ಬೆಂಗಳೂರು: ಭಾನುವಾರದ ಐಪಿಎಲ್ನ ರಾಯಲ್ಸ್ಗಳ ಮಧ್ಯದ ರೋಚಕ ಹೋರಾಟದಲ್ಲಿ ಆರ್ಸಿಬಿ ತಂಡ 7 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಾನಾಡಿದ 7 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಸಂಪಾದಿಸಿದೆ. ಆರ್ಸಿಬಿ ಪರ ಬ್ಯಾಟಿಂಗ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್(77) ಮತ್ತು ಫಾಫ್ ಡು ಪ್ಲೆಸಿಸ್(62) ಮಿಂಚಿದರೆ, ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತರು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.
ಆರ್ಸಿಬಿಯಂತೆ ರಾಜಸ್ಥಾನ್ ಕೂಡ ಮೊದಲ ಓವರ್ನಲ್ಲಿಯೇ ವಿಕೆಟ್ ಕಳೆದುಕೊಂಡಿತು. ಮೊಹಮದ್ ಸಿರಾಜ್ ಅವರು ಅಪಾಯಕಾರಿ ಬ್ಯಾಟರ್ ಜಾಸ್ ಬಟ್ಲರ್ ಅವರನ್ನು ಕ್ಲೀನ್ ಬೌಲ್ಟ್ ಮಾಡಿದರು. ಈ ಮೂಲಕ ಮತ್ತೆ ಮೊದಲ ಓವರ್ನಲ್ಲಿಯೇ ವಿಕೆಟ್ ಕಿತ್ತು ವಿಕೆಟ್ ಟೇಕರ್ ಎಂಬ ಖ್ಯಾತಿಯನ್ನು ಉಳಿಸಿಕೊಂಡರು. ಆದರೆ ಆ ಬಳಿಕ ಆಡಲಿಳಿದ ಆರ್ಸಿಬಿ ತಂಡದ ಮಾಜಿ ಆಟಗಾರ ದೇವದತ್ತ ಪಡಿಕ್ಕಲ್ ಮತ್ತು ಯಶಸ್ವಿ ಜೈಸ್ವಾಲ್ ಸೇರಿಕೊಂಡು ಉತ್ತಮ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.
ಇವರಿಬ್ಬರು ಸೇರಿಕೊಂಡು ಆರ್ಸಿಬಿ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ದ್ವಿತೀಯ ವಿಕೆಟ್ಗೆ 98 ರನ್ಗಳ ಕೊಡುಗೆ ನೀಡಿದರು. ಪಡಿಕ್ಕಲ್ 34 ಎಸೆತಗಳಿಂದ 52 ಗಳಿಸಿದರೆ, ಯಶಸ್ವಿ ಜೈಸ್ವಾಲ್ 47 ರನ್ ಗಳಿಸಿ ಔಟಾದರು. ಕೇವಲ ಮೂರು ರನ್ ಅಂತರದಿಂದ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಸಂಜು ಸ್ಯಾಮ್ಸನ್ ಅವರು ಬಡಬಡನೇ ಸಿಕ್ಸರ್, ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಈ ಅಬ್ಬರಕ್ಕೆ ಹರ್ಷಲ್ ಪಟೇಲ್ ಅವರು ಬ್ರೇಕ್ ಹಾಕಿದರು. ಸ್ಲೋ ಫುಲ್ಟಾಸ್ ಎಸೆದು ವಿಕೆಟ್ ತೆಗೆದರು. ಸಂಜು 25 ರನ್ಗೆ ಆಟ ಮುಗಿಸಿದರು. ಅಂತಿಮವಾಗಿ ರಾಜಸ್ಥಾನ್ ವಿಕೆಟ್ ಉಳಿಸಿಕೊಂಡರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಆರಂಭಿಕ ಆಘಾತ
ಇನಿಂಗ್ಸ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲೇ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದರು. ಕೊಹ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಮುಂದಿನ ಓವರ್ನಲ್ಲಿ ಮತ್ತೆ ಘಾತಕ ದಾಳಿ ನಡೆಸಿದ ಅವರು ಬ್ಯಾಟಿಂಗ್ ಭಡ್ತಿ ಪಡೆದು ಬಂದ ಶಹಬಾಜ್ ಅಹ್ಮದ್ ವಿಕೆಟ್ ಕಿತ್ತು ಅವಳಿ ಆಘಾತವಿಕ್ಕಿದರು. ಆರ್ಸಿಬಿ 12 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು.
ಸಿಡಿದ ಮ್ಯಾಕ್ಸ್ವೆಲ್-ಡು ಪ್ಲೆಸಿಸ್
ಮೊದಲೆರಡು ವಿಕೆಟ್ ಕಿತ್ತು ಸಂತಸದಲ್ಲಿ ತೇಲಾಡುತ್ತಿದ್ದ ರಾಜಸ್ಥಾನದ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಮೂರನೇ ವಿಕೆಟ್ಗೆ ಜತೆಯಾದ ಇಂಪ್ಯಾಕ್ಸ್ ಪ್ಲೇಯರ್ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸೇರಿಕೊಂಡು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪ್ರತಿ ಓವರ್ಗೆ ಸರಾಸರಿ 10ರಂತೆ ರನ್ ಗಳಿಸಿದ ಈ ಜೋಡಿ ರಾಜಸ್ಥಾನ್ ಬೌಲರ್ಗಳ ಎಸೆತಗಳನ್ನು ಧೂಳಿಪಟ ಮಾಡಿದರು.
ಇದನ್ನೂ ಓದಿ IPL 2023: ಮತ್ತೆ ಏಪ್ರಿಲ್ 23ಕ್ಕೆ ಶೂನ್ಯ ಸುತ್ತಿದ ವಿರಾಟ್ ಕೊಹ್ಲಿ
ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟದ ಮುಂದೆ ರಾಜಸ್ಥಾನ್ ಬೌಲರ್ಗಳು ದಿಕ್ಕಾಪಾಲಾದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಮ್ಯಾಕ್ಸ್ವೆಲ್ ಮತ್ತು ಡು ಪ್ಲೆಸಿಸ್ ಕಡಿಮೆ ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು. ಚಿನ್ನಸ್ವಾಮಿ ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಆದರೆ ಇಲ್ಲದ ರನ್ ಕದಿಯುವ ಯತ್ನದಲ್ಲಿ ಡು ಪ್ಲೆಸಿಸ್ ರನೌಟ್ ಆದರು. 39 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರು.
ಡು ಪ್ಲೆಸಿಸ್ ವಿಕೆಟ್ ಪತನದ ಬೆನ್ನಲ್ಲೇ ಮ್ಯಾಕ್ಸ್ವೆಲ್ ಕೂಡ ಔಟಾದರು. ಅಶ್ವಿನ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಹೋಲ್ಡರ್ಗೆ ಕ್ಯಾಚ್ ನೀಡಿದರು. ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಸೇರಿಕೊಂಡು ಮೂರನೇ ವಿಕೆಟ್ಗೆ 127 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಮ್ಯಾಕ್ಸ್ವೆಲ್ ಕೇವಲ 44 ಎಸೆತದಲ್ಲಿ 77 ರನ್ ಸಿಡಿಸಿದರು. ಈ ಇನಿಂಗ್ಸ್ ವೇಳೆ 4 ಸಿಕ್ಸರ್ ಮತ್ತು 6 8 ಬೌಂಡರಿ ದಾಖಲಾಯಿತು. ಉಭಯ ಆಟಗಾರರ ವಿಕೆಟ್ ಪತನಗೊಂಡ ಬಳಿಕ ಉತ್ತಮ ಸ್ಥಿತಿಯಲ್ಲಿದ್ದ ಆರ್ಸಿಬಿಯ ರನ್ ಗಳಿಕೆ ಕುಸಿತ ಕಂಡಿತು. ಜತೆಗೆ ಬಡಬಡಣೆ ವಿಕೆಟ್ ಕೂಡ ಬಿತ್ತು. ರಾಜಸ್ಥಾನ್ ಬೌಲರ್ಗಳು ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ದೊಡ್ಡ ಮೊತ್ತದತ್ತ ಸಾಗುತ್ತಿದ್ದ ಆರ್ಸಿಬಿಯನ್ನು ಕಟ್ಟಿಹಾಕಿದರು.
ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಕಂಡು 16 ರನ್ ಬಾರಿಸಿದರು. ಇದಕ್ಕೆ 13 ಎಸೆತವನ್ನು ತೆಗೆದುಕೊಂಡರು. ಮಹಿಪಾಲ್ ಲೊಮ್ರೊರ್(8), ಸುಯೇಶ್ ಪ್ರಭುದೇಸಾಯಿ(0) ರನ್ ಗಳಿಸಿದರು. ರಾಜಸ್ಥಾನ್ ಪರ ಅಶ್ವಿನ್ ಮತ್ತು ಚಹಲ್ ತಲಾ ಒಂದು ವಿಕೆಟ್ ಪಡೆದರು. ಬೌಲ್ಟ್ 2 ವಿಕಿಟ್ ಕಿತ್ತರೂ 41 ರನ್ ಬಿಟ್ಟುಕೊಟ್ಟರು.