ಅಹಮದಾಬಾದ್: ಸೋಮವಾರ ರಾತ್ರಿ ನಡೆದ ಅತ್ಯಂತ ರೋಚಕ ಐಪಿಎಲ್ ಫೈನಲ್ನಲ್ಲಿ ರವೀಂದ್ರ ಜಡೇಜಾ ಅವರು ಅಂತಿಮ ಎರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟದ್ದು, ಚೆನ್ನೈ ತಂಡ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೆಲ್ಲ ಮುಗಿದು ಹೋದ ಅಧ್ಯಾಯ. ಆದರೆ ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಮಿಲಿಯನ್ ಡಾಲರ್ ಪ್ರಶ್ನೆ ಮತ್ತು ಅನುಮಾನಕ್ಕೆ ತೆರೆ ಎಳೆದಿದೆ. ಹಾಗಾದರೆ ಯಾವುದು ಈ ಮಿಲಿಯನ್ ಡಾಲರ್ ಪ್ರಶ್ನೆ? ಇದಕ್ಕೆ ಉತ್ತರ ನೀಡಿದ ಆ ಫೋಟೊ,ವಿಡಿಯೊ ಯಾವುದು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಹೌದು, ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಭಾರಿ ಸುದ್ದಿ ಮಾಡಿದ್ದ ಜಡೇಜಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ನಾಯಕ ಎಂ.ಎಸ್ ಧೋನಿ ಮಧ್ಯೆ ಮುನಿಸು ಇದೆ. ಉಭಯ ಆಟಗಾರರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಟಾಕ್ ಕೇಳಿ ಬರುತ್ತಲೇ ಇತ್ತು. ಇದಕ್ಕೆ ಪೂರಕ ಎಂಬತ್ತೆ ಕಳೆದ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಅವರು ಜಡೇಜಾ ಬಳಿ ಬಂದು ಏನೋ ಹೇಳಿದ್ದರು. ಈ ವೇಳೆ ಜಡೇಜಾ ಅವರ ಮುಖದಲ್ಲಿ ಕೊಂಚ ಕೋಪದ ಲಕ್ಷಣ ಕಂಡು ಬಂದಿತ್ತು. ಪಂದ್ಯ ಮುಕ್ತಾಯಗೊಂಡ ಬಳಿಕವೂ ಧೋನಿ ಅವರು ಜಡ್ಡು ಬಳಿ ಮಾತನಾಡಿದರೂ ಅವರ ಮುಖ ಸಪ್ಪೆಯಾಗಿತ್ತು.
ಇದಾದ ಬಳಿಕ ಜಡೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ “ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಅದು ಕೊಂಚ ತಡವಾಗಬಹುದು. ಆದರೆ ಖಂಡಿತವಾಗಿಯೂ ಬರುತ್ತದೆ.” ಎಂದು “ಡೆಫಿನೇಟ್ಲಿ” (Definitely) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ಈ ಪೋಸ್ಟ್ ಬಳಿಕ ಅನುಮಾನಗಳು ಮತ್ತಷ್ಟು ಬಲಗೊಂಡಿತು. ಮುಂದಿನ ಆವೃತ್ತಿಯಲ್ಲಿ ಜಡೇಜಾ ಚೆನ್ನೈ ತಂಡವನ್ನು ತೊರೆಯಲಿದ್ದಾರೆ ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಆದರೆ ಫೈನಲ್ ಪಂದ್ಯದಲ್ಲಿ ನಡೆದ ಒಂದು ಘಟನೆ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಿದೆ. ತಂಡಕ್ಕೆ ಸ್ಮರಣೀಯ ಗೆಲುವು ದಾಖಲಿಸಿದ ಬಳಿಕ ಧೋನಿ ಅವರು ಜಡೇಜಾರನ್ನು ತಮ್ಮ ಹೆಗಲ ಮೇಲೆ ಎತ್ತಿ ಸಂಭ್ರಮಿಸಿದರು. ಇದೇ ವೇಳೆ ಅವರು ಕಣ್ಣೀರು ಕೂಡ ಸುರಿಸಿದರು. ಇದನ್ನು ಕಂಡ ಕ್ರಿಕೆಟ್ ಜಗತ್ತು ಇದೊಂದು ಐಕಾನಿಕ್ ಕ್ಷಣವಾಗಿದೆ ಎಂದು ಹೇಳಲಾರಂಭಿಸಿದ್ದಾರೆ. ಅಂದು 2011ರಲ್ಲಿ ಭಾರತ ಏಕದಿನ ವಿಶ್ವ ಕಪ್ ಗೆದ್ದ ಬಳಿಕ ಸಚಿನ್ ಅವರನ್ನು ಟೀಮ್ ಇಂಡಿಯಾದ ಆಟಗಾರರು ಹೆಗಲ ಮೇಲೆ ಹೊತ್ತು ಸಾಗುವ ಮೂಲಕ ತಮ್ಮ ಗೆಲುವನ್ನು ಸಂಭ್ರಮಿಸಿದ್ದರು. ಇಂತಹದ್ದೇ ಘಟನೆ 16ನೇ ಐಪಿಎಲ್ ಫೈನಲ್ನಲ್ಲಿಯೂ ಮರುಕಳಿಸಿತು. ತಂಡಕ್ಕೆ ಗೆಲುವು ತಂದು ಕೊಟ್ಟ ಜಡೇಜಾ ಅವರನ್ನು ನಾಯಕ ಧೋನಿ ಬಿಗಿದಪ್ಪಿಕೊಂಡು ಅವರ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಈ ಮೂಲಕ ಉಭಯ ಆಟಗಾರರ ಮಧ್ಯೆ ಎಲ್ಲವೂ ಸರಿಯಿದೆ ಎಂಬ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ.
Happy Tears 🥹#CHAMPION5 #WhistlePodu #Yellove 🦁pic.twitter.com/jf05fszEDA
— Chennai Super Kings (@ChennaiIPL) May 30, 2023
ಇದನ್ನೂ ಓದಿ IPL 2023 : ಐಪಿಎಲ್ 2023ನೇ ಆವೃತ್ತಿಯ ಯಾವ ಪ್ರಶಸ್ತಿ ಯಾರಿಗೆ? ಗಿಲ್‌ಗೆ ಯಾವ ಕ್ಯಾಪ್?
ಪಂದ್ಯದ ಬಳಿಕ ಮಾತನಾಡಿದ ಜಡೇಜಾ ಕೂಡ ಧೋನಿ ಅವರನ್ನು ಹಾಡಿ ಹೊಗಳಿದ್ದಾರೆ. ಇದು ಈ ಗೆಲುವು ಧೋನಿಗೆ ಅರ್ಪಿಸುತ್ತೇನೆ ಎಂದು ಹೇಳುವ ಮೂಲಕ ಧೋನಿ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.