ಮುಂಬಯಿ: ವಿಶ್ವದ ಕ್ಯಾಶ್ ರಿಚ್ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಆರಂಭಗೊಂಡು 16ನೇ ಆವೃತ್ತಿ ನಡೆಯುತ್ತಿದೆ. 2008ರಲ್ಲಿ ಆರಂಭಗೊಂಡ ಈ ಟೂರ್ನಿ ಇದೀಗ 1000 ಪಂದ್ಯದ ಹೊಸ್ತಿಲಲ್ಲಿ ಬಂದು ನಿಂತಿದೆ. ಏಪ್ರಿಲ್ 30ರಂದು ನಡೆಯುವ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಐಪಿಎಲ್‌ನ 1000ನೇ ಪಂದ್ಯ ಆಗಲಿದೆ. ಈ ಪಂದ್ಯವನ್ನು ಸ್ಮರಣೀಯವಾಗಿಸಲು ಬಿಸಿಸಿಐ ಭರ್ಜರಿಯಾಗಿ ಸಿದ್ಧತೆ ಆರಂಭಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಐಪಿಎಲ್‌ನ ಉದ್ಘಾಟನಾ ಸಮಾರಂಭದ ರೀತಿಯಲ್ಲೇ ಈ ಪಂದ್ಯಕ್ಕೂ ಮುನ್ನ ಹಲವು ಮನರಂಜನಾ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಉದ್ಘಾಟನಾ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆದಿತ್ತು. ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 222 ರನ್ ರಾಶಿ ಹಾಕಿತ್ತು. ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆರ್ಸಿಬಿ ಕೇವಲ 82 ರನ್ಗೆ ಆಲೌಟ್ ಆಗಿ 140 ರನ್ಗಳ ಅಂತರದ ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ IPL 2023: ರಾಹುಲ್ ಬ್ಯಾಟಿಂಗ್ ನೋಡಲು ಬೇಸರವಾಗುತ್ತಿದೆ; ಕೆವಿನ್ ಪಿಟರ್ಸನ್ ಹೇಳಿಕೆ
ಇದೇ ಪಂದ್ಯದಲ್ಲಿ ಕೆಕೆಆರ್ ಪರ ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಬ್ರೆಂಡನ್ ಮೆಕಲಮ್ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ 158 ರನ್ ಬಾರಿಸಿದ್ದರು. ಈ ಮೂಲಕ ಚೊಚ್ಚಲ ಆವೃತ್ತಿಯಲ್ಲೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ವಿಷೇಶ ಎಂದರೆ ಈ ಆವೃತ್ತಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಆಡಿದ್ದರು. ಚೊಚ್ಚಲ ಆವೃತ್ತಿಯಲ್ಲಿ ದಿವಂಗತ ಶೇನ್ ವಾರ್ನ್ ಅವರ ಸಾರಥ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.