ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಘಾತಕ ಬೌಲಿಂಗ್ ದಾಳಿಯ ಮಧ್ಯೆಯೂ ಏಕಾಂಗಿಯಾಗಿ ಹೋರಾಟ ನಡೆಸಿದ ತಿಲಕ್ ವರ್ಮ(ಅಜೇಯ 84) ಮುಂಬೈ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಅರ್ಧಶತಕದ ಬ್ಯಾಟಿಂಗ್ ಸಾಹಸದಿಂದಾಗಿ ಮುಂಬೈ ಇಂಡಿಯನ್ಸ್(Mumbai Indians) ತಂಡ 171 ರನ್ ಗಳಿಸಿದೆ. ಫಾಪ್ ಡು ಪ್ಲೆಸಿಸ್ ಪಡೆ ಗೆಲುವಿಗೆ 172 ರನ್ ಬಾರಿಸಬೇಕಿದೆ. ಆರ್ಸಿಬಿ ಪರ ಕರಣ್ ಶರ್ಮ 2 ವಿಕೆಟ್ ಕಿತ್ತು ಮಿಂಚಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಕೊರೊನಾದ ಮೂರು ವರ್ಷಗಳ ಬಳಿಕ ತವರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡಿ ಗಮನ ಸೆಳೆದಿತು.
ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಅವರು ಇಶಾನ್ ಕಿಶನ್ ವಿಕೆಟ್ ಕಿತ್ತು ಆರ್ಸಿಬಿಗೆ ಮೊದಲ ಮುನ್ನಡೆ ತಂದುಕೊಟ್ಟರು. ಮುಂದಿನ ಓವರ್ನಲ್ಲಿ ರೇಸ್ ಟಾಪ್ಲಿ ಕ್ಯಾಮರೂನ್ ಗ್ರೀನ್ ವಿಕೆಟ್ ಉರುಳಿಸಿದರು. ಗ್ರೀನ್ 5 ರನ್ ಗಳಿಸಿದರೆ ಇಶಾನ್ ಕಿಶನ್ 11 ರನ್ ಬಾರಿಸಿದರು. ಸಿರಾಜ್ ಓವರ್ನಲ್ಲಿ ಜೀವದಾನ ಪಡೆದ ರೋಹಿತ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಕಾಶ್ ದೀಪ್ ಅವರ ಮುಂದಿನ ಓವರ್ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಕ್ಯಾಚ್ ನೀಡಿ ಒಂದು ರನ್ಗೆ ಸೀಮಿತರಾದರು. ತಂಡದ ಮೊತ್ತ 50 ಆಗುವ ಮುನ್ನವೇ ನಾಲ್ಕು ವಿಕೆಟ್ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ಕಂಡಿತು. ಟಿ20 ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಈ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ರನ್ ಗಳಿಸಲು ಪರದಾಡಿದ ಅವರು 16 ಎಸೆತ ಎದುರಿಸಿ 15 ರನ್ ಬಾರಿಸಲಷ್ಟೇ ಶಕ್ತರಾದರು.
ಉತ್ತಮ ಬೌಲಿಂಗ್ ನಡೆಸುತ್ತಿದ್ದ ಟಾಪ್ಲಿ ಅವರು ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದರು. ಸದ್ಯ ಅವರ ಗಾಯವನ್ನು ಗಮನಿಸುವಾಗ ಅವರು ಮುಂದಿನ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಮೊದಲೇ ಗಾಯದ ಚಿಂತೆಯಲ್ಲಿದ್ದ ಆರ್ಸಿಬಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಾಪ್ಲಿ 2 ಓವರ್ ನಡೆಸಿ 1 ವಿಕೆಟ್ ಕಿತ್ತು ಪಂದ್ಯದಿಂದ ಹೊರಗುಳಿದರು.
ಇದನ್ನೂ ಓದಿ IPL 2023: ರಾಯಲ್ಸ್ ವಿರುದ್ಧ ಶೈನ್ ಆಗದ ಸನ್ರೈಸರ್ಸ್; 72 ರನ್ ಸೋಲು
ಅಜೇಯ ಅರ್ಧಶತಕ ಬಾರಿಸಿ ಮಿಂಚಿದ ತಿಲಕ್ ವರ್ಮ
ನಂಬುಗೆಯ ಬ್ಯಾಟರ್ಗಳೆಲ್ಲ ಔಟಾದಾಗ ಟೊಂಕ ಕಟ್ಟಿ ನಿಂತ ತಿಲಕ್ ವರ್ಮ ಮುಂಬೈ ತಂಡಕ್ಕೆ ಆಸರೆಯಾದರು. ಇವರಿಗೆ ಯುವ ಆಟಗಾರ ನಿಹಾಲ್ ವಧೀರಾ ಕೆಳ ಕ್ರಮಾಂಕದಲ್ಲಿ ಉತ್ತಮ ಸಾಥ್ ನೀಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ವಧೀರಾ ಅವರು ಕರಣ್ ಶರ್ಮ ಅವರಿಗೆ ಸತತ ಸಿಕ್ಸರ್ ಸಿಡಿಸಿ ಮಿಂಚಿದರು. ಇದರಲ್ಲೊಂದು ಸಿಕ್ಸ್ ಸ್ಟೇಡಿಯಂನಿಂದ ಹೊರಕ್ಕೆ ಚಿಮ್ಮಿತು. ಈ ವೇಳೆ ಅವರು ಅಪಾಯಕಾರಿಯಾಗುವ ಸೂಚನೆಯೊಂದು ಲಭಿಸಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಕರಣ್ ಶರ್ಮ ಮುಂದಿನ ಎಸೆತದಲ್ಲಿ ವಿಕೆಟ್ ಉಡಾಯಿಸುವಲ್ಲಿ ಯಶಸ್ವಿಯಾದರು. ವಧೀರಾ 21 ರನ್ ಗಳಿಸಿದರು.
ಇದನ್ನೂ ಓದಿ IPL 2023: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕೆ.ಎಲ್. ರಾಹುಲ್ ಬಳಗ
ವಧೀರಾ ವಿಕೆಟ್ ಪತನದ ಬಳಿಕ ಆಡಲಿಳಿದ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾದ ಆಸ್ಟ್ರೇಲಿಯಾ ತಂಡದ ಟಿಮ್ ಡೇವಿಡ್ಗೆ ಕರಣ್ ಶರ್ಮ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡಲಿಲ್ಲ. 4 ರನ್ ಗಳಿಸಿದ್ದ ವೇಳೆ ವಿಕೆಟ್ ಪಡೆದು ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ ತಿಲಕ್ ವರ್ಮ ಮತ್ತೊಂದು ಬದಿಯಲ್ಲಿ ಆರ್ಸಿಬಿ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ತಂಡದ ಪಾಲಿಗೆ ಆಪದ್ಬಾಂಧವರಾದರು. ಇವರ ಈ ಏಕಾಂಗಿ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿತು. 46 ಎಸೆತ ಎದುರಿಸಿದ ಅವರು ಬರೋಬ್ಬರಿ ನಾಲ್ಕು ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ ಅಜೇಯ 84 ರನ್ ಬಾರಿಸಿದರು. ಸ್ಟಾರ್ ಬ್ಯಾಟರ್ಗಳನ್ನು ಆರಂಭದಲ್ಲೇ ಪೆವಿಲಿಯನ್ಗೆ ಕಳುಹಿಸಿದ್ದ ಆರ್ಸಿಬಿಗೆ ತಿಲಕ್ ವರ್ಮಾ ವಿಕೆಟ್ ಕೀಳಲು ಸಾಧ್ಯವಾಗಲ್ಲೇ ಇಲ್ಲ.
ಸಲೀಂ ದುರಾನಿಗೆ ಗೌರವ
ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನದ ಹಿನ್ನೆಲೆ ಆರ್ಸಿಬಿ ಮತ್ತು ಮುಂಬೈ ಆಟಗಾರರು ದಿವಂಗತ ಭಾರತೀಯ ಕ್ರಿಕೆಟಿಗನಿಗೆ ಗೌರವ ಸೂಚಕವಾಗಿ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 (ತಿಲಕ್ ವರ್ಮ ಅಜೇಯ 84, ನಿಹಾಲ್ ವಧೀರಾ 21, ಕರಣ್ ಶರ್ಮ 32ಕ್ಕೆ 2).