Site icon Vistara News

IPL 2023: ಮುಂದಿನ ಆವೃತ್ತಿಯಲ್ಲಿ ಈ ಆಟಗಾರರಿಗೆ ಆರ್​ಸಿಬಿಯಲ್ಲಿ ಬಾಗಿಲು ಬಂದ್; ಪಟ್ಟಿ ಹೇಗಿದೆ?​

RCB IPL 2023

#image_title

ಬೆಂಗಳೂರು: ಕೇವಲ ಮೂವರು ಬ್ಯಾಟರ್, ಓರ್ವ ಬೌಲರ್‌ ಕಟ್ಟಿಕೊಂಡು 16ನೇ ಆವೃತ್ತಿಯ ಐಪಿಎಲ್​ ಟೂರ್ನಿ ಆಡಿದ ಏಕೈಕ ತಂಡ ಎಂದು ಎಲ್ಲರಿಂದ ವ್ಯಂಗ್ಯಕ್ಕೊಳಗಾದ ಆರ್‌ಸಿಬಿ ಮುಂದಿನ ಬಾರಿ ತಂಡದಲ್ಲಿ ಭಾರಿ ಸರ್ಜರಿಗೆ ಮುಂದಾಗಿದೆ. ಹೀಗಾಗಿ ಕೆಲ ಆಟಗಾರರಿಗೆ ಆರ್​ಸಿಬಿ ತಂಡದಿಂದ ಕೊಕ್​ ಸಿಗುವ ಸಾಧ್ಯತೆ ಹೆಚ್ಚಳವಾಗಿದೆ.

ತಂಡದ ಸೋಲಿಗೆ ಅಭಿಮಾನಿಗಳು ಸೇರಿ ಕೆಲ ಕರ್ನಾಟಕದ ಮಾಜಿ ಕ್ರಿಕೆಟಿಗರು ಕೂಡ ಆರ್​ಸಿಬಿ ಮ್ಯಾನೆಜ್​ಮೆಂಟ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ತಂಡ ಮಹತ್ವದ ಬದಲಾವಣೆಗೆ ಒತ್ತು ನೀಡಿವುದು ಸಹಜ. ಈ ಆವೃತ್ತಿಯಲ್ಲಿ ಹಲವು ಸೊನ್ನೆ ಸುತ್ತಿದ ದಿನೇಶ್​ ಕಾರ್ತಿಕ್​ ಅವರಂತು ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಶೇ.100 ಅನುಮಾನ.

ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಒತ್ತಡದ ವೇಳೆಯಲ್ಲೂ ಎದೆಗುಂದದೆ ಬ್ಯಾಟಿಂಗ್‌ ನಡೆಸಿ ‘ಫಿನಿಶಿಂಗ್‌’ ಪಾತ್ರವನ್ನು ನಿರ್ವಹಿಸಿದ್ದ ದಿನೇಶ್​ ಕಾರ್ತಿಕ್​ ಈ ಬಾರಿ ತೀರಾ ಕಳಪೆ ಮಟ್ಟದ ಸಾಧನೆ. 15ನೇ ಆವೃತ್ತಿಯಲ್ಲಿ ಅವರು ನಡೆಸಿದ್ದ ಬ್ಯಾಟಿಂಗ್​ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿಯೂ ಅವರಿಗೆ ಅಚ್ಚರಿ ಎಂಬಂತೆ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿ ಅವರು ಆಡಿದ 13 ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 140 ರನ್‌ ಮಾತ್ರ. ಜತೆಗೆ ನಿರೀಕ್ಷಿತ ಮಟ್ಟದ ವಿಕೆಟ್‌ ಕೀಪಿಂಗ್‌ ನಡೆಸುವಲ್ಲಿಯೂ ವಿಫಲರಾಗಿದ್ದರು. ಅವರ ವಿರುದ್ಧ ಈಗಾಗಲೇ ಅಭಿಮಾನಿಗಳು ದಯವಿಟ್ಟು ನೀವು ಆರ್​ಸಿಬಿ ತಂಡ ತೊರೆದು ಕಾಮೆಂಟ್ರಿ ಮಾಡಲು ತೆರಳಿ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೇ ಯಾಕೆ ಸ್ವತಃ ತಂಡದ ನಾಯಕ ಡು ಪ್ಲೆಸಿಸ್​ ಅವರೇ ಈ ಮಾತನ್ನು ಹೇಳಿದ್ದಾರೆ.

ಮಹಿಪಾಲ್​ ಲೋಮ್ರೋರ್​ ಅವರಿಗೂ ಮುಂದಿನ ಬಾರಿ ಆರ್​ಸಿಬಿ ಬಾಗಿಲು ಬಂದ್​ ಆಗುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಅವರು ಈ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಿಂದ 16.88ರ ಸರಾಸರಿಯಲ್ಲಿ ಒಂದು ಅರ್ಧಶತಕ ಸೇರಿದಂತೆ ಕೇವಲ 135 ರನ್‌ಗಳನ್ನು ಗಳಿಸಿದ್ದಾರೆ. ಇಷ್ಟು ಅವಕಾಶ ನೀಡಿದರೂ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಾರದ ಹಿನ್ನಲೆ ಅವರನ್ನು ತಂಡ ಕೈಬಿಡುವುದು ಪಕ್ಕಾ ಎನ್ನಬಹುದು.

ಇದನ್ನೂ ಓದಿ IPL 2023: ಚೆನ್ನೈ-ಗುಜರಾತ್​ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ; ಯಾರಿಗೆ ಒಲಿಯಲಿದೆ ಅದೃಷ್ಟ!

ಕಳೆದ ಎರಡು ವರ್ಷಗಳಿಂದ ಆರ್‌ಸಿಬಿ ಪರ ಆಡುತ್ತಿರುವ ಅನುಜ್‌ ರಾವುತ್​ ಅವರು ಮೈದಾನದಲ್ಲಿ ತೋರುವ ಅಗ್ರೆಸಿವ್​ನೆಸ್​ ಬ್ಯಾಟಿಂಗ್​ನಲ್ಲಿ ತೋರ್ಪಡಿಸುತ್ತಿದ್ದರೆ ಆರ್​ಸಿಬಿ ಪ್ಲೇ ಆಫ್​ ಪ್ರವೇಶ ಪಡೆಯುತ್ತಿತ್ತು. ಅವರು ಕಳೆದ ಎರಡು ವರ್ಷಗಳಲ್ಲಿ ಆರ್​ಸಿಬಿ ಪರ ಆಡಿದ 17 ಪಂದ್ಯಗಳಿಂದ ಗಳಿಸಿದ್ದು ಕೇವಲ 220 ರನ್‌ಗಳನ್ನು ಮಾತ್ರ. ಇದಕ್ಕಿಂತ ಕೆಲ ತಂಡದ ಬೌಲರ್​ಗಳು ಹೆಚ್ಚು ರನ್​ ಪೇರಿಸಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರನ್ನು ಮುಂದಿನ ಆವೃತ್ತಿಗೆ ಕೈ ಬಿಡಬಹುದು. ಇದರ ಜತೆಗೆ ವನಿಂದು ಹಸರಂಗ, ಜೋಶ್​ ಹ್ಯಾಜಲ್​ವುಡ್​, ಹರ್ಷಲ್​ ಪಟೇಲ್​, ಶಬಾಜ್​ ಅಹ್ಮದ್​ಗೂ ಕೊಕ್​ ಸಿಗುವ ಸಾಧ್ಯತೆ ಇದೆ.

Exit mobile version