Site icon Vistara News

IPL 2023: ರಾಯಲ್ಸ್​ ಮೇಲೆ ಸವಾರಿ ಮಾಡಿದ ಪಂಜಾಬ್​ ಕಿಂಗ್ಸ್​; 5 ರನ್ ರೋಚಕ​ ಗೆಲುವು

ipl-18th-match-between-gujarat-and-punjab-kings

ಗುವಾಹಟಿ: ಅತ್ಯಂತ ರೋಚಕವಾಗಿ ನಡೆದ ಬುಧವಾರದ ಐಪಿಎಲ್​ನ(IPL 2023) ಹಾವು ಏಣಿ ಆಟದಲ್ಲಿ ಕೊನೆಗೂ ಪಂಜಾಬ್​ ಕಿಂಗ್ಸ್(Punjab Kings)​ ಕೈ ಮೇಲಾಗಿದೆ. ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ 5 ರನ್ ಅಂತರದಿಂದ ಗೆದ್ದು ಬೀಗಿದೆ. ಶಿಖರ್​ ಧವನ್​ ಪಡೆಗೆ ಇದು ಟೂರ್ನಿಯಲ್ಲಿ ಸತತ ಎರಡನೇ ಗೆಲುವಾಗಿದೆ.

ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಪಂಜಾಬ್​ ಕಿಂಗ್ಸ್(Punjab Kings) ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 197 ರನ್​ ಗಳಿಸಿತು. ಜವಾಬಿತ್ತ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್​ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್​ ಗಳ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಗುರಿ ಬೆನ್ನಟ್ಟುವ ವೇಳೆ ಆರ್​. ಅಶ್ವಿನ್​ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಪ್ರಯೋಗ ನಡೆಸಿದ ರಾಜಸ್ಥಾನ್​ ಕೈ ಸುಟ್ಟುಕೊಂಡಿತು. ಅಶ್ವಿನ್​ ನಾಲ್ಕು ಎಸೆತ ಎದುರಿಸಿ ಶೂನ್ಯ ಸುತ್ತಿದರು. ವನ್​ಡೌನ್​ನಲ್ಲಿ ಕ್ರೀಸ್​ಗಿಳಿದ ಜಾಸ್​ ಬಟ್ಲರ್​ ಕೂಡ 19 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್(11)​ ಕೂಡ ವಿಕೆಟ್​ ಕೈಚೆಲ್ಲಿದರು. ಅರ್ಶ್​ದೀಪ್​ ಸಿಂಗ್​ ಆರಂಭಿಕರಿಬ್ಬರ ವಿಕೆಟ್​ ಕಿತ್ತರೆ ನಥಾನ್​ ಎಲ್ಲಿಸಿ ಬಟ್ಲರ್​ ವಿಕೆಟ್​ ಉಡಾಯಿಸಿದರು. ಇಲ್ಲಿಂದ ರಾಜಸ್ಥಾನ್​ ಕುಸಿತವು ಆರಂಭಗೊಂಡಿತು.

ತಂಡದ ವಿಕೆಟ್​ ಉರುಳುತ್ತಿದ್ದರು ಮತ್ತೊಂದು ಬದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್​ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ ಅವರ ಆಟವೂ 42 ರನ್​ಗೆ ಅಂತ್ಯ ಕಂಡಿತು. ಸಂಜು ಬಳಿಕ ತಂಡವನ್ನು ಆಧರಿಸಿದವರೆಂದರೆ ದೇವದತ್ತ ಪಡಿಕ್ಕಲ್​ ಮತ್ತು ರಿಯಾನ್​ ಪರಾಗ್​ ಸೇರಿಕೊಂಡು ಆಕ್ರಮಣದ ಸೂಚನೆ ನೀಡಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಪರಾಗ್​ ಗಳಿಕೆ 12 ಎಸೆತಗಳಿಂದ 20 ರನ್‌ (2 ಸಿಕ್ಸರ್‌, ಒಂದು ಬೌಂಡರಿ). ಪಡಿಕ್ಕಲ್​ 21 ರನ್‌ ಮಾಡಿದರೂ ಇದಕ್ಕೆ 26 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಂತಿಮ ಹಂತದಲ್ಲಿ ಹೆಟ್​ಮೈರ್(35)​ ಮತ್ತು ಧ್ರುವ್ ಜುರೆಲ್(ಅಜೇಯ 32) ಸಿಡಿದು ನಿಂತರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್​ನಲ್ಲಿ ಗೆಲುವಿಗೆ 16 ರನ್​ ತೆಗೆಯುವ ಸವಾಲಿನಲ್ಲಿ ಹೆಟ್​ಮೈರ್​ ರನೌಟ್​ ಆದರು. ಪಂಜಾಬ್​ ಪರ ಬೌಲಿಂಗ್​ನಲ್ಲಿ ನಥಾನ್​ ಎಲ್ಲಿಸ್​ 30 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು. ಅರ್ಶ್​ದೀಪ್​ ಸಿಂಗ್ 2 ವಿಕೆಟ್​ ಪಡೆದರು.​

ಇದು ಗುವಾಹಟಿಯಲ್ಲಿ ನಡೆದ ಮೊದಲ ಐಪಿಎಲ್​ ಪಂದ್ಯವಾಗಿದೆ. ಹೀಗಾಗಿ ಅಸ್ಸಾಂ ಕ್ರಿಕೆಟ್‌ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್‌ ಶೋ, ಜಾನಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಇದನ್ನೂ ಓದಿ IPL 2023: ಗುಜರಾತ್ ಟೈಟಾನ್ಸ್ ಸೇರಿಕೊಂಡ ದಸುನ್ ಶನಕ

ಅರ್ಧಶತಕ ಬಾರಿಸಿ ಮಿಂಚಿದ ಪ್ರಭಾಸಿಮ್ರಾನ್ ಸಿಂಗ್, ಶಿಖರ್​ ಧವನ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​ಗೆ ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್(Prabhsimran Singh) ಮತ್ತು ನಾಯಕ ಶಿಖರ್ ಧವನ್(Shikhar Dhawan) ಉತ್ತಮ ಆರಂಭ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಯುವ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ರಾಜಸ್ಥಾನ್​ ಬೌಲರ್​ಗಳಿಗೆ ಸತತ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇನ್ನೊಂದು ಬದಿಯಲ್ಲಿ ಶಿಖರ್​ ಧವನ್​ ನಿಧಾನಗತಿಯಲ್ಲಿ ಆಡುತ್ತಾ ಪ್ರಭಾಸಿಮ್ರಾನ್ ಸಿಂಗ್​ ಉತ್ತಮ ಸಾಥ್​ ನೀಡುತ್ತಿದ್ದರು. ಪವರ್​ ಪ್ಲೇ ಮುಕ್ತಾಯಕ್ಕೆ ಈ ಜೋಡಿ 10ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 63 ರನ್​ ರಾಶಿ ಹಾಕಿತು.

ಇದನ್ನೂ ಓದಿ IPL 2023: ಶ್ರೇಯಸ್​ ಅಯ್ಯರ್​ ಬದಲು ಕೆಕೆಆರ್​ ತಂಡ ಸೇರಿದ ಜೇಸನ್​​ ರಾಯ್

ಪವರ್​ ಪ್ಲೇ ಬಳಿಕವೂ ಬಿರುಸಿನ ಬ್ಯಾಟಿಂಗ್​ ನಡೆಸಿದ ಪ್ರಭಾಸಿಮ್ರಾನ್ ಸಿಂಗ್ ಅರ್ಧಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ ಇವರ ಬ್ಯಾಟಿಂಗ್​ ವೇಗವನ್ನು ನೋಡುವಾಗ ಶತಕ ಬಾರಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಜೇಸನ್​ ಹೋಲ್ಡರ್​ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಜಾಸ್​ ಬಟ್ಲರ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಬೌಂಡರಿ ಲೈನ್​ನಿಂದ ಓಡಿಬಂದ ಜಾಸ್​ ಬಟ್ಲರ್​ ಚಿರತೆಯಂತೆ ಜಿಗಿದು ಈ ಕ್ಯಾಚ್​ ಪಡೆದರು. ಧವನ್​ ಮತ್ತು ಪ್ರಭಾಸಿಮ್ರಾನ್ ಸಿಂಗ್ ಜೋಡಿ ಮೊದಲ ವಿಕೆಟ್​ಗೆ ಬರೋಬ್ಬರಿ 90 ರನ್​ ಜತೆಯಾಟ ನಡೆಸಿತು. ಪ್ರಭಾಸಿಮ್ರಾನ್ ಸಿಂಗ್ ಕೇವಲ 34 ಎಸೆತ ಎದುರಿಸಿ 60 ರನ್​ ಬಾರಿಸಿದರು. ಈ ಸ್ಫೋಟಕ ಬ್ಯಾಟಿಂಗ್​ ವೇಳೆ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು.

ಚಹಲ್​ಗೆ ಚಳಿ ಬಿಡಿಸಿದ ಧವನ್​

ಪ್ರಭಾಸಿಮ್ರಾನ್ ಸಿಂಗ್ ವಿಕೆಟ್​ ಪತನದ ಬಳಿಕ ಧವನ್ ಕೂಡ ಹೊಡಿ ಬಡಿ ಆಟಕ್ಕೆ ಮುಂದಾದರು. ಇದೇ ವೇಳೆ ಅವರು ಆರ್​. ಅಶ್ವಿನ್ ಅವರ ಓವರ್​ನಲ್ಲಿ ನೇರವಾಗಿ ಹೊಡೆದ ಚೆಂಡು ಭಾನುಕಾ ರಾಜಪಕ್ಸ ಅವರ ಕೈಗೆ ತಗುಲಿತು. ನೋವಿನಿಂದ ಬಳಲಿದ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮೈದಾನ ತೊರೆದರು. ಅವರು ಒಂದು ಎಸೆತ ಎದುರಿಸಿ ಒಂದು ರನ್​ ಗಳಿಸಿದ್ದರು. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್​ ದಾಳಿ ನಡೆಸಿದ್ದ ಚಹಲ್​ ಅವರಿಗೆ ಧವನ್​ ಈ ಪಂದ್ಯದಲ್ಲಿ ಚಳಿ ಬಿಡಿಸಿದರು. ಒಂದೇ ಓವರ್​ನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್​ ಚಚ್ಚಿದರು. ಚಹಲ್​ ಅವರ ಈ ಓವರ್​ನಲ್ಲಿ 18 ರನ್​ ಸೋರಿಕೆಯಾ​​ಯಿತು.

ಬೆನ್ನು ಬಿಡದ ಬೇತಾಳನಂತೆ ಕಾಡಿದ ಧವನ್​ ಅವರು ಚಹಲ್​ ಅವರ ದ್ವಿತೀಯ ಓವರ್​ನಲ್ಲಿಯೂ ಬೌಂಡರಿಗಳ ಸುರಿಮಳೆ ಸುರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಧವನ್​ ಅವರು ಇದೇ ಓವರ್​ನಲ್ಲಿ ಒಂದು ಜೀವದಾನ ಕೂಡ ಪಡೆದರು. ಚಹಲ್​ ಅವರೇ ಕ್ಯಾಚ್​ ಬಿಟ್ಟು ಈ ಜೀವದಾನ ನೀಡಿದರು. ಧವನ್​ ಜತೆ ಜಿತೇಶ್​ ಶರ್ಮಾ ಕೂಡ ಸ್ಫೋಟಕ ಆಟಕ್ಕೆ ಒಗ್ಗಿಕೊಂಡರು. 14 ಓವರ್​ ಆಗುವ ವೇಳೆ ತಂಡ ಒಂದು ವಿಕೆಟ್​ಗೆ 141 ರನ್​​ ಗಳಿಸಿತು. ಸಂಜು ಸ್ಯಾಮ್ಸನ್​ ಅವರ ಬೌಲಿಂಗ್​ ಆಯ್ಕೆಯನ್ನು ಬೌಲರ್​ಗಳು ಹುಸಿಯಾಗಿಸಿದರು. ಪ್ರತಿ ಓವರ್​ಗೆ 10ರಂತೆ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಬೌಲ್ಟ್​, ಆಸೀಫ್​ ಬೌಲಿಂಗ್​ ಮರೆತವರಂತೆ ಬೌಲಿಂಗ್​ ನಡೆಸಿದರು.

ಧವನ್​ ಅವರಿಂದ ಸತತ ಬೌಂಡರಿ ಹೊಡೆಸಿಕೊಂಡು ಬೆಂಡಾಗಿದ್ದ ಚಹಲ್ ಕೊನೆಗೂ ಜಿತೇಶ್​ ಶರ್ಮ ರೂಪದಲ್ಲಿ ಒಂದು ವಿಕೆಟ್​ ಕಿತ್ತರು. ಜಿತೇಶ್​ ಶರ್ಮಾ 16 ಎಸೆತಗಳಿಂದ 27 (2 ಬೌಂಡರಿ, ಒಂದು ಸಿಕ್ಸರ್​) ರನ್​ ಕೊಡುಗೆ ನೀಡಿದರು. ಧವನ್​ ಜತೆಗೂಡಿ 2ನೇ ವಿಕೆಟ್​ಗೆ 60 ರನ್​ ಜತೆಯಾಟ ನಡೆಸಿದರು. ಬಳಿಕ ಬಂದ ಜಿಂಬಾಬ್ವೆಯ ಹಿರಿಯ ಆಟಗಾರ ಸಿಕಂದರ್​ ರಾಜಾ 1 ರನ್​ಗೆ ಸೀಮಿತರಾದರು. ಧವನ್​ 56 ಎಸೆತಗಳಿಂದ 86 ರನ್​ ಬಾರಿಸಿ ಅಜೇಯರಾಗಿ ಉಳಿದರು. ಧವನ್​ ಅವರ ಈ ಮನಮೋಹಕ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್​ ದಾಖಲಾಯಿತು. ರಾಯಲ್ಸ್​ ಪರ ಜೇಸನ್​ ಹೋಲ್ಡರ್​ 29 ರನ್​ಗೆ 2 ವಿಕೆಟ್​ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್​: ಪಂಜಾಬ್​ ಕಿಂಗ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 197, (ಶಿಖರ್​ ಧವನ್​ ಅಜೇಯ 86, ಪ್ರಭಾಸಿಮ್ರಾನ್ ಸಿಂಗ್ 60, ಜಿತೇಶ್​ ಶರ್ಮಾ 27, ಜೇಸನ್​ ಹೋಲ್ಡರ್​ 29ಕ್ಕೆ 2).

Exit mobile version