ಕ್ರೀಡೆ
ISL Final: ಎಟಿಕೆ ಮೋಹನ್ ಬಗಾನ್ ಚಾಂಪಿಯನ್
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿಎಟಿಕೆ ಮೋಹನ್ ಬಗಾನ್(ATK Mohun Bagan) ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಗೋವಾ: ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರು ಎಫ್‌ಸಿ(Bengaluru FC) ತಂಡ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ(ISL Final) ಎಟಿಕೆ ಮೋಹನ್ ಬಗಾನ್(ATK Mohun Bagan) ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲ್ಗಳ ಅಂತರದ ಸೋಲು ಕಂಡಿದೆ.
ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ರೋಚಕ ಹಣಾಹಣಿಯಲ್ಲಿ ನಿಗದಿತ ಸಮಯದ ಆಟದಲ್ಲಿ 2-2 ಗೋಲ್ಗಳಿಂದ ಪಂದ್ಯ ಸಮಬಲಗೊಂಡಿತು. ಹೆಚ್ಚುವರಿ ಆಟದಲ್ಲಿ ಉಭಯ ತಂಡಗಳು ಗೋಲ್ ಬಾರಿಸಲು ವಿಫಲವಾದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಾಬಲ್ಯ ಮೆರೆದ ಎಟಿಕೆ ಮೋಹನ್ ಬಗಾನ್ ತಂಡದ ಆಟಗಾರರು 4 ಗೋಲ್ ಬಾರಿಸಿ ಗೆಲುವು ದಾಖಲಿಸಿದರು. ಲೀಗ್‌ನ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ ಆ ಬಳಿಕ ಸತತ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಇಲ್ಲಿ ಎಡವಿ ಟ್ರೋಫಿ ಎತ್ತಿಹಿಡಿಯುವ ಅದೃಷ್ಟ ಕಳೆದುಕೊಂಡಿತು. ಐಎಸ್‌ಎಲ್‌ನಲ್ಲಿ 2017-18 ರಲ್ಲಿ ರನ್ನರ್ಸ್ ಅಪ್ ಆಗಿದ್ದ ಬಿಎಫ್‌ಸಿ, 2018-19 ರಲ್ಲಿ ಚಾಂಪಿಯನ್ ಆಗಿತ್ತು.
ಬಿಎಸ್‌ಫಿ ತಂಡ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿದ್ದರೆ, ಬಗಾನ್ ತಂಡ ಕಳೆದ ಬಾರಿಯ ಚಾಂಪಿಯನ್ ಹೈದರಾಬಾದ್ ಎಫ್‌ಸಿ ವಿರುದ್ಧ ಗೆದ್ದಿತ್ತು. ಎರಡೂ ಪಂದ್ಯಗಳು ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡಿದ್ದವು. ಇದೀಗ ಫೈನಲ್ ಕೂಡ ಶೂಟೌಟ್‌ನಲ್ಲಿ ಮುಕ್ತಾಯಗೊಂಡದ್ದು ವಿಶೇಷ.
ಕ್ರಿಕೆಟ್
Zaheer Khan: ಟೀಮ್ ಇಂಡಿಯಾ ಇನ್ನೂ ಹಳೆಯ ಬೋಟ್ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್ ಖಾನ್ ಹೀಗೆ ಹೇಳಿದ್ದು ಏಕೆ?
ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾ ಇನ್ನೂ ಹಳೆಯ ಬೋಟ್ನಲ್ಲೇ ಪ್ರಯಾಣಿಸುತ್ತಿದೆ ಎಂದು ಜಹೀರ್ ಖಾನ್ ಹೇಳಿದ್ದಾರೆ.
ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತ ಸೋಲು ಕಂಡ ಬಳಿಕ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲು ಆರಂಭಿಸಿದ್ದಾರೆ. ಇದೀಗ ಈ ಸಾಲಿಗೆ 2011ರ ವಿಶ್ವ ಕಪ್(2019 World Cup) ವಿಜೇತ ತಂಡ ವೇಗಿ ಜಹೀರ್ ಖಾನ್(Zaheer Khan) ಕೂಡ ಸೇರಿದ್ದಾರೆ. ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾ ಇನ್ನೂ ಹಳೆಯ ಬೋಟ್ನಲ್ಲೇ ಪ್ರಯಾಣಿಸುತ್ತಿದೆ ಎಂದು ಹೇಳಿದ್ದಾರೆ.
ಕ್ರಿಕ್ ಬಝ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಜಹೀರ್ ಖಾನ್ , “ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಖಂಡಿತವಾಗಿಯೂ ಮತ್ತೊಮ್ಮೆ ಚಿಂತಿಸುವ ಅಗತ್ಯವಿದೆ. ನಾಲ್ಕನೇ ಕ್ರಮಾಂಕದ ಆಯ್ಕೆಯ ಲೆಕ್ಕಾಚಾರ ಇನ್ನೂ ಬಗೆಹರಿದಿಲ್ಲ. ಇದು 2019ರ ವಿಶ್ವಕಪ್ನಲ್ಲೂ ಚರ್ಚೆಗೆ ಕಾರಣವಾಗಿತ್ತು. ನಾಲ್ಕು ವರ್ಷಗಳ ಬಳಿಕವೂ ನಾವು ಅದೇ ದೋಣಿಯಲ್ಲಿದ್ದೇವೆ. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದ ಆಟಗಾರ ಎಂದು ನನಗೆ ಗೊತ್ತು. ಆದರೆ ಅವರು ಈಗ ದೀರ್ಘಕಾಲದವರೆಗೆ ಗಾಯಗೊಂಡಿದ್ದರೆ. ಹೀಗಾಗಿ ಇದಕ್ಕೆ ಶೀಘ್ರದಲ್ಲೇ ಉತ್ತರ ಕಂಡುಕೊಳ್ಳಬೇಕಾದ ಸಮಯ ಬಂದಿದೆ” ಎಂದು ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಜಹೀರ್ ಸಲಹೆಯೊಂದನ್ನು ನೀಡಿದ್ದಾರೆ.
ಭಾರತದ ಏಕದಿನ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಲ್ಲಿದ್ದ ಸೂರ್ಯಕುಮಾರ್ ಯಾದವ್(Suryakumar Yadav) ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಸತತ ಮೂರು ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಇದು ಅವರ ಏಕದಿನ ಭವಿಷ್ಯದ ಮೇಲೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ. ಇನ್ನೊಂದೆಡೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಒಟ್ಟಾರೆ ಭಾರತದಲ್ಲಿ ಸದ್ಯ ಕೊಹ್ಲಿ ಮತ್ತು ರೋಹಿತ್ ಅವರನ್ನು ಹೊರತುಪಡಿಸಿ ಇನಿಂಗ್ಸ್ ಕಟ್ಟುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ World Cup 2023 : ಟೀಕೆ ನಿಲ್ಲಿಸಿ, ವಿಶ್ವ ಕಪ್ ಗೆಲ್ಲಲಿದೆ ಭಾರತ ತಂಡ ಎಂದಿದ್ದಾರೆ ಮಾಜಿ ಹೆಡ್ ಕೋಚ್
ನಾವು ವಿಶ್ವ ಕಪ್ ಗೆಲ್ಲುವ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂತರ ಶ್ರೇಷ್ಠ ಆಟಗಾರರನ್ನು ಹೊಂದಿದ್ದೆವು. ಆದರೆ ಈಗ ಭಾರತದಲ್ಲಿ ಇಂತಹ ಮ್ಯಾಚ್ ವಿನ್ನಿಂಗ್ ಮತ್ತು ಇನಿಂಗ್ಸ್ ಬೆಳೆಸುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಾಣದ ಹೊರತು ಭಾರತ ವಿಶ್ವ ಕಪ್ ಗೆಲ್ಲುವುದು ಅನುಮಾನ ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟರು.
ಕ್ರಿಕೆಟ್
WPL 2023: ಫೈನಲ್‌ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್
ಮುಂಬೈ ತಂಡದ ಆಟಗಾರ್ತಿಯರೊಂದಿಗೆ ನೀತಾ ಅಂಬಾನಿ ಅವರು ಡ್ಯಾನ್ಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬಯಿ: ಯುಪಿ ವಾರಿಯರ್ಸ್ ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 72 ರನ್ಗಳ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್(Mumbai Indians) ತಂಡ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಫೈನಲ್ ಪ್ರವೇಶಿಸಿದೆ. ಇದೇ ಖಷಿಯಲ್ಲಿ ತಂಡದ ಮಾಲಕಿಯಾಗಿರುವ ನೀತಾ ಅಂಬಾನಿ ಅವರು ಆಟಗಾರ್ತಿಯರೊಂದಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೂತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ ನ್ಯಾಟ್ ಸ್ಕಿವರ್-ಬ್ರಂಟ್(Nat Sciver-Brunt) ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 182 ರನ್ ಬಾರಿಸಿ ಸವಾಲೊಡ್ಡಿತು. ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಯುಪಿ ವಾರಿಯರ್ಸ್ ತಂಡ 17.4 ಓವರ್ಗಳಲ್ಲಿ ಕೇವಲ 110 ರನ್ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಮುಂಬೈ ಈ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿತು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಉಭಯ ತಂಡಗಳ ಈ ಹೋರಾಟ ಬ್ರಬೋರ್ನ್ ಕ್ರೀಡಾಂಗಣದಲ್ಲಿ.
ಫೈನಲ್ ಪ್ರವೇಶ ಪಡೆದ ಸಂಭ್ರಮದಲ್ಲಿ ನೀತಾ ಅಂಬಾನಿ ಅವರು ತಂಡದ ಎಲ್ಲ ಸದಸ್ಯರ ಹೆಸರನ್ನು ಕೂಗುವ ಮೂಲಕ ಡ್ಯಾನ್ಸ್ ಮಾಡಿದ್ದಾರೆ. ಜತೆಗೆ ತಂಡದ ಆಟಗಾರ್ತಿಯರೂ ಡ್ಯಾನ್ಸ್ ಮಾಡುವಂತೆ ಹುರಿದುಂಬಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹ್ಯಾಟ್ರಿಕ್ ವಿಕೆಟ್ ಕಿತ್ತು ದಾಖಲೆ ಬರೆದ ಇಸ್ಸಿ ವಾಂಗ್
ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿ ಇಸ್ಸಿ ವಾಂಗ್(Issy Wong) ಅವರು ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್(WPL 2023) ಲೀಗ್ನಲ್ಲಿ ಇತಿಹಾಸ ನಿರ್ಮಿಸಿದರು. ಹ್ಯಾಟ್ರಿಕ್ ಸಹಿತ 4 ವಿಕೆಟ್ ಕಿತ್ತು ಮಿಂಚಿದರು.
ಕ್ರೀಡೆ
Moto GP : ಫೋರ್ಚುಗಲ್ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್ ರೇಸ್
ಪೋರ್ಚುಗಲ್ನಲ್ಲಿ ನಡೆಯುತ್ತಿರುವುದು ಪ್ರಸಕ್ತ ಋತುವಿನ ಮೊದಲ ರೇಸ್ ಆಗಿದ್ದು, ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅಯೋಜನೆಗೊಂಡಿದೆ.
ಬೆಂಗಳೂರು: ಜಗತ್ತಿನ ಅತಿ ದೊಡ್ಡ ಮೋಟಾರ್ಸೈಕಲ್ ರೇಸ್ ಮೋಟೊ ಜಿಪಿಯ ಮೊದಲ ಸುತ್ತು ಮಾರ್ಚ್ 24ರಂದು ಪೋರ್ಚಗಲ್ನಲ್ಲಿ ಆರಂಭಗೊಂಡಿದೆ. ಅದರ ಫೈನಲ್ ರೇಸ್ ಭಾನುವಾರ (ಮಾರ್ಚ್ 26ರಂದು) ನಡೆಯಲಿದೆ. ಎರಡು ದಿನಗಳ ಅಭ್ಯಾಸದ ಬಳಿಕ ರೇಸರ್ಗಳು ಅಂತಿಮ ರೇಸ್ಗೆ ಸಜ್ಜಾಗಿದ್ದಾರೆ. ಇದು ಹಾಲಿ ಋತುವಿನ ಮೊದಲ ರೇಸ್ ಆಗಿದೆ. ಶನಿವಾರ ನಡೆದ ಅರ್ಹತಾ ಸುತ್ತಿನ ರೇಸ್ನಲ್ಲಿ ಹೋಂಡಾದ ಸವಾರ ಮಾರ್ಕ್ ಮಾರ್ಕ್ವೆಜ್ ಗೆಲುವು ಸಾಧಿಸಿದ್ದಾರೆ.
ಪೊರ್ಟಿಮೊದಲ್ಲಿ ನಡೆದ ಈ ರೇಸ್ನಲ್ಲಿ 1 ನಿಮಿಷ 37.226 ಸೆಕೆಂಡ್ಗಳಲ್ಲಿ ಒಂದು ಲ್ಯಾಪ್ ಪೂರ್ಣಗೊಳಿಸುವ ಮೂಲಕ ದಾಖಲೆ ಸೃಷ್ಟಿಸಿದ ಹೋಂಡಾದ ರೇಸರ್ ಮಾರ್ಕ್ವೆಜ್ ಫೈನಲ್ ರೇಸ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 1’37.290 ರೇಸ್ ಮುಗಿಸಿದ ಡುಕಾಟಿಯ ಫ್ರಾನ್ಸೆಸ್ಕೊ ಬಗಾನಿಯಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಡುಕಾಟಿಯ ಸವಾರರೇ ಆಗಿರುವ ಜಾರ್ಜ್ ಮಾರ್ಟಿನಾ (1’37.454) ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 21 ರೇಸ್ಗಳು
ಹಾಲಿ ಋತುವಿನಲ್ಲಿ ಒಟ್ಟು 21 ರೇಸ್ಗಳು ನಡೆಯಲಿದೆ. ಮಾರ್ಚ್ 24ರಂದು ಆರಂಭಗೊಂಡ ರೇಸ್ ನವೆಂಬರ್ 26ರಂದು ಕೊನೆಯಾಗಲಿದೆ. ಕೊನೇ ರೇಸ್ ವೆಲೆನ್ಸಿಯಾದಲ್ಲಿ ನಡೆಯಲಿದೆ. ಅದಕ್ಕಿಂತ ಮೊದಲು 21 ರಾಷ್ಟ್ರಗಳಲ್ಲಿ ಈ ರೇಸ್ ಸುತ್ತಲಿದೆ. ಗರಿಷ್ಠ ರೇಸ್ಗಳನ್ನು ಗೆಲ್ಲುವ ಸವಾರರು ಚಾಂಪಿಯನ್ಪಟ್ಟ ಪಡೆಯಲಿದ್ದಾರೆ. ಹೋಂಡಾ ಕಂಪನಿಯ ಮಾರ್ಕ್ ಮಾರ್ಕ್ವೆಜ್ ಸ್ಪರ್ಧೆಯಲ್ಲಿರುವ ಒಟ್ಟು 8 ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದ ರೇಸರ್ ಆಗಿದ್ದಾರೆ.
ಇದನ್ನೂ ಓದಿ : Moto GP : ಜಿಯೊ ಹವಾ; ಜಗತ್ತಿನ ಅತಿ ದೊಡ್ಡ ಮೋಟಾರ್ಸೈಕಲ್ ರೇಸ್ ಉಚಿತ ಪ್ರಸಾರ
ಭಾರತದಲ್ಲಿ ಇದೇ ಮೊದಲು ರೇಸ್
ಈ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೊಟೊ ಜಿಪಿ ಸ್ಪರ್ಧೆ ನಡೆಯಲಿದೆ. ಮೊಟೊ ಜಿಪಿ ಆಯೋಜಕ ಸಂಸ್ಥೆಯಾಗಿರುವ ಡೊರ್ನಾದಿಂದ ಆತಿಥ್ಯ ಪಡೆಯಲು ಭಾರತದ ಫೇರ್ಸ್ಟ್ರೀಟ್ ಸ್ಪೋರ್ಟ್ಸ್ ಸಂಸ್ಥೆ ಯಶಸ್ಸು ಗಳಿಸಿದೆ. ಸೆಪ್ಟೆಂಬರ್ 22ರಿಂದ 24ರವರೆಗೆ ಗ್ರೇಟರ್ ನೊಯ್ಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ರೇಸ್ ನಡೆಯಲಿದೆ. ಇದು ಈ ಋತುವಿನ 14ನೇ ರೇಸ್ ಆಗಿದೆ. ಭಾರತದ ಮೋಟಾರ್ ಸೈಕಲ್ ರೇಸ್ ಅಭಿಮಾನಿಗಳ ಪಾಲಿಗೆ ಇದು ಶುಭ ಸುದ್ದಿಯಾಗಿದೆ.
ಈ ಬಾರಿಯ ಮೊಟೊ ಜಿಪಿಯ ಭಾರತದಲ್ಲಿ ನೇರ ಪ್ರಸಾರದ ಹಕ್ಕನ್ನು ಜಿಯೊ ಸಂಸ್ಥೆ ತನ್ನದಾಗಿಸಿಕೊಂಡಿದೆ. ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶವಿದೆ.
2023ರ ಮೋಟೊ ಜಿಟಿ ವೇಳಾಪಟ್ಟಿ ಇಂತಿದೆ
- ಮಾರ್ಚ್ 24-26 ಪೋರ್ಚುಗಲ್ ಗ್ರ್ಯಾನ್ ಪ್ರಿ
- ಮಾರ್ಚ್ 31-ಏಪ್ರಿಲ್ 2 ಅರ್ಜೆಂಟೀನಾ ಗ್ರ್ಯಾನ್ ಪ್ರಿ
- ಏಪ್ರಿಲ್ 14-16 ಅಮೆರಿಕ ಗ್ರ್ಯಾನ್ ಪ್ರಿ
- ಏಪ್ರಿಲ್ 28-30 ಸ್ಪಾನಿಶ್ ಗ್ರ್ಯಾನ್ ಪ್ರಿ
- ಮೇ 12-14 ಫ್ರೆಂಚ್ ಗ್ರ್ಯಾನ್ ಪ್ರಿ
- ಜೂನ್ 09-11 ಇಟಲಿ ಗ್ರ್ಯಾನ್ ಪ್ರಿ
- ಜೂನ್ 16-18 ಜರ್ಮನ್ ಗ್ರ್ಯಾನ್ ಪ್ರಿ
- ಜೂನ್ 23-25 ಡಚ್ ಗ್ರ್ಯಾನ್ ಪ್ರಿ
- ಜುಲೈ 7-9 ಕಜಕಸ್ತಾನ ಗ್ರ್ಯಾನ್ ಪ್ರಿ
- ಆಗಸ್ಟ್ 4-6 ಬ್ರಿಟಿಷ್ ಗ್ರ್ಯಾನ್ ಪ್ರಿ
- ಆಗಸ್ಟ್ 4-6 ಆಸ್ಟ್ರೀಯಾ ಗ್ರ್ಯಾನ್ ಪ್ರಿ
- ಆಗಸ್ಟ್ 18-20 ಗ್ರ್ಯಾನ್ ಪ್ರಿ ವೊನ್ ಒಸ್ಟೆರಿಚ್, ಆಸ್ಟ್ರಿಯಾ
- ಸೆಪ್ಟೆಂಬರ್ 1-3 ಕ್ಯಾಟಲಾನ್ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 8-10 ಸ್ಯಾನ್ ಮರಿನೊ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 22-24 ಇಂಡಿಯನ್ ಗ್ರ್ಯಾನ್ ಪ್ರಿ
- ಸೆಪ್ಟೆಂಬರ್ 29-ಅಕ್ಟೋಬರ್ 1 ಜಪಾನ್ ಗ್ರ್ಯಾನ್ ಪ್ರಿ
- ಅಕ್ಟೋಬರ್ 13-15 ಇಂಡೋನೇಷ್ಯಾ ಗ್ರ್ಯಾನ್ ಪ್ರಿ
- ಅಕ್ಟೋಬರ್ 20-22 ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿ
- ಅಕ್ಟೋಬರ್ 27-29 ಥಾಯ್ಲೆಂಡ್ ಗ್ರ್ಯಾನ್ ಪ್ರಿ
- ನವೆಂಬರ್ 10-12 ಮಲೇಷ್ಯಾ ಗ್ರ್ಯಾನ್ ಪ್ರಿ
- ನವೆಂಬರ್ 17-19 ಕತಾರ್ ಗ್ರ್ಯಾನ್ ಪ್ರಿ
- ನವೆಂಬರ್ 24-26 ವಲೆನ್ಸಿಯಾ ಗ್ರ್ಯಾನ್ ಪ್ರಿ
ಕ್ರೀಡೆ
Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ಗಳಾದ ನೀತು ಗಂಗಾಸ್ ಮತ್ತು ಸ್ವೀಟಿ ಬೂರಾ ಚಿನ್ನದ ಪದಕಕ್ಕೆ ಪಂಚ್ ನೀಡಿದ್ದಾರೆ.
ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Women’s Boxing) ಭಾರತದ ಬಾಕ್ಸರ್ಗಳು ಪ್ರಾಬಲ್ಯ ಮರೆದಿದ್ದಾರೆ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2 ಚಿನ್ನದ ಪದಕ ಗೆದ್ದಿದೆ. ಆರಂಭದಲ್ಲಿ ನೀತು ಗಂಗಾಸ್ ಚಿನ್ನ ಗೆದ್ದು ಭಾರತದ ಖಾತೆ ತೆರೆದರೆ ಇದರ ಬೆನ್ನಲ್ಲೇ ಸ್ವೀಟಿ ಬೂರಾ(Saweety Boora) ಕೂಡ ಚಿನ್ನದ ಪದಕ ಗೆದ್ದು ಸಿಹಿ ಸುದ್ದಿ ನೀಡಿದರು.
ಶನಿವಾರ ಇಲ್ಲಿ ನಡೆದ 81 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ವೀಟಿ ಬೂರಾ ಅವರು 4-3 ಅಂಕಗಳ ಅಂತರದಿಂದ ಚೀನಾದ ವಾಂಗ್ ಲೀನಾ ಅವರನ್ನು ಪ್ರಬಲ ಪಂಚ್ಗಳ ಮೂಲಕ ಹಿಮ್ಮೆಟ್ಟಿಸಿದರು. ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಆರಂಭಿಕ ಬೌಟ್ನಲ್ಲಿ ಸ್ವೀಟಿ ಬೂರಾ ಹಿನ್ನಡೆ ಅನುಭವಿಸಿದರೂ ಆ ಬಳಿಕದ ಬೌಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟು ಅಂತಿಮವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.
ಇದಕ್ಕೂ ಮುನ್ನ ನಡೆದ ದಿನದ ಮತ್ತೊಂದು ಪಂದ್ಯದಲ್ಲಿ 48 ಕೆಜಿ ವಿಭಾಗದದ ಫೈನಲ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀತು ಗಂಗಾಸ್ ಚಿನ್ನ ಗೆದ್ದಿದ್ದರು. ಅವರು ಪ್ರಬಲ ಪಂಚ್ಗಳ ಮೂಲಕ ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ World Women’s Boxing; ಚಿನ್ನದ ಪದಕಕ್ಕೆ ಪಂಚ್ ನೀಡಿದ ನೀತು ಗಂಗಾಸ್
ಇನ್ನೂ ಎರಡು ಚಿನ್ನ ನಿರೀಕ್ಷೆ
ಭಾನುವಾರ ನಡೆಯುವ 52 ಕೆಜಿ ವಿಭಾಗದಲ್ಲಿ ನಿಖತ್ ಮತ್ತು 75 ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಫೈನಲ್ ಪಂದ್ಯ ಆಡಿಲಿದ್ದಾರೆ. ಉಭಯ ಬಾಕ್ಸರ್ಗಳ ಮೇಲು ಪದಕ ನಿರೀಕ್ಷೆ ಇರಿಸಲಾಗಿದೆ. ಒಂದೊಮ್ಮೆ ಈ ಇಬ್ಬರು ಫೈನಲ್‌ನಲ್ಲಿ ಗೆದ್ದರೆ ಭಾರತ ನಾಲ್ಕು ಚಿನ್ನದ ಪದಕ ಗೆದ್ದಂತಾಗುತ್ತದೆ.
-
ಸುವಚನ24 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ22 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ20 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ