ಕೋಲ್ಕೊತಾ: ಶನಿವಾರದ ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿರುವ ಲಕ್ನೋಗೆ ಈ ಪಂದ್ಯದಲ್ಲಿ ಗೆಲುವು ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಭಾರತದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ತಂಡವಾದ ATK ಮೋಹನ್ ಬಗಾನ್ ತಂಡದ ಜೆರ್ಸಿಯಲ್ಲಿ ಲಕ್ನೋ ತಂಡ ಕಣಕ್ಕಿಳಿಯಲಿದೆ. ಐತಿಹಾಸಿಕ ಫುಟ್ಬಾಲ್ ಕ್ಲಬ್‌ಗೆ ಗೌರವ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಂಡದ ಮಾಲಿಕ ಸಂಜೀವ್ ಗೋಯೆಂಕಾ ತಿಳಿಸಿದ್ದಾರೆ. ಸಂಜೀವ್ ಗೋಯೆಂಕಾ ಅವರು ಮೋಹನ್ ಬಗಾನ್ ತಂಡದ ಮಾಲಿಕರೂ ಆಗಿದ್ದಾರೆ.
“ಮೋಹನ್ ಬಗಾನ್ ಎನ್ನುವುದು ಕೇವಲ ಒಂದು ಸಂಸ್ಥೆಯಲ್ಲ, ಬದಲಾಗಿ ಅದೊಂದು ಎಮೋಷನ್. ಇದು ಕೋಲ್ಕತಾ ನಗರವನ್ನು ಪ್ರತಿನಿಧಿಸಿದ ಪರಂಪರೆಯಾಗಿದೆ. ನಮ್ಮ ಪಾಲಿಗೆ ಕೋಲ್ಕತಾವೂ ಒಂದು ರೀತಿಯ ತವರು ಇದ್ದ ಹಾಗೆ, ಹಾಗಾಗಿ ಲಕ್ನೋ ತಂಡಕ್ಕೂ ಇಲ್ಲಿನ ಅಭಿಮಾನಿಗಳು ಬೆಂಬಲ ನೀಡುವ ವೀಶ್ವಾಸವಿದೆ” ಎಂದು ತಂಡಗಳ ಮಾಲಿಕರಾದ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
ಲಕ್ನೋಗೆ ಮಾಡು ಇಲ್ಲ ಮಡಿ ಪಂದ್ಯ
ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆರ್ಸಿಬಿ ಗೆದ್ದ ಕಾರಣದಿಂದ ಲಕ್ನೋಗೆ ಪ್ಲೇ ಆಫ್ಗೇರಲು ಈ ಪಂದ್ಯದಲ್ಲಿ ಗೆಲುವು ಅಗತ್ಯ. ಒಂದೊಮ್ಮೆ ಆರ್ಸಿಬಿ ಕಳೆದ ಪಂದ್ಯದಲ್ಲಿ ಸೋಲುತ್ತಿದ್ದರೆ ಲಕ್ನೋ ಮತ್ತು ಚೆನ್ನೈ ತಂಡಗಳು ಪ್ಲೇ ಆಫ್ಗೆ ಪ್ರವೇಶ ಪಡೆಯುತ್ತಿತ್ತು. ಆದರೆ ಇದಕ್ಕೆ ಆರ್ಸಿಬಿ ಗೆಲುವಿನ ಮೂಲಕ ಅಡ್ಡಗಾಲಿಟ್ಟಿತು. ಸದ್ಯ ಲಕ್ನೋ ತಂಡ 15 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ ವಿರುದ್ಧ ಗೆದ್ದರೆ ದ್ವಿತೀಯ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.
ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ಅವರು ಗಾಯದಿಂದಾಗಿ ಬೇರ್ಪಟ್ಟರು ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟುಮಾಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಕೃಣಾಲ್ ಪಾಂಡ್ಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮಾರ್ಕಸ್ ಸ್ಟೋಯಿನಿಸ್, ಕ್ವಿಂಟನ್ ಡಿ ಕಾಕ್ ನಿಕೋಲಸ್ ಪೂರಣ್ ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಬೌಲಿಂಗ್ ನಲ್ಲಿ ನವೀನ್ ಉಲ್ ಹಕ್, ಮೊಹ್ಸಿನ್ ಖಾನ್ ಮತ್ತು ರವಿ ಬಿಷ್ಟೋಯಿ ಉತ್ತಮ ಲಯದಲ್ಲಿದ್ದಾರೆ.
ಕೋಲ್ಕತ್ತಾ ತಂಡ ಸದ್ಯ ಗೆದ್ದರೂ ಪ್ಲೇ ಆಪ್ ಪ್ರವೇಶ ಕಷ್ಟ ಸಾಧ್ಯ. 14 ಅಂಕ ಸಂಪಾದಿಸಿದರೂ ರನ್ ರೇಟ್ ಕಡಿಮೆ ಇದೆ. ಜತೆಗೆ ತನಗಿಂತ ಮೇಲಿರುವ ತಂಡಗಳು ದೊಡ್ಡ ಅಂತದಿಂದ ಸೋಲು ಕಾಣಬೇಕು. ಹೀಗಾಗಿ ಕ್ಷೀಣ ಅವಕಾಶ ಎನ್ನಬಹುದು. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಕೇವಲ ರಿಂಕು ಸಿಂಗ್ ಮತ್ತು ವೆಂಕಟೇಶ್ ಅಯ್ಯರ್ ಮಾತ್ರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಉಳಿದ ಬ್ಯಾಟರ್ಗಳ ಬ್ಯಾಟ್ ಸದ್ದು ಮಾಡುತ್ತಿಲ್ಲ ಬೌಲಿಂಗ್ ಕೂಡ ಅಷ್ಟಾಗಿ ಘಾತಕವಾಗಿ ಕಂಡುಬಂದಿಲ್ಲ. ಒಟ್ಟಾರೆ ಕೆಕೆಆರ್ ತನ್ನ ಅಂತಿಮ ಪಂದ್ಯದಲ್ಲಿ ಗೆದ್ದು ತವರಿನ ಅಭಿಮಾನಿಗಳಿಗೆ ಸಮಾಧಾನಪಡಿಸುವ ಯೋಜನೆಯಲ್ಲಿದೆ. ಆದರೆ ಇದಕ್ಕೆ ಸಂಘಟಿತ ಪ್ರದರ್ಶನ ಅಗತ್ಯ.
ಇದನ್ನೂ ಓದಿ IPL 2023: ರಾಜಕೀಯ ಒತ್ತಡದ ಮಧ್ಯೆಯೂ ಆರ್ಸಿಬಿ-ಹೈದರಾಬಾದ್ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ
ಸಂಭಾವ್ಯ ತಂಡಗಳು
ಲಕ್ನೊ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ (ನಾಯಕ), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯಿ, ಮೊಹ್ಸಿನ್ ಖಾನ್, ಅವೇಶ್ ಖಾನ್.
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ರಹ್ಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.