ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸದ್ಯ ಚೇತರಿಕೆ ಹಾದಿಯಲ್ಲಿರುವ ಟೀಮ್ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್(rishabh pant) ಅವರು ಮಂಗಳವಾರದ ಗುಜರಾತ್ ಟೈಟಾನ್ಸ್(Gujarat Titans) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧದ ಐಪಿಎಲ್(IPL 2023) ಪಂದ್ಯವನ್ನು ವೀಕ್ಷಿಸಿದ್ದಾರೆ. ಪಂತ್ ಅವರ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ಗೆ ಬೆಂಬಲ ನೀಡಲು ಅವರು ಅರುಣ್ ಜೇಟ್ಲಿ ಸ್ಟೇಡಿಯಂಗೆ ಆಗಮಿಸಿ ಗಮನ ಸೆಳೆದರು. ಪಂತ್ ಅವರು ಸ್ಟೇಡಿಯಂಗೆ ಬಂದ ಫೋಟೊ ಮತ್ತು ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯ ನೋಡಲು ಪಂತ್ ಬಿಳಿ ಟಿ ಶರ್ಟ್ ಧರಿಸಿ ವೀಕ್ಷಕರ ಸ್ಟ್ಯಾಂಡ್ಗೆ ಊರುಗೋಲುಗಳ ಸಹಾಯದಿಂದ ಬಂದಿರುವ ಫೋಟೊವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಪಂತ್ ಅವರು ನಮ್ಮೊಂದಿಗಿದ್ದಾರೆ, ಕ್ಯಾಪಿಟಲ್ಸ್ನ ನಮ್ಮ 13ನೇ ಆಟಗಾರ ಎಂದು ಬರೆದುಕೊಂಡಿದೆ.
ರಿಷಭ್ ಪಂತ್ ಅವರು ಕ್ರೀಡಾಂಗಣಕ್ಕೆ ಬರುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಪಂತ್ ಹೆಸರು ಕೂಗಿ ಹಾರೈಸಿದ್ದಾರೆ. ಇದೇ ವೇಳೆ ರಾಜೀವ್ ಶುಕ್ಲಾ ಸೇರಿ ಕೆಲ ಅಧಿಕಾರಿಗಳು ಪಂತ್ ಬಳಿ ಬಂದು ಅವರ ಆರೋಗ್ಯ ವಿಚಾರಿಸಿದ್ದಾರೆ. ಪಂತ್ ಕ್ಯಾಮರಾದತ್ತ ಕೈ ಬೀಸಿ ಅಭಿಮಾನಿಗಳಿಗೆ ವಿಶ್ ಮಾಡಿದ ವಿಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ಅವರು ರಿಷಭ್ ಪಂತ್‌ಗೆ ಈ ಪಂದ್ಯ ವೀಕ್ಷಿಸಲು ವಿಶೇಷ ಆಸನ ವ್ಯವಸ್ಥೆ ಮಾಡಿದ್ದಾರೆ. ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಕೂಡ ಈ ಬಗ್ಗೆ ವಿಶೇಷ ನಿಗಾ ಇಟ್ಟಿದ್ದಾರೆ. ಪಂತ್‌ಗೆ ಯಾರೂ ಅನಗತ್ಯ ತೊಂದರೆ ನೀಡದಂತೆ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಪಂತ್ ಪಂದ್ಯ ವೀಕ್ಷಿಸಿದ ಬಳಿಕ ಡೆಲ್ಲಿ ಮತ್ತು ಗುಜರಾತ್ ತಂಡದ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಲಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಪಂತ್ ಗಂಭೀರ ಗಾಯಗೊಂಡಿದ್ದರು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಸದ್ಯ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಮೂರು ತಿಂಗಳ ಬಳಿಕ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.