ಬೆಂಗಳೂರು: ಕೊರೊನಾ ಕಾರಣದಿಂದ ಕಳೆದ ಮೂರು ವರ್ಷ ಮನೆಯಲ್ಲಿಯೇ ಬಂದಿಯಾಗಿ ಐಪಿಎಲ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಮುಕ್ತವಾಗಿ ಫ್ಯಾನ್ ಪಾರ್ಕ್(ipl fan park) ಮೂಲಕ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಲಿದೆ.
2019ರಲ್ಲಿ ಕೊರೊನಾ ಕಾರಣದಿಂದ ಜನ ಒಂದೆಡೆ ಒಟ್ಟಾಗಿ ಸೇರಬಾರದು ಎಂಬ ನಿಯಮದನ್ವಯ ಪ್ರೇಕ್ಷಕರಿಲ್ಲದ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಅದೇ ನಿಯಮದನ್ವಯ ಫ್ಯಾನ್ ಪಾರ್ಕ್ ಕೂಡಾ ರದ್ದಾಗಿತ್ತು. ಆದರೆ ಈ ಬಾರಿ ಕೊರೊನಾ ಮುಕ್ತವಾಗಿ ಟೂರ್ನಿ ನಡೆಯಲಿದೆ. ಜತೆಗೆ ಟೂರ್ನಿ ಹಳೆಯ ಸ್ವರೂಪಕ್ಕೆ ಮರಳಿದೆ. ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ನಡೆಯಲಿದೆ. ಇದೀಗ ಫ್ಯಾನ್ ಪಾರ್ಕ್ ಮೂಲಕ ಐಪಿಎಲ್‌ಪ್ರಿಯರಿಗೆ ತಮ್ಮ ನಗರದಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಮಾಡಿಕೊಟ್ಟಿದೆ.
ಐಪಿಎಲ್ನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದ ಐಪಿಎಲ್ ಫ್ಯಾನ್ ಪಾರ್ಕ್‌ಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ 2019ರ ಬಳಿಕ ಮತ್ತೆ ಫ್ಯಾನ್ ಪಾರ್ಕ್ ಕಾಣಿಸಿಕೊಳ್ಳಲಿದೆ. 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಇರಲಿದೆ. ಐಪಿಎಲ್ ಟೂರ್ನಿಯನ್ನು ದೇಶದ ವಿವಿಧ ನಗರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಈ ಟೂರ್ನಿಗೆ ಮತ್ತಷ್ಟು ಪ್ರಚಾರ ಸಿಗುವಂತಾಗಲು ಬಿಸಿಸಿಐ 2015ರ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು.
ಇದನ್ನೂ ಓದಿ IPL 2023: ಧೋನಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ; ಸ್ಟೋಕ್ಸ್ ನಾಯಕತ್ವ ಸಾಧ್ಯತೆ
ಕರ್ನಾಟಕದಲ್ಲಿಯೂ ಇರಲಿದೆ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ನಾಲ್ಕು ಕಡೆ ಈ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದೊಡ್ಡ ಪರದೆಯ ಮೂಲಕ ಪಂದ್ಯ ನೋಡಲು ವ್ಯವಸ್ಥೆ ಇರಲಿದೆ. ಹುಬ್ಬಳ್ಳಿಯಲ್ಲಿ ಏಪ್ರಿಲ್ 15 ಮತ್ತು 16, ಬೆಳಗಾವಿ ಏ.22 ಮತ್ತು 23, ಶಿವಮೊಗ್ಗ ಮೇ 6 ಮತ್ತು 7 ಹಾಗೂ ಮೈಸೂರಿನಲ್ಲಿ ಮೇ 20 ಮತ್ತು 21 ರಂದು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೈನಲ್ ಪಂದ್ಯಕ್ಕೆ 5 ಕಡೆ ಫ್ಯಾನ್ ಪಾರ್ಕ್ ಇರಲಿದೆ. ಮೇ 28 ರಂದು ನಡೆಯುವ ಫೈನಲ್ ಕದನಕ್ಕೆ ಜಮ್ಮು, ಜೆಮ್‌ಶೆಡ್‌ಪುರ, ಪಾಲಕ್ಕಾಡ್, ಜೋರ್ಹತ್ ಮತ್ತು ಭೋಪಾಲ್ ಒಟ್ಟು ಐದು ಕಡೆ ಫ್ಯಾನ್ ಪಾರ್ಕ್ ಇರಲಿದೆ.