ಚೆನ್ನೈ: ಅತ್ಯಂತ ರೋಚಕವಾಗಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ನ 17ನೇ ಪಂದ್ಯದಲ್ಲಿ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಕೈ ಮೇಲಾಗಿದೆ. ಅಂತಿಮ ಎಸೆತದಲ್ಲಿ 5 ರನ್ ಬಾರಿಸುವ ಸವಾಲಿನಲ್ಲಿ ಧೋನಿ ಎಡವಿದ ಕಾರಣ ರಾಜಸ್ಥಾನ್ ತಂಡ 3 ರನ್ಗಳ ರೋಚಕ ಗೆಲುವು ದಾಖಲಿಸಿತು.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಚೆನ್ನೈಗೆ ಸಂದೀಪ್ ಶರ್ಮ ಅವರು ಋತುರಾಜ್ ಗಾಯಕ್ವಾಡ್ ವಿಕೆಟ್ ಕಿತ್ತು ಆಘಾತ ನೀಡಿದರು. ಆದರೆ ಮುಂಬೈ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದ ಅಜಿಂಕ್ಯ ರಹಾನೆ ಮತ್ತು ಡೆವೊನ್ ಕಾನ್ವೆ ಸೇರಿಕೊಂಡು ಉತ್ತಮ ಜತೆಯಾಟ ನಡೆಸಿ ತಂಡವನ್ನು ಪಾರು ಮಾಡಿದರು. ರಹಾನೆ 19 ಎಸೆತಗಳಲ್ಲಿ 3ಒ ರನ್ ಬಾರಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ರಹಾನೆ ಮತ್ತು ಕಾನ್ವೆ ದ್ವಿತೀಯ ವಿಕೆಟ್ಗೆ 68 ರನ್ ಜತೆಯಾಟ ನಡೆಸಿದರು.
ರಹಾನೆ ವಿಕೆಟ್ ಪತನದ ಬಳಿಕ ಕೇವಲ 25 ರನ್ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಶಿವಂ ದುಬೆ (8), ಮೊಯಿನ್ ಅಲಿ(10), ಅಂಬಾಟಿ ರಾಯುಡು(1) ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಮತ್ತೊಂದು ತುದಿಯಲ್ಲಿ ಬೇರುರಿ ನಿಂತಿದ್ದ ಕಾನ್ವೆ 37 ಎಸೆತದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದರು. ಆದರೆ ಅರ್ಧಶತಕ ಪೂರ್ತಿಗೊಂಡ ಮರು ಎಸೆತದಲ್ಲಿಯೇ ಕ್ಯಾಚ್ ನೀಡಿ ವಿಕೆಟ್ ಕೈ ಚೆಲ್ಲಿದರು. ಅವರ ಗಳಿಕೆ 50 ರನ್. ಇದರಲ್ಲಿ ಆರು ಬೌಂಡರಿ ಒಳಗೊಂಡಿತು.
ನಾಟಕೀಯ ಕುಸಿತ ಕಂಡ ಚೆನ್ನೈಗೆ ನಾಯಕ ಧೋನಿ ಮತ್ತು ಜಡೇಜಾ ಕಡೇಯ ಮೂರು ಓವರ್ಗಳಲ್ಲಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದು ಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಕ್ತಿ ಮೀರಿ ಬ್ಯಾಟಿಂಗ್ ನಡೆಸಿದ ಧೋನಿ ಮತ್ತು ಜಡೇಜಾ ರಾಜಸ್ಥಾನ್ ಬೌಲರ್ಗಳಿಗೆ ಬೆಂಡೆತ್ತಿದರು. ಅಂತಿಮ 12 ಎಸೆತಗಳಲ್ಲಿ 40 ರನ್ ಬಾರಿಸುವ ಸಾವಲನ್ನು ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಚೆನ್ನೈ ಮೀರಿ ನಿಲ್ಲುವ ಎಲ್ಲ ಸಾಧ್ಯತೆ ಇತ್ತು. ಸಂದೀಪ್ ಶರ್ಮ ಎಸೆದ ಕೊನೆಯ ಓವರ್ನಲ್ಲಿ ಧೋನಿ ಸತತ ಸಿಕ್ಸರ್ ಬಾರಿಸಿದಾಗ ಚೆನ್ನೈ ಪಾಳಯದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಸ್ಟ್ರೈಕ್ನಲ್ಲಿದ್ದರು. ಧೋನಿ ತಮ್ಮ ಎಂದಿನ ಶೈಲಿಯಂತೆ ಈ ಪಂದ್ಯವನ್ನು ಸಿಕ್ಸರ್ ಮೂಲಕ ಫಿನಿಶ್ ಮಾಡುತ್ತಾರೆ ಎಂದು ಎಲ್ಲರು ತುದಿಗಾಲಲ್ಲಿ ನಿಂತಿದ್ದರು. ಆದರೆ ಸಂದೀಪ್ ಶರ್ಮ ಸ್ಲೋ ಯಾರ್ಕರ್ ಎಸೆದು ರಾಜಸ್ಥಾನಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಧೋನಿ ಸಿಕ್ಸರ್ ಬಾರಿಸುವಲ್ಲಿ ವಿಫಲರಾದರು. ಜಡೇಜಾ 25 ರನ್ ಬಾರಿಸಿದರೆ ಧೋನಿ 32 ರನ್ ಬಾರಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ್ ಪರ ಅಶ್ವಿನ್ ಮತ್ತು ಚಹಲ್ ತಲಾ 2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ಪರ ಕಳೆದ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಬಡಬಡನೆ 2 ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಕೇವಲ 10 ರನ್ಗಳಿಸಿ ತುಷರ್ ದೇಶ್ಪಾಂಡೆಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಾಜಸ್ಥಾನ್ ಆರಂಭಿಕ ಆಘಾತ ಕಂಡಿತು. ಆದರೆ ಬಳಿಕ ಆಡಲು ಬಂದ ದೇವದತ್ತ ಪಡಿಕ್ಕಲ್ ಅವರು ತೀಕ್ಷಣ ಅವರ ಎಸೆತದಲ್ಲಿ ಒಂದು ಜೀವಾದಾನ ಪಡೆದರು. ಸ್ಲಿಪ್ನಲ್ಲಿದ್ದ ಮೊಯಿನ್ ಅಲಿ ಅವರು ಈ ಸುಲಭದ ಕ್ಯಾಚ್ ಕೈಚೆಲ್ಲಿದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇವರಿಗೆ ಬಟ್ಲರ್ ಕೂಡ ಉತ್ತಮ ಸಾಥ್ ನೀಡಿದರು.
ಸತತ ಬೌಂಡರಿ ಬಾರಿಸಿ ಉತ್ತಮ ರನ್ ಕಲೆಹಾಕುತ್ತಿದ್ದ ಪಡಿಕ್ಕಲ್ ಅವರು ರವೀಂದ್ರ ಜಡೇಜಾ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಎಡವಿ, ಡೆವೋನ್ ಕಾನ್ವೆಗೆ ಕ್ಯಾಚ್ ನೀಡಿದರು. 26 ಎಸೆತ ಎದುರಿಸಿದ ಅವರು 38 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ದಾಖಲಾಯಿತು. ಬಟ್ಲರ್ ಮತ್ತು ಪಡಿಕ್ಕಲ್ ಜೋಡಿ ದ್ವಿತೀಯ ವಿಕೆಟ್ಗೆ 77 ರನ್ಗಳ ಅಮೂಲ್ಯ ಜತೆಯಾಟ ನಡೆಸಿತು.
ರಾಜಸ್ಥಾನ್ ಪರ ಕೆಟ್ಟ ದಾಖಲೆ ಬರೆದ ಸಂಜು
ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿಯೂ ಶೂನ್ಯ ಸುತ್ತಿದರು. ಇದರೊಂದಿಗೆ ರಾಜಸ್ಥಾನ್ ಪರ ಅತ್ಯಧಿಕ ಸೊನ್ನೆ ಸುತ್ತಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದರು. ಸಂಜು ರಾಜಸ್ಥಾನ್ ಪರ 8 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಶೇನ್ ವಾರ್ನ್ 7 ಬಾರಿ ಆರ್ಆರ್ ಪರ ಡಕ್ ಔಟ್ ಆಗಿದ್ದರು. ಇವರನ್ನು ಹಿಂದಿಕ್ಕಿ ಸಂಜು ಇದೀಗ ಮೊದಲ ಸ್ಥಾನ ಪಡೆದಿದ್ದಾರೆ. ಸ್ಟುವರ್ಟ್ ಬಿನ್ನಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 7 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.
ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಡೇವಿಡ್ ವಾರ್ನರ್
ಅರ್ಧಶತಕ ಬಾರಿಸಿದ ಜಾಸ್ ಬಟ್ಲರ್
ಆರಂಭಿಕ ಆಟಗಾರ ಜಾಸ್ ಬಟ್ಲರ್ ಅವರ ಬ್ಯಾಟಿಂಗ್ ಪ್ರತಾಪ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭದಿಂದಲೇ ಚೆನ್ನೈ ಬೌಲರ್ಗಳಿಗೆ ಕಾಡಿದ ಅವರು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜತೆಗೆ ಐಪಿಎಲ್ನಲ್ಲಿ ಮೂರು ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದರು. ಇನ್ನೊಂದು ಬದಿಯಲ್ಲಿ ಆರ್ ಅಶ್ವಿನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೂ ಕೂಡ ಮೊಯಿನ್ ಅಲಿ ಕ್ಯಾಚ್ ಬಿಟ್ಟು ಜಿವದಾನ ನೀಡಿದರು. ಇದರ ಪರಿಣಾಮ ಅಶ್ವಿನ್ 22 ಎಸೆತಗಳಿಂದ 30 ರನ್ ಚಚ್ಚಿದರು. ಇದರಲ್ಲಿ 2 ಸಿಕ್ಸರ್ ಒಳಗೊಂಡಿತು. ಇದು ಅವರಿಗೆ ತವರಿನ ಪಂದ್ಯವಾಗಿತ್ತು. ಅಶ್ವಿನ್ ವಿಕೆಟ್ ಪತನದ ಬೆನ್ನಲ್ಲೇ ಜಾಸ್ ಬಟ್ಲರ್ ಕೂಡ ಆಟ ಮುಗಿಸಿದರು. ಎರಡು ಕ್ಯಾಚ್ ಕೈಚೆಲ್ಲಿದ ಮೊಯಿನ್ ಅಲಿ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬಟ್ಲರ್ 36 ಎಸೆತ ಎದುರಿಸಿ 52 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಯಲ್ಪಟ್ಟಿತು.
ಅಂತಿಮ ಹಂತದಲ್ಲಿ ಸಿಡಿದು ನಿಂತ ವಿಂಡೀಸ್ನ ಎಡಗೈ ಆಟಗಾರ ಶಿಮ್ರಾನ್ ಹೆಟ್ಮೈರ್ ಅಜೇಯ 30 ರನ್ ಬಾರಿಸಿದರು. ಇವರ ಈ ಬಿರುಸಿನ ಬ್ಯಾಟಿಂಗ್ ನರೆವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಚೆನ್ನೈ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ನಾಲ್ಕು ಓವರ್ ಎಸೆದು 21 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು. ಉಳಿದಂತೆ ಆಕಾಶ್ ಸಿಂಗ್ ಮತ್ತು ತುಷಾರ್ ದೇಶ್ಪಾಂಡೆ ತಲಾ 2 ವಿಕೆಟ್ ಪಡೆದರು.
ಧೋನಿಗೆ ಸನ್ಮಾನ
ಮಹೇಂದ್ರ ಸಿಂಗ್ ಧೋನಿಗೆ ಇದು ಚೆನ್ನೈ ಪರ ನಾಯಕನಾಗಿ 200ನೇ ಐತಿಹಾಸಿಕ ಪಂದ್ಯವಾಗಿದೆ. ಈ ಮೂಲಕ ತಂಡವೊಂದರ ಪರ ಅತ್ಯಧಿಕ ನಾಯಕತ್ವ ವಹಿಸಿದ ಏಕೈಕ ನಾಯಕ ಎಂಬ ಹಿರಿಮೆಗೆ ಧೋನಿ ಪಾತ್ರರಾದರು. ಸ್ಮರಣೀಯ ಪಂದ್ಯವನ್ನಾಡಲು ಮೈದಾನಕ್ಕೆ ಇಳಿದ ಧೋನಿಗೆ ತಂಡದ ಮಾಲಿಕ ಎನ್. ಶ್ರೀನಿವಾಸನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 175 (ಜಾಸ್ ಬಟ್ಲರ್ 52, ದೆವದತ್ತ ಪಡಿಕ್ಕಲ್ 38, ಆರ್. ಅಶ್ವಿನ್ 30, ಶಿಮ್ರಾನ್ ಹೆಟ್ಮೈರ್ ಅಜೇಯ 30, ರವೀಂದ್ರ ಜಡೇಜಾ 21ಕ್ಕೆ 2, ತುಷಾರ್ ದೇಶ್ಪಾಂಡೆ 37ಕ್ಕೆ 2, ಆಕಾಶ್ ಸಿಂಗ್ 40ಕ್ಕೆ 2)
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 6 ವಿಕೆಟ್ಗೆ 172 (ಡೆವೋನ್ ಕಾನ್ವೆ 50, ರವೀಂದ್ರ ಜಡೇಜಾ ಅಜೇಯ 25, ಎಂ.ಎಸ್. ಧೋನಿ ಅಜೇಯ 32, ಅಜಿಂಕ್ಯ ರಹಾನೆ 31, ಯಜುವೇಂದ್ರ ಚಹಲ್ 27ಕ್ಕೆ 2, ಆರ್. ಅಶ್ವಿನ್ 25ಕ್ಕೆ 2)