ಅಹಮದಾಬಾದ್: ಶುಭಮನ್ ಗಿಲ್(ಅಜೇಯ 94) ಮತ್ತು ವೃದ್ಧಿಮಾನ್ ಸಾಹಾ(81) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಬೃಹತ್ ಮೊತ್ತ ಪೇರಿಸಿದೆ. ಲಕ್ನೋ ಪರ 8 ಮಂದಿ ಬೌಲಿಂಗ್ ನಡೆಸಿದರೂ ಇವರಿಂದ ಕೀಳಲಾಗಿದ್ದು ಕೇವಲ 2 ವಿಕೆಟ್ ಮಾತ್ರ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಬಾರಿಸಿದೆ. ಲಕ್ನೋ ತಂಡ ಗೆಲುವಿಗೆ 228 ರನ್ ಬಾರಿಸಬೇಕಿದೆ.
ಬ್ಯಾಟಿಂಗ್ ಆಹ್ವಾನ ಪಡೆದ ಗುಜರಾತ್ ಪರ ವೃದ್ಧಿಮಾನ್ ಸಾಹಾ ಆರಂಭದಿಂದಲೇ ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ಲಕ್ನೋ ಬೌಲರ್ಗಳ ಮೇಲೆರಗಿ ಸಿಕ್ಸರ್ ಬೌಂಡರಿಗಳ ಸುರಿಮಳೆಯನ್ನಲೇ ಸುರಿಸಿದರು. ಇವರ ಈ ಬ್ಯಾಟಿಂಗ್ ಪ್ರದರ್ಶನದಿಂದ ನಾಲ್ಕು ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 50ರ ಗಡಿ ದಾಟಿತು. ಇದರಲ್ಲಿ 46 ರನ್ ಸಾಹಾ ಅವರ ಬ್ಯಾಟ್ನಿಂದಲೇ ಹರಿದು ಬಂತು. ಗಿಲ್ ಅವರು ಕೇವಲ 5 ರನ್ ಗಳಿಸಿದ್ದರು. ಪವರ್ ಪ್ಲೇ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಈ ಜೋಡಿ 78 ಒಟ್ಟುಗೋಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿತು. ಇದೇ ವೇಳೆ ವೃದ್ಧಿಮಾನ್ ಸಾಹಾ 20 ಎಸೆಗಳಲ್ಲಿ ಅರ್ಧಶತಕವನ್ನೂ ಪೂರ್ತಿಗೊಳಿಸಿದರು.
ಪವರ್ ಪ್ಲೇ ಬಳಿಕ ಶುಭಮನ್ ಗಿಲ್ ಕೂಡ ಬಿರುಸಿನ ಬ್ಯಾಟಿಂಗ್ಗೆ ಒತ್ತು ಕೊಟ್ಟರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಪ್ರತಿ ಓವರ್ಗೆ 12 ರನ್ಗಳ ಸರಾಸರಿಯಲ್ಲಿ ರನ್ ಒಟ್ಟುಗೂಡಿಸಿದರು. ಇವರ ಈ ಬ್ಯಾಟಿಂಗ್ ಅಬ್ಬರದ ಮುಂದೆ ಲಕ್ನೋ ತಂಡದ ಬೌಲರ್ಗಳು ದಿಕ್ಕಾಪಾಲಾದರು. 10 ಓವರ್ ಆಗುವ ಮೊದಲೇ ಗುಜರಾತ್ 120 ರನ್ ಬಾರಿಸಿತು.
ಬಿರುಸಿನ ಬ್ಯಾಟಿಂಗ್ ಮೂಲಕ ಮುನ್ನುಗ್ಗುತ್ತಿದ್ದ ವೃದ್ಧಿಮಾನ್ ಸಾಹಾ ಅವರನ್ನು ಕೊನೆಗೂ ಆವೇಶ್ ಖಾನ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಸಾಹಾ ಅವರು 43 ಎಸೆತಗಳಿಂದ 81 ರನ್ ಬಾರಿಸಿದರು. ಈ ಮನಮೋಹಕ ಇನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಯಿತು. ಗಿಲ್ ಮತ್ತು ಸಾಹಾ ಮೊದಲ ವಿಕೆಟ್ಗೆ ಬರೋಬ್ಬರಿ 142 ರನ್ಗಳ ಜತೆಯಾಟ ನಡೆಸಿದರು. ಇದು ಈ ಆವೃತ್ತಿಯಲ್ಲಿ ಮೊದಲ ವಿಕೆಟ್ಗೆ ಒಟ್ಟುಗೂಡಿದ ದ್ವಿತೀಯ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಮುಂಬೈ ವಿರುದ್ಧ ಆರ್ಸಿಬಿ ತಂಡದ ಆಟಗಾರರಾದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 148 ರನ್ ಬಾರಿಸಿದ್ದರು.
ಇದನ್ನೂ ಓದಿ IPL 2023 : ಕೊಹ್ಲಿ ಬ್ಯಾಟಿಂಗ್ ಆಧುನಿಕ ಯುಗಕ್ಕೆ ಸೂಕ್ತವಾಗಿಲ್ಲ; ಎಸ್ಆರ್ಎಚ್ ಮಾಜಿ ಕೋಚ್ ಟೀಕೆ
ಅರ್ಧಶತಕ ಬಾರಿಸಿ ಮಿಂಚಿದ ಗಿಲ್
ಆರಂಭದಲ್ಲಿ ನಿಧಾನ ಗತಿಯ ಬ್ಯಾಟಿಂಗ್ ನಡೆಸಿದ್ದರೂ ಬಳಿಕ ಚುರುಕಿನ ಬ್ಯಾಟಿಂಗ್ ನಡೆಸಿದ ಗಿಲ್ 28 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಉತ್ತಮ ಸಾಥ್ ನೀಡಿದರು. ಪಾಂಡ್ಯ 2 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 25 ರನ್ ಗಳಿಸಿ ಅಣ್ಣ ಕೃಣಾಲ್ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. 20 ಓವರ್ಗಳ ತನಕ ಬ್ಯಾಟಿಂಗ್ ಕಾಯ್ದುಕೊಂಡ ಗಿಲ್ 51 ಎಸೆತಗಳಲ್ಲಿ ಅಜೇಯ 94 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 7 ಸಿಕ್ಸರ್ ಮತ್ತು 2 ಬೌಂಡರಿ ದಾಖಲಾಯಿತು. ಡೇವಿಡ್ ಮಿಲ್ಲರ್ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಟೈಟನ್ಸ್: 20 ಓವರ್ಗಳಲ್ಲಿ 2 ವಿಕೆಟ್ಗೆ 227(ಶುಭಮನ್ ಗಿಲ್ ಅಜೇಯ 94, ವೃದ್ಧಿಮಾನ್ ಸಾಹಾ 81, ಹಾರ್ದಿಕ್ ಪಾಂಡ್ಯ 25, ಡೇವಿಡ್ ಮಿಲ್ಲರ್ ಅಜೇಯ 21, ಆವೇಶ್ ಖಾನ್ 34ಕ್ಕೆ 1).