ಮುಂಬಯಿ: ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಜಸ್ಪ್ರೀತ್ ಬುಮ್ರಾ(jasprit bumrah) ಅವರು ಈ ಬಾರಿಯ ಐಪಿಎಲ್ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದೀಗ ಅವರ ಬದಲು ಮುಂಬೈ ಇಂಡಿಯನ್ಸ್ ಕೇರಳದ ಸಂದೀಪ್ ವಾರಿಯರ್(Sandeep Warrier) ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಇನ್ನೇನು ಕೆಲವೇ ಗಂಟೆಗಳಲ್ಲಿ 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಈ ಸಮಾರಂಭ ಆರಂಭಕ್ಕೂ ಮುನ್ನ ಬುಮ್ರಾ ಅವರ ಬದಲಿಗೆ ಸಂದೀಪ್ ವಾರಿಯರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆ ಮಾಡಿರುವ ವಿಚಾರವನ್ನು ಐಪಿಎಲ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ವಿಶೇಷ ಎಂದರೆ ಸಂದೀಪ್ ವಾರಿಯರ್ ಅವರು 2019ರಲ್ಲಿ ಕೆಕೆಆರ್ ಪರ ಮುಂಬೈ ವಿರುದ್ಧ ಆಡುವ ಮೂಲಕ ತಮ್ಮ ಐಪಿಎಲ್ ಪದಾರ್ಪಣೆ ಪಂದ್ಯವನ್ನಾಡಿದ್ದರು. ಆದರೆ ಇದೀಗ ಅವರು ಮುಂಬೈ ಪಾಳಯ ಸೇರಿದ್ದಾರೆ. ಈ ವರೆಗೆ ಅವರು 5 ಐಪಿಎಲ್ ಪಂದ್ಯಗಳನ್ನಾಡಿದ್ದು 2 ವಿಕೆಟ್ ಪಡೆದಿದ್ದಾರೆ. ಈ ಹಿಂದೆ ಡೆಲ್ಲಿ ತಂಡಕ್ಕೆ ರಿಷಭ್ ಪಂತ್(rishabh pant) ಬದಲು ಬಂಗಾಳದ 20 ವರ್ಷದ ಯುವ ಆಟಗಾರ ಅಭಿಷೇಕ್ ಪೋರೆಲ್(abhishek porel) ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ IPL 2023: ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್; ಕರ್ನಾಟಕದಲ್ಲಿಯೂ ಇರಲಿದೆ ಜೋಶ್
ಮೊದಲ ಪಂದ್ಯಕ್ಕೆ ಧೋನಿ ಅನುಮಾನ
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಗುಜರಾತ್ ಟೈಟಾನ್ಸ್(Gujarat Titans) ಮುಖಾಮುಖಿಯಾಗಲು ಸಜ್ಜಾಗಿದೆ. ಆದರೆ ಇದೀಗ ಚೆನ್ನೈ ತಂಡಕ್ಕೆ ಮತ್ತು ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಧೋನಿ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ IPL 2023 : ಆರ್ಸಿಬಿ ತಂಡದ ವೇಗದ ಬೌಲರ್ ಮೊದಲ ಏಳು ಪಂದ್ಯಗಳಿಗೆ ಅಲಭ್ಯ; ಏನಾಯಿತು ಅವರಿಗೆ?
ಚೆನ್ನೈಯ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಹೀಗಾಗಿ ಅವರು ಗುರುವಾರ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸಿಲ್ಲ. ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಅನುಮಾನ ಮೂಡಿದೆ. 16ನೇ ಆವೃತ್ತಿಯ ಈ ಐಪಿಎಲ್ಗೆ ಈಗಾಗಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಇಂಜುರಿ ಟೂರ್ನಿ ಎಂದು ಕರೆಯಲಾಗುತ್ತಿದೆ. ಇದೀಗ ಧೋನಿ ಕೂಡ ಗಾಯಕ್ಕೆ ತುತ್ತಾಗಿರುವುದು ಅವರ ಅಭಿಮಾನಿಗಳಿಗೆ ಭಾರಿ ಚಿಂತೆ ಉಂಟುಮಾಡಿದೆ.