ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 31ರಂದು ಈ ಟೂರ್ನಿಯ ಕಹಳೆ ಮೊಳಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಮತ್ತು ಮಾಜಿ ಚಾಂಪಿಯನ್ಗಳಾದ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಈಗಾಗಲೇ ಈ ಮಹತ್ವದ ಟೂರ್ನಿಗಾಗಿ ಎಲ್ಲ ತಂಡಗಳು ಅಭ್ಯಾಸ ಆರಂಭಿಸಿವೆ. ಕನ್ನಡಿಗರ ಹೆಮ್ಮೆಯ ತಂಡವಾದ ಆರ್‌ಸಿಬಿ ಕೂಡ ಭರ್ಜರಿ ತಯಾರಿ ಆರಂಭಿಸಿದೆ. ತಂಡದ ನಾಯಕ ಫಾಪ್ ಡುಪ್ಲೆಸಿಸ್(Faf du Plessis) ಬುಧವಾರ(ಮಾರ್ಚ್ 22) ಬೆಂಗಳೂರಿಗೆ ಆಗಮಿಸಿದ್ದಾರೆ. ಇದೇ ವೇಳೆ ಅವರು ಸೇರಿ ತಂಡದ ಕೆಲ ಆಟಗಾರರು ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ವಿಡಿಯೊವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
“ಈ ಹೊಸ ವರ್ಷ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ತಂಡದ ನಾಯಕ ಫಾಪ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್ ಮಹಿಳಾ ಆರ್‌ಸಿಬಿ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರು ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ IPL 2023: ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಟಾಪ್ 5 ಆಟಗಾರರು
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನಾಡುತ್ತಿರುವ ಆರ್‌ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರು ಗುರುವಾರ ಆರ್‌ಸಿಬಿ ಕ್ಯಾಂಪ್ ಸೇರುವ ಸಾಧ್ಯತೆ ಇದೆ.