ಜೈಪುರ: ಬುಧವಾರ ರಾತ್ರಿ ಜೈಪುರದಲ್ಲಿ ನಡೆದ ಸಣ್ಣ ಮೊತ್ತದ ರೋಚಕ ಐಪಿಎಲ್ ಮೇಲಾಟದಲ್ಲಿ ಲಕ್ನೋ ಸೂಪರ್ಜೈಂಟ್ಸ್ 10 ರನ್ಗಳ ಅಂತರದಿಂದ ಗೆದ್ದು ರಾಜಸ್ಥಾನ್ ರಾಯಲ್ಸ್ಗೆ ಆಘಾತವಿಕ್ಕಿದೆ. ನಾಲ್ಕು ವರ್ಷಗಳ ಬಳಿಕ ಇಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯ ಇದಾಗಿದೆ. ಲಕ್ನೋ ಈ ಪಂದ್ಯ ಗೆದ್ದು 8 ಅಂಕ ಸಂಪಾದಿಸಿದರೂ ರನ್ ರೇಟ್ ಆಧಾರದಲ್ಲಿ ಹಿಂದಿರುವ ಕಾರಣ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ರಾಜಸ್ಥಾನ್(8 ಅಂಕ) ಅಗ್ರಸ್ಥಾನದಲ್ಲಿ ಉಳಿದಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತು. ಜವಾಬಿತ್ತ ರಾಜಸ್ಥಾನ್ ತನ್ನ ಪಾಲಿನ ಆಟದಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ಕೂಡ ಆರಂಭದಿಂದಲೇ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಹೀಗಾಗಿ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತ ದಾಖಲಾಗಲಿಲ್ಲ. ಜಾಸ್ ಬಟ್ಲರ್ ಅವರು 40 ರನ್ ಬಾರಿಸಿದರೂ ಇದರಲ್ಲಿ ಯಾವುದೇ ಜೋಶ್ ಕಾಣಲಿಲ್ಲ. ಅವರು ಈ ಮೊತ್ತ ಬಾರಿಸಲು 41 ಎಸೆತ ಎದುರಿಸಿದರು. ಜೈಸ್ವಾಲ್ ಕೂಡ ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಲಿಲ್ಲ. ಅವರು ಕೂಡ 35 ಎಸೆತದ ಮುಂದೆ 44 ರನ್ ಗಳಿಸಿದರು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ಬಿಗ್ ಹಿಟ್ಟರ್ಗಳಾದ ಸಂಜು ಸ್ಯಾಮ್ಸನ್(2), ಶಿಮ್ರಾನ್ ಹೆಟ್ಮೈರ್(2) ವಿಕೆಟ್ ಕೈಚೆಲ್ಲಿದರು. ಇಲ್ಲಿಂದ ಮೇಲೆ ಲಕ್ನೋ ಕೈ ಮೇಲಾಯಿತು. ಸಣ್ಣ ಮೊತ್ತವನ್ನು ಉಳಿಸಿಕೊಂಡು ರಾಜಸ್ಥಾನ್ ವಿರುದ್ಧ ರಾಜನಂತೆ ಮೆರೆದಾಡಿತು. ಲಕ್ನೋ ಪರ ನವೀನ್ ಉಲ್ ಹಕ್ ವಿಕೆಟ್ ಲೆಸ್ ಆದರೂ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟರು. ಮಾರ್ಕಸ್ ಸ್ಟೋಯಿನಿಸ್ 2 ಮತ್ತು ಆವೇಶ್ ಖಾನ್ ಈ ಪಂದ್ಯದಲ್ಲಿ ಆವೇಶಭರಿತ ಬೌಲಿಂಗ್ ದಾಳಿ ನಡೆಸಿ ಮೂರು ವಿಕೆಟ್ ಕಿತ್ತರು.
2 ಜೀವದಾನ ಪಡೆದ ರಾಹುಲ್
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಲಕ್ನೋ ತಂಡದ ಆರಂಭಿಕರಾದ ಕೆ.ಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ ಆರಂಭದ 3 ಓವರ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಇದೇ ವೇಳೆ ರಾಹುಲ್ ಅವರಿಗೆ 2 ಜೀವದಾನ ಲಭಿಸಿತು. ಒಂದು ಕ್ಯಾಚ್ 6 ರನ್ ಗಳಿಸಿದ್ದ ವೇಳೆ ಯಶಸ್ವಿ ಜೈಸ್ವಾಲ್ ಬಿಟ್ಟರೆ ಮತ್ತೊಂದು ಕ್ಯಾಚ್ ಜೇಸನ್ ಹೋಲ್ಡರ್ ಕೈ ಚೆಲ್ಲಿದರು. ಇದೇ ವೇಳೆ ಮೇಯರ್ಸ್ಗೂ ಒಂದು ಜೀವದಾನ ಸಿಕ್ಕಿತು. ರನೌಟ್ ಮಾಡುವ ಬರದಲ್ಲಿ ಚೆಂಡು ಕೈ ಸೇರುವ ಮುನ್ನವೇ ಅಶ್ವಿನ್ ಅವರು ವಿಕೆಟ್ಗೆ ಕೈ ತಾಗಿಸಿ ಮೇಯರ್ಸ್ ಅವರನ್ನು ರನೌಟ್ ಸಂಕಟದಿಂದ ಪಾರು ಮಾಡಿದರು. ಇದರ ಲಾಭವೆತ್ತಿದ ಉಭಯ ಆಟಗಾರರು ಬಳಿಕ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು.
ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ರಾಹುಲ್ಗೆ ಕ್ಯಾಚ್ ಬಿಟ್ಟು ಜೀವದಾನ ನೀಡಿದ ಹೋಲ್ಡರ್ ತಮ್ಮ ಓವರ್ನಲ್ಲಿ ಪೆವಿಲಿಯನ್ ದಾರಿ ತೋರಿಸಿದರು. ಈ ಮೂಲಕ ರಾಜಸ್ಥಾನ್ಗೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಜತೆಗೆ ತಮ್ಮ ತಪ್ಪಿಗೆ ಈ ವಿಕೆಟ್ ಪಡೆಯುವ ಮೂಲಕ ನ್ಯಾಯ ಒದಗಿಸಿದರು. ರಾಹುಲ್ 32 ಎಸೆತಗಳಿಂದ 39 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಮೊದಲ ವಿಕೆಟ್ಗೆ ರಾಹುಲ್ ಮತ್ತು ಮೇಯರ್ಸ್ 82 ರನ್ ಒಟ್ಟುಗೂಡಿಸಿದರು. ಈ ವಿಕೆಟ್ ಪತನದ ಬಳಿಕ ಬ್ಯಾಟಿಂಗ್ ಭಡ್ತಿ ಪಡೆದು ಆಡಲಿಳಿದ ಆಯುಷ್ ಬದೋನಿ ರಿವರ್ಸ್ ಸ್ವೀಪ್ ಮಾಡುವ ಬರದಲ್ಲಿ ಎಡವಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಅವರ ಗಳಿಕೆ ಕೇವಲ ಒಂದು ರನ್.
ಬ್ಯಾಟಿಂಗ್ ಮರೆತ ಹೂಡಾ
ಕಳೆದ ಆವೃತ್ತಿಯಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸುದ್ದಿಯಾಗಿದ್ದ ಹಾರ್ಡ್ ಹಿಟ್ಟರ್ ದೀಪಕ್ ಹೂಡಾ ಅವರು ಈ ಆವೃತ್ತಿಯಲ್ಲಿ ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದಾರೆ. ಆಡಿದ 6 ಪಂದ್ಯಗಳಲ್ಲಿಯೂ ಸಿಂಗಲ್ ಡಿಜಿಟ್ಗೆ ಔಟಾಗುವ ಮೂಲಕ ಘೋರ ವೈಫಲ್ಯ ಕಂಡರು. ಈ ಪಂದ್ಯದಲ್ಲಿ ಕ್ರೀಸ್ಗಿಳಿದೊಡನೆ ಒಂದು ಬೌಂಡರಿ ಬಾರಿಸಿದ್ದನ್ನು ಕಂಡಾಗ ದೊಡ್ಡ ಇನಿಂಗ್ಸ್ ಕಟ್ಟಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಮುಂದಿನ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಎಲ್ಲ ನಿರೀಕ್ಷೆಗಳನ್ನು ಹುಸಿಯಾಗಿಸಿದರು.
ಇದನ್ನೂ ಓದಿ IPL 2023: ವಿರಾಟ್ ಅಂಕಲ್, ವಮಿಕಾ ಜತೆ ಡೇಟಿಂಗ್ ಹೋಗಬಹುದಾ? ಪುಟ್ಟ ಹುಡುಗನ ಮೆಸೇಜ್‌ಗೆ ನೆಟ್ಟಿಗರ ಆಕ್ರೋಶ
ಮತ್ತೊಂದು ಬದಿಯಲ್ಲಿ ಸಿಡಿದು ನಿಂತಿದ್ದ ಕೈಲ್ ಮೇಯರ್ಸ್ ಕೂಡ ಅರ್ದಶತಕ ಬಾರಿಸಿ ಅಶ್ವಿನ್ ಅವರ ಸ್ಪಿನ್ ಮ್ಯಾಜಿಕ್ಗೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ತಂಡ 104ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೇಯರ್ಸ್ ಅವರು ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ನೆರವಿನಿಂದ 51 ರನ್ ಗಳಿಸಿದರು.
ಅಂತಿಮ ಮೂರು ಓವರ್ಗಳ ಆಟದಲ್ಲಿ ನಿಕೋಲಸ್ ಪೂರನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರು ಸಿಡಿದು ನಿಂತು ರಾಜಸ್ಥಾನ್ ಬೌಲರ್ಗಳಿಗೆ ಕಾಡಿದರು. ಇವರ ಈ ಹೋರಾಟದ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಪೂರನ್ 28 ರನ್ಗಳಿಸಿದರೆ, ಸ್ಟೋಯಿನಿಸ್ 21 ರನ್ ಬಾರಿಸಿದರು. ಟ್ರೆಂಟ್ ಬೌಲ್ಟ್ ಅವರು 4 ಓವರ್ ಎಸೆದು ಒಂದು ಮೇಡನ್ ಸಹಿತ ಕೇವಲ 16 ರನ್ ನೀಡಿ ಒಂದು ವಿಕೆಟ್ ಕಿತ್ತರು. ಸಂದೀಪ್ ಶರ್ಮ ಒಂದು ವಿಕೆಟ್ ಪಡೆದರೂ ಕೊಂಚ ದುಬಾರಿಯಾಗಿ ಕಂಡುಬಂದರು. ಅವರು 32 ರನ್ ಬಿಟ್ಟುಕೊಟ್ಟರು.