ಕೋಲ್ಕೊತಾ: ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್(57) ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಾಧಾರಣ ಮೊತ್ತ ಪೇರಿಸಿದೆ. ರಾಜಸ್ಥಾನ್ ಪರ ಯಜುವೇಂದ್ರ ಚಹಲ್(4) ಮತ್ತು ಟ್ರೆಂಟ್ ಬೌಲ್ಟ್(2) ವಿಕೆಟ್ ಉಡಾಯಿಸಿ ಮಿಂಚಿದರು.
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 149 ರನ್ ಗಳಿಸಿದೆ. ಎದುರಾಳಿ ರಾಜಸ್ಥಾನ್ ಗೆಲುವಿಗೆ ಭರ್ತಿ 150 ರನ್ ಬಾರಿಸಬೇಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕನ ಆಯ್ಕೆಯನ್ನು ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರು ಸಮರ್ಥಿಸಿಕೊಂಡರು. ಆರಂಭಿಕರಾದ ಜೇಸನ್ ರಾಯ್(10) ಮತ್ತು ರಹ್ಮನುಲ್ಲ ಗುರ್ಬಜ್(18) ವಿಕೆಟ್ ಕಿತ್ತು ಕೆಕೆಆರ್ಗೆ ಅವಳಿ ಆಘಾತವಿಕ್ಕಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ವೆಂಕಟೇಶ್ ಅಯ್ಯರ್ ಮತ್ತು ನಾಯಕ ನಿತೀಶ್ ರಾಣಾ ಅವರು ನಿಧಾನಗತಿಯ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಉಭಯ ಆಟಗಾರರು ರಕ್ಷಣಾತ್ಮ ಆಟಕ್ಕೆ ಒತ್ತು ಕೊಟ್ಟ ಕಾರಣ ಪವರ್ ಪ್ಲೇಯಲ್ಲಿ ತಂಡ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾಯಿತು. ಆದರೆ 8 ಓವರ್ ಬಳಿಕ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಲು ಆರಂಭಿಸಿದ ಇವರು ಕೆಕೆಆರ್ ಬೌಲರ್ಗಳನ್ನು ಬೆಂಡೆತ್ತಲು ಆರಂಭಿಸಿದರು. 9ನೇ ಓವರ್ ಮಾಡಲು ಬಂದ ಆರ್.ಅಶ್ವಿನ್ಗೆ ವೆಂಕಟೇಶ್ ಅಯ್ಯರ್ ಅವರು ಸತತ ಎರಡು ಸಿಕ್ಸರ್ ಬಾರಿಸಿದರೆ ರಾಣಾ ಒಂದು ಬೌಂಡರಿ ಬಾರಿಸಿದರು. ಈ ಓವರ್ನಲ್ಲಿ 18 ರನ್ ಸೋರಿಕೆಯಾಯಿತು. ಜತೆಗೆ ತಂಡದ ಮೊತ್ತವು ಪ್ರಗತಿ ಕಂಡಿತು.
ದಾಖಲೆ ಬರೆದ ಚಹಲ್
ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ರಾಣಾ ಅವರನ್ನು ಮುಂದಿನ ಓವರ್ನಲ್ಲಿ ಚಹಲ್ ಅವರು ಔಟ್ ಮಾಡಿದರು. ರಾಣಾ ವಿಕೆಟ್ ಕೀಳುತ್ತಿದ್ದಂತೆ ಚಹಲ್ ಅವರು ಐಪಿಎಲ್ ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ಬರೆದರು. ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಪಂದ್ಯಕ್ಕೂ ಮುನ್ನ ಅವರು 183 ವಿಕೆಟ್ ಪಡೆದು ಲಸಿತ್ ಮಾಲಿಂಗ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಚಹಲ್ ಅವರು ರಾಣಾ ವಿಕೆಟ್ ಪಡೆದು ಮಾಲಿಂಗರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ರಾಣಾ ಅವರು 22 ರನ್ ಬಾರಿಸಿದರು.
ಅರ್ಧಶತಕ ಬಾರಿಸಿದ ವೆಂಕಿ
ರಾಣಾ ವಿಕೆಟ್ ಬಿದ್ದರೂ ವೆಂಕಟೇಶ್ ಅಯ್ಯರ್ ಅವರ ಬ್ಯಾಟಿಂಗ್ ಪ್ರತಾಪಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಅವರು ಬಿರುಸಿನ ಬ್ಯಾಟಿಂಗ್ ನಡೆಸುತ್ತಲೇ ಸಾಗಿದರು. ಚಹಲ್ ಅವರ ಓವರ್ನಲ್ಲಿಯೂ ಸಿಕ್ಸರ್, ಬೌಂಡರಿ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ರಸೆಲ್ ಅವರು ಆಸೀಸ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸಿ ಮುಂದಿನ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರ ಗಳಿಕೆ 10ಕ್ಕೆ ಸೀಮಿತಗೊಂಡಿತು. ಈ ರನ್ಗೆ ಅವರು 10 ಎಸೆತ ಎದುರಿಸಿದರು. ಅರ್ಧಶಕ ಬಾರಿಸಿ ಮುನ್ನುಗ್ಗುತ್ತಿದ್ದ ವೆಂಕಟೇಶ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ದಾಖಲೆ ವೀರ ಚಹಲ್ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ವೆಂಕಿ 42 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 57 ರನ್ ಬಾರಿಸಿದರು.
ಇದನ್ನೂ ಓದಿ IPL 2023: ಚೆನ್ನೈ ತಂಡದ ಅಭಿಮಾನಿಗಳ ಬಗ್ಗೆ ಜಡೇಜಾ ನೀಡಿದ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ
ಅಂತಿಮ ಹಂತದಲ್ಲಿ ರಿಂಕು ಸಿಂಗ್ ಕೂಡ ಅಗ್ಗಕ್ಕೆ ಔಟಾದ ಕಾರಣ ಕೆಕೆಆರ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ರಿಂಕು 16 ರನ್ ಗಳಿಸಿದರು. ಆದರೆ ಈ ರನ್ಗಳಿಸಲು ಅವರು 17 ಎಸೆತಗಳನ್ನು ಎದುರಿಸಬೇಕಾಯಿತು. ಈ ವಿಕೆಟ್ ಕೂಡ ಚಹಲ್ ಪಾಲಾಯಿತು. ನಾಲ್ಕು ಓವರ್ ಎಸೆತ ಚಹಲ್ ಅವರು 25 ರನ್ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್ ಕಿತ್ತರು. ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು.