಸಂಜು ಸ್ಯಾಮ್ಸನ್ ಮತ್ತು ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಒಂದು ಹಂತದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಆದರೆ ಇವರ ಆಟವೂ ಹೆಚ್ಚು ಹೊತ್ತು ಸಾಗಲಿಲ್ಲ. 14 ರನ್ ಗಳಿಸಿದ್ದ ವೇಳೆ ರನೌಟ್ ಆದರು. ಈ ವಿಕೆಟ್ ಪತನದ ಬಳಿಕ ರಾಜಸ್ಥಾನ್ ತಂಡದ ಕುಸಿತವು ಆರಂಭಗೊಂಡಿತು. ದೇವದತ್ತ ಪಡಿಕ್ಕಲ್(12), ಆರ್.ಅಶ್ವಿನ್(2), ರಿಯಾನ್ ಪರಾಗ್(4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡುತ್ತಿದ್ದರು.
ಪಾಂಡ್ಯ ಪಡೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಸಂಜು 20 ಎಸೆತಗಳಲ್ಲಿ 30 ರನ್ ಗಳಿಸಿ ವೇಗಿ ಜೋಶುವಾ ಲಿಟಲ್ ಅವರಿಗೆ ವಿಕೆಟ್ ಒಪ್ಪಿಸಿದರು. ರಿಯಾನ್ ಪರಾಗ್ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಿಂದೆಯೇ ಅವರಿಗೆ ತಂಡದಲ್ಲಿ ಪದೇಪದೆ ಅವಕಾಶ ನೀಡುತ್ತಿರುವ ಬಗ್ಗೆ ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರು ಈ ಪಂದ್ಯದಲ್ಲಿಯೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದು ತಂಡದ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.
ಇದನ್ನೂ ಓದಿ IPL 2023: ಕೋಟ್ಲಾದಲ್ಲಿ ಸೇಡು ತೀರಿಸೀತೇ ಡೆಲ್ಲಿ ಕ್ಯಾಪಿಟಲ್ಸ್?
ವಿಂಡೀಸ್ ಆಟಗಾರ ಶಿಮ್ರಾನ್ ಹೆಟ್ಮೇರ್(7), ಧ್ರುವ್ ಜುರೆಲ್(9) ಒಂದಂಕಿಗೆ ಸೀಮಿತರಾದರು. ಅಂತಿಮ ಹಂತದಲ್ಲಿ ಟ್ರೆಂಟ್ ಬೌಲ್ಟ್ 15 ರನ್ ಗಳಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು. ತಂಡದಲ್ಲಿ ಮೂವರು ಆಟಗಾರರು ಮಾತ್ರ ಡಬಲ್ ಡಿಜಿಟ್ ರನ್ ಗಳಿಸಿದರು. ಉಳಿದ ಎಲ್ಲ ಆಟಗಾರರು ಕೇವಲ ಸಿಂಗಲ್ ಡಿಜಿಟ್ ಮೊತ್ತಕ್ಕೆ ಆಟ ಮುಗಿಸಿದರು. ಗುಜರಾತ್ ಪರ ಅಫಘಾನಿಸ್ತಾನದ ಸ್ಪಿನ್ನರ್ಗಳಾದ ರಶೀದ್ ಖಾನ್(3) ಮತ್ತು ನೂರ್ ಅಹ್ಮದ್(2) ವಿಕೆಟ್ ಕಿತ್ತು ಮಿಂಚಿದರು.