ಮೊಹಾಲಿ: ಐಪಿಎಲ್ 16ನೇ ಆವೃತ್ತಿಯ ಶನಿವಾರದ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧ ಟಾಸ್ ಸೋತ ಪಂಜಾಬ್ ಕಿಂಗ್ಸ್ (Punjab Kings) ಮೊದಲು ಬ್ಯಾಟಿಂಗ್ ನಡೆಸಲಿದೆ. ಟಾಸ್ ಗೆದ್ದ ಕೆಕೆಆರ್ನ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಉಭಯ ತಂಡಗಳು ನೂತನ ನಾಯಕರನ್ನು ಹೊಂದಿರುವುದು ವಿಶೇಷ. ಪಂಜಾಬ್ ತಂಡವನ್ನು ಶಿಖರ್ ಧವನ್ ಹಾಗೂ ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಪಂಜಾಬ್ ತಂಡವನ್ನು ಮಾಯಾಂಕ್ ಅಗರ್ವಾಲ್ ಹಾಗೂ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಇಸಿಬಿಯಿಂದ ಇನ್ನೂ ಕ್ಲಿಯರೆನ್ಸ್ ಪಡೆಯದ ಲಿಯಮ್ ಲಿವಿಂಗ್‌ಸ್ಟೋನ್, ರಾಷ್ಟ್ರೀಯ ತಂಡದೊಂದಿಗೆ ಸರಣಿ ಆಡುತ್ತಿರುವ ಕಾಗಿಸೊ ರಬಾಡ ಅವರ ಸೇವೆ ಈ ಪಂದದಲ್ಲಿ ಪಂಜಾಬ್ ತಂಡಕ್ಕೆ ಲಭ್ಯವಿರುವುದಿಲ್ಲ.
ಪಂಜಾಬ್ vs ಕೋಲ್ಕೊತಾ ತಂಡಗಳ ಬಲಾಬಲ
ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಯುವ ಆಟಗಾರರನ್ನೇ ಹೊಂದಿದೆ. ಕಳೆದ ಬಾರಿ ಪಂಜಾಬ್ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕರಾಗಿದ್ದರು. ಈ ಬಾರಿ ಶಿಖರ್ ಧವನ್ಗೆ ಹೊಣೆಗಾರಿಕೆ ವಹಿಸಲಾಗಿದೆ. ಭಾರತ ಏಕ ದಿನ ತಂಡದ ನಾಯಕತ್ವ ವಹಿಸಿ ಅಭ್ಯಾಸ ಹೊಂದಿರುವ ಅವರು ಈ ಪಂದ್ಯದಲ್ಲಿ ಮತ್ತೊಂದು ಬಾರಿ ತಮ್ಮ ನಾಯಕತ್ವದ ಪಟ್ಟುಗಳನ್ನು ಪ್ರದರ್ಶಿಸಲಿದ್ದಾರೆ. ಶಾರುಖ್ ಖಾನ್, ಭಾನುಕಾ ರಾಜಪಕ್ಷ, ಸಿಕಂದರ್ ರಾಜಾ. ಸ್ಯಾಮ್ ಕರ್ರನ್, ರಿಶಿ ಧವನ್, ರಾಹುಲ್ ಚಾಹರ್ ಹಾಗೂ ವೇಗಿ ಅರ್ಶ್ದೀಪ್ ಸಿಂಗ್ ಈ ತಂಡದ ಬಲಶಾಲಿ ಆಟಗಾರರು. ಅತ್ತ ಕೆಕೆಆರ್ ತಂಡಕ್ಕೆ ಸವಾಲು ಹೆಚ್ಚಿದೆ. ಕಾಯಂ ನಾಯಕರ ಕೊರತೆಯಲ್ಲಿ ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಸುನೀಲ್ ನರೈನ್, ಶಾರ್ದುಲ್ ಠಾಕೂರ್, ವರುಣ್ ಚಕ್ರವರ್ತಿ, ರಮನುಲ್ಲಾ ಗುರ್ಬಜ್, ಲಾಕಿ ಫರ್ಗ್ಯೂಸನ್, ಉಮೇಶ್ ಯಾದವರ್ ಅವರ ಶಕ್ತಿಯನ್ನು ಬಳಸಿಕೊಂಡು ಗೆಲ್ಲಬೇಕಾಗಿದೆ.
ಪಂದ್ಯದ ಸ್ಥಳ : ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ ಮೊಹಾಲಿ
ದಿನದ ಎರಡನೇ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ಹಾಗೂ ಡೇವಿಡ್ ವಾರ್ನರ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯವೂ ಅತ್ಯಂತ ರೋಚಕವಾಗಿ ನಡೆಯುವ ಲಕ್ಷಣಗಳಿವೆ.