ಚೆನ್ನೈ: ಅತ್ಯಂತ ರೋಚಕವಾಗಿ ನಡೆದ ನಡೆದ ಐಪಿಎಲ್ 16ನೇ ಆವೃತ್ತಿಯ (IPL 2023) 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ವಿಜಯ ಸಾಧಿಸಿದೆ. ಕೊನೇ ಎಸೆತದಲ್ಲಿ ಗೆಲುವಿಗೆ ಬೇಕಾಗಿದ್ದ ಮೂರು ರನ್ಗಳನ್ನು ಬಾರಿಸಿದ ಪಂಜಾಬ್ ತಂಡ ವಿಜಯೋತ್ಸವ ಆಚರಿಸಿದರೆ, ತವರಿನ ಪ್ರೇಕ್ಷಕರ ಮುಂದೆ ಚೆನ್ನೈ ತಂಡಕ್ಕೆ ತೀವ್ರ ನಿರಾಸೆ ಉಂಟಾಯಿತು. ಇದು ಕೂಡ ಹಾಲಿ ಆವೃತ್ತಿಯ ಮತ್ತೊಂದು ಲಾಸ್ಟ್ ಬಾಲ್ ಥ್ರಿಲ್ ಪಂದ್ಯ ಎನಿಸಿಕೊಂಡಿತು.
ಇಲ್ಲಿನ ಚಿದಂಬರಮ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ಪೂರಕವಾಗಿ ಆಡಿದ ಚೆನ್ನೈ ತಂಡದ ಬ್ಯಾಟರ್ಗಳು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿ ಗೆಲುವು ಸಾಧಿಸಿತು.
ದೊಡ್ಡ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವೂ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ 50 ರನ್ ಬಾರಿಸಿ ವಿಶ್ವಾಸ ಮೂಡಿಸಿಕೊಂಡಿತು. ಆದರೆ, ಶಿಖರ್ ಧವನ್ 28 ರನ್ಗಳಿಗೆ ಔಟಾದರು. ಬಳಿಕ ಬಂದ ಅಥರ್ವ ಟೈಡೆ 13 ರನ್ಗಳಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಂದು ಬಾರಿ ಹಿನ್ನಡೆಗೆ ಕಾರಣರಾದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಲಿಯಾಮ್ ಲಿವಿಂಗ್ಸ್ಟನ್ 4 ಸಿಕ್ಸರ್ ಹಾಗೂ ಒಂದು ಫೋರ್ ಮೂಲಕ 24 ಎಸೆತಗಳಲ್ಲಿ 40 ರನ್ ಬಾರಿಸಿ ಗೆಲುವಿಗೆ ಹಾದಿ ಮಾಡಿಕೊಟ್ಟರು.
ಇದನ್ನೂ ಓದಿ : Most Wickets Lost In Powerplay: 2023ರ ಆವೃತ್ತಿಯ ಐಪಿಎಲ್ನಲ್ಲಿ ಪವರ್ಪ್ಲೇ ಅವಧಿಯಲ್ಲಿ ಅತಿ ಹೆಚ್ಚು ವಿಕೆಟ್ ಕಳೆದುಕೊಂಡ ತಂಡಗಳು
ಇದಾದ ಬಳಿಕ ಸ್ಯಾಮ್ ಕರ್ರನ್ (29) ಹಾಗೂ ಜಿತೇಶ್ ಶರ್ಮಾ (21) ಹೋರಾಟ ಸಂಘಟಿಸಿದರು. ಇವರಿಬ್ಬರ ವಿಕೆಟ್ ಪತನಗೊಂಡ ಬಳಿಕ ಪಂದ್ಯ ಕುತೂಹಲ ಘಟ್ಟಕ್ಕೆ ತೆರಳಿತು. ಕೊನೇ ಓವರ್ನಲ್ಲಿ ಪಂಜಾಬ್ ತಂಡದ ಗೆಲುವಿಗೆ 9 ರನ್ಗಳ ಬೇಕಾಗಿದ್ದವು. ಯಾವುದೇ ಬೌಂಡರಿ ಅಥವಾ ಸಿಕ್ಸರ್ ಬಾರಿಸದೇ ಪಂಜಾಬ್ ತಂಡ ಈ ಮೊತ್ತವನ್ನು ಭೇದಿಸಿತು.
ಅದಕ್ಕಿಂತ ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭದ್ರ ಅಡಿಪಾಯ ಪಡೆಯಿತು. ಡೆವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ (37) ಮೊದಲ ವಿಕೆಟ್ಗೆ 86 ರನ್ ಬಾರಿಸಿದರು. ಆದರೆ, 9.4 ಓವರ್ಲ್ಲಿ ಈ ಜೋಡಿ ಬೇರ್ಪಟ್ಟಿತು. ಸ್ಪಿನ್ನರ್ ಸಿಕಂದರ್ ರಾಜಾ ಎಸೆತಕ್ಕೆ ಗಾಯಕ್ವಾಡ್ ಸ್ಟಂಪ್ ಔಟ್ ಆದರು. ಬಳಿಕ ಆಡಲು ಬಂದ ಶಿವಂ ದುಬೆ ಎಂದಿನಂತೆ ಸ್ಪೋಟಕ ಬ್ಯಾಟಿಂಗ್ ಮಾಡಲು ಮುಂದಾದರು. 17 ಎಸೆತಕ್ಕೆ 28 ರನ್ ಬಾರಿಸಿದ ಅವರು ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಸ್ಪಿನ್ನರ್ ಮೊಯೀನ್ ಅಲಿ 10 ರನ್ಗೆ ಸೀಮಿತಗೊಂಡರು. ರವೀಂದ್ರ ಜಡೇಜಾ (12) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಕಾನ್ವೆ ಅಬ್ಬರ
ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಡೆವೋನ್ ಕಾನ್ವೆ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ನಡೆಸಿದರು. ಋತುರಾಜ್ ಜತೆ ಉತ್ತಮ ಜತೆಯಾಟ ನೀಡಿದ ಅವರು 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಕೊನೇ ತನಕ ಔಟಾಗದೇ ಉಳಿದ ಅವರು 92 ರನ್ ಬಾರಿಸಿದರು. ಅವರು 8 ರನ್ಗಳಿಂದ ಕೊರತೆಯಿಂದ ಟೂರ್ನಿಯ ಎರಡನೇ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಕಾನ್ವೆ ಇನಿಂಗ್ಸ್ನಲ್ಲಿ 16 ಫೋರ್ ಹಾಗೂ 1 ಸಿಕ್ಸರ್ ಸೇರಿಕೊಂಡಿದೆ.
ಧೋನಿ ಸಿಕ್ಸರ್
41 ವರ್ಷದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಅಭಿಮಾನಿಗಳನ್ನು ಸತತ ಎರಡು ಸಿಕ್ಸರ್ಗಳ ಮೂಲಕ ರಂಜಿಸಿದರು. ಇನಿಂಗ್ಸ್ ಮುಕ್ತಾಯಕ್ಕೆ ಐದು ಎಸೆತಗಳು ಬಾಕಿ ಇರುವಾಗ ಬಂದ ಅವರು ನಾಲ್ಕು ಎಸೆಗಳನ್ನು ಬಳಸಿಕೊಂಡು 13 ರನ್ ಬಾರಿಸಿದರು, ಅದರಲ್ಲಿ ಎರಡು ಸಿಕ್ಸರ್ಗಳು ಸೇರಿಕೊಂಡಿವೆ.