ಜೈಪುರ: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ರನ್ ಗಳಿಸಲು ತಿಣುಕಾಡಿದ ರಾಜಸ್ಥಾನ್ ರಾಯಲ್ಸ್ ಅಲ್ಪ ಮೊತ್ತಕ್ಕೆ ಕುಸಿದಿದೆ. ಗುಜರಾತ್ ಪರ ಅಫಘಾನಿಸ್ತಾನದ ಸ್ಪಿನ್ನರ್ಗಳಾದ ರಶೀದ್ ಖಾನ್(3) ಮತ್ತು ನೂರ್ ಅಹ್ಮದ್(2) ವಿಕೆಟ್ ಕಿತ್ತು ಮಿಂಚಿದರು.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ಸಾಧಾರಣ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ 17.5 ಓವರ್ಗಳಲ್ಲಿ 118 ರನ್ಗೆ ಸರ್ವಪತನ ಕಂಡಿದೆ. ಗುಜರಾತ್ ತಂಡ ಗೆಲುವಿಗೆ 120 ಎಸೆತಗಳಲ್ಲಿ 119 ರನ್ ಮಾಡಬೇಕಿದೆ.
ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ 11 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದ ಜಾಸ್ ಬಟ್ಲರ್ ಅವರು 8 ರನ್ಗೆ ವಿಕೆಟ್ ಕೈಚೆಲ್ಲಿದರು. ಇದರಿಂದ ತಂಡದ ಬೃಹತ್ ಮೊತ್ತದ ಆರಂಭಕ್ಕೆ ಹಿನ್ನಡೆಯಾಯಿತು. ಬಟ್ಲರ್ ವಿಕೆಟ್ ನಾಯಕ ಹಾರ್ದಿಕ್ ಪಾಂಡ್ಯ ಪಾಲಾಯಿತು. ಪವರ್ ಪ್ಲೇಯಲ್ಲಿ ಕೇವಲ 47 ರನ್ ಮಾತ್ರ ಒಟ್ಟುಗೂಡಿತು.
ದ್ವಿತೀಯ ವಿಕೆಟ್ಗೆ ಜತೆಯಾದ ಸಂಜು ಸ್ಯಾಮ್ಸನ್ ಮತ್ತು ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಒಂದು ಹಂತದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಆದರೆ ಇವರ ಆಟವೂ ಹೆಚ್ಚು ಹೊತ್ತು ಸಾಗಲಿಲ್ಲ. 14 ರನ್ ಗಳಿಸಿದ್ದ ವೇಳೆ ರನೌಟ್ ಆದರು. ಈ ವಿಕೆಟ್ ಪತನದ ಬಳಿಕ ರಾಜಸ್ಥಾನ್ ತಂಡದ ಕುಸಿತವು ಆರಂಭಗೊಂಡಿತು. ದೇವದತ್ತ ಪಡಿಕ್ಕಲ್(12), ಆರ್.ಅಶ್ವಿನ್(2), ರಿಯಾನ್ ಪರಾಗ್(4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡುತ್ತಿದ್ದರು.
ಪಾಂಡ್ಯ ಪಡೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಸಂಜು 20 ಎಸೆತಗಳಲ್ಲಿ 30 ರನ್ ಗಳಿಸಿ ವೇಗಿ ಜೋಶುವಾ ಲಿಟಲ್ ಅವರಿಗೆ ವಿಕೆಟ್ ಒಪ್ಪಿಸಿದರು. ರಿಯಾನ್ ಪರಾಗ್ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಿಂದೆಯೇ ಅವರಿಗೆ ತಂಡದಲ್ಲಿ ಪದೇಪದೆ ಅವಕಾಶ ನೀಡುತ್ತಿರುವ ಬಗ್ಗೆ ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರು ಈ ಪಂದ್ಯದಲ್ಲಿಯೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದು ತಂಡದ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.
ವಿಂಡೀಸ್ ಆಟಗಾರ ಶಿಮ್ರಾನ್ ಹೆಟ್ಮೇರ್(7), ಧ್ರುವ್ ಜುರೆಲ್(9) ಒಂದಂಕಿಗೆ ಸೀಮಿತರಾದರು. ಅಂತಿಮ ಹಂತದಲ್ಲಿ ಟ್ರೆಂಟ್ ಬೌಲ್ಟ್ 15 ರನ್ ಗಳಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು. ತಂಡದಲ್ಲಿ ಮೂವರು ಆಟಗಾರರು ಮಾತ್ರ ಡಬಲ್ ಡಿಜಿಟ್ ರನ್ ಗಳಿಸಿದರು. ಉಳಿದ ಎಲ್ಲ ಆಟಗಾರರು ಕೇವಲ ಸಿಂಗಲ್ ಡಿಜಿಟ್ ಮೊತ್ತಕ್ಕೆ ಆಟ ಮುಗಿಸಿದರು.