ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿ ಅಂತಿಮ ಹಂತದೆಡೆಗೆ ಸಾಗುತ್ತಿದ್ದು ಈಗಾಗಲೇ ಎಲ್ಲ ತಂಡಗಳ ಪ್ಲೇ ಆಪ್ ಲೆಕ್ಕಾಚಾರ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ಆಟಗಾರ ರವಿಶಾಸ್ತ್ರಿ ಅವರು ಈ ಬಾರಿಯ ಚಾಂಪಿಯನ್ ತಂಡವನ್ನು ಹೆಸರಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ ಅವರು “ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. “ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠ ಮತ್ತು ಸಮರ್ಥವಾಗಿದೆ. ಈ ತಂಡ ಕೇವಲ ಒಂದೆರಡು ಆಟಗಾರರ ಪ್ರದರ್ಶನದ ಮೇಲೆ ನಿಂತಿಲ್ಲ. ಪ್ಲೇಯಿಂಗ್ ಇಲೆವೆನ್ನಲ್ಲಿರುವ ಎಲ್ಲರೂ ತಂಡಕ್ಕೆ ಸೂಕ್ತ ಸಮಯದಲ್ಲಿ ಆಸರೆಯಾಗಿ ನಿಂತು ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಈ ಬಾರಿಯೂ ಗುಜರಾತ್ ಚಾಂಪಿಯನ್ ಆಗಲಿದೆ” ಎಂದು ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ಆರ್ಸಿಬಿ ಸೇರಿದ್ದೇ ಅಚ್ಚರಿ ಎಂದ ಕೇದಾರ್ ಜಾಧವ್
ಗುಜರಾತ್ ಕಪ್ ಗೆಲ್ಲಲಿದೆ; ಭವಿಷ್ಯ ನುಡಿದ ಎಬಿಡಿ ವಿಲಿಯರ್ಸ್
ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಈ ಬಾರಿ ಪಾಂಡ್ಯ ಸಾರಥ್ಯದ ಗುಜರಾತ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಹೇಳಿದ್ದಾರೆ. “ನಾನು ಕಳೆದ ಬಾರಿ ಹೇಳಿದಂತೆ ಈ ಬಾರಿಯೂ ಗುಜರಾತ್ ಟೈಟಾನ್ಸ್(gujarat titans) ತಂಡ ಈ ಬಾರಿಯೂ ಕಪ್ ಗೆಲ್ಲಲಿದೆ. ಏಕೆಂದರೆ ಈ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಪಾಂಡ್ಯ ಸಾರಥ್ಯದ ಈ ತಂಡ ನಿಜವಾಗಿಯೂ ಉತ್ತಮ ತಂಡವಾಗಿದೆ. ಹೆಚ್ಚಾಗಿ ಈ ತಂಡದಲ್ಲಿ ಕಿರಿಯ ಆಟಗಾರರೆ ತುಂಬಿಕೊಂಡಿದ್ದಾರೆ. ಅವರ ಪ್ರದರ್ಶನ ಮಾತ್ರ ಹಿರಿಯ ಆಟಗಾರರನ್ನು ಮೀರಿಸುವಂತಿದೆ. ಈಗಾಗಲೇ ಅವರು ಆಡಿದ 9 ಪಂದ್ಯಗಳಲ್ಲಿ 6 ಜಯ ಸಾಧಿಸಿ 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಪ್ ಗೆಲ್ಲಲು ಅರ್ಹರಾಗಿದ್ದಾರೆ’ ಎಂದು ಎಬಿಡಿ ಹೇಳಿದ್ದಾರೆ.