Site icon Vistara News

IPL 2023: ವಿರಾಟ್​ ಕೊಹ್ಲಿ ಶತಕ; ಬೃಹತ್​ ಮೊತ್ತ ಪೇರಿಸಿದ ಆರ್​ಸಿಬಿ

M.Chinnaswamy Stadium, Bengaluru

#image_title

ಬೆಂಗಳೂರು: ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲೇಲೇ ಬೇಕಾದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(101*) ಆಪದ್ಬಾಂಧವನಂತೆ ಶತಕ ಸಿಡಿಸಿದ ಪರಿಣಾಮ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ವಿರುದ್ಧ ಆರ್​ಸಿಬಿ ಬೃಹತ್​ ಮೊತ್ತ ದಾಖಲಿಸಿದೆ. ಗುಜರಾತ್​ ಗೆಲುವಿಗೆ 198 ರನ್​ ಬಾರಿಸಬೇಕಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿದೆ.

ಕೊಹ್ಲಿ ಬೊಂಬಾಟ್​ ಆಟ

ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್​ ನಡೆಸಿದರು. ನಾಯಕ ಫಾಫ್​ ಡು ಪ್ಲೆಸಿಸ್​ ಜತೆ ಇನಿಂಗ್ಸ್​ ಆರಂಭಿಸಿದ ಕೊಹ್ಲಿ ಮೊಹಮ್ಮದ್​ ಶಮಿ ಅವರ ಮೊದಲ ಓವರ್​ನಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದರು. ಬಳಿಕ ಸಿಡಿಯಲಾರಂಭಿಸಿದರು. ಇವರಿಗೆ ಡು ಪ್ಲೆಸಿಸ್​ ಕೂಡ ಉತ್ತಮ ಸಾಥ್​ ನೀಡಿದರು. ಉಭಯ ಆಟಗಾರರ ಸ್ಫೋಟಕ ಬ್ಯಾಟಿಂಗ್​ನಿಂದ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 67 ರನ್​ ಒಟ್ಟುಗೂಡಿತು.

ಉತ್ತಮವಾಗಿ ಆಡುತ್ತಿದ್ದ ಡು ಪ್ಲೆಸಿಸ್​ ಅವರನ್ನು ನೂರ್​ ಅಹ್ಮದ್​ ಔಟ್​ ಮಾಡಿದರು. ಡು ಪ್ಲೆಸಿಸ್​ 5 ಬೌಂಡರಿ ನೆರವಿನಿಂದ 28 ರನ್​ ಗಳಿಸಿದರು. ಕೊಹ್ಲಿ ಜತೆಗೂಡಿ ಮೊದಲ ವಿಕೆಟ್​ಗೆ 69 ರನ್​ ಜತೆಯಾಟ ನಡೆಸಿದರು. ಪವರ್​ ಪ್ಲೇ ಮುಗಿದ ಮುಂದಿನ ಎಸೆತದಲ್ಲಿಯೇ ಅವರು ವಿಕೆಟ್​ ಕೈಲಿಲ್ಲಿದರು. ನಂತರ ಆಡಲು ಬಂದ ಡೇಂಜರಸ್​ ಬ್ಯಾಟರ್​ ಮ್ಯಾಕ್ಸ್​ವೆಲ್​ ಬಡಬಡನೆ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಅವರಿಗೆ ರಶೀದ್​ ಖಾನ್​ ಅನುವು ಮಾಡಿಕೊಡಲಿಲ್ಲ. 11 ರನ್​ ಗಳಿಸಿದ್ದ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು.

ಶೂನ್ಯ ಸುತ್ತಿ ದಾಖಲೆ ಬರೆದ ಕಾರ್ತಿಕ್​

ಪ್ರತಿ ಪಂದ್ಯದಲ್ಲಿಯೂ ಲೆಕ್ಕ ಭರ್ತಿಗೆ ಆಡುತ್ತಿರುವಂತೆ ಬ್ಯಾಟಿಂಗ್​ ನಡೆಸುವ ಮಹಿಪಾಲ್​ ಲೋಮ್ರೋರ್ ಮತ್ತು ದಿನೇಶ್​ ಕಾರ್ತಿಕ್​ ಅವರು​ ಈ ಪಂದ್ಯದಲ್ಲಿಯೂ ಅದೇ ರಾಗ ಅದೇ ಹಾಡು ಎಂಬಂತೆ ಅಗ್ಗಕ್ಕೆ ಔಟಾದರು. ಅದರಲ್ಲೂ ದಿನೇಶ್​ ಕಾರ್ತಿಕ್​ ಗೋಲ್ಡನ್​ ಡಕ್​ ಸಂಕಟ್ಟಕ್ಕೆ ಸಿಲುಕಿದರು. ಇದೇ ವೇಳೆ ಕಾರ್ತಿಕ್​ ಐಪಿಎಲ್​ನಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದರು. 17 ಬಾರಿ ಶೂನ್ಯ ಸಂಪಾದಿಸಿ ಅಗ್ರಸ್ಥಾನ ಪಡೆದರು. ದ್ವಿತೀಯ ಸ್ಥಾನದಲ್ಲಿ ರೋಹಿತ್​ ಶರ್ಮ ಕಾಣಿಸಿಕೊಂಡಿದ್ದಾರೆ ಅವರು 16 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಇದನ್ನೂ ಓದಿ IPL 2023: ಮುಂಬೈ ಗೆದ್ದರೂ ಪ್ಲೇ ಆಫ್​ ಭವಿಷ್ಯ ಗುಜರಾತ್​ ಕೈಯಲ್ಲಿ

ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್​ ಕೊಹ್ಲಿ

ತಂಡದ ಸಂಕಷ್ಟದ ಸಂದರ್ಭದಲ್ಲಿಯೂ ಎದೆಯೊಡ್ಡಿ ನಿಂತ ವಿರಾಟ್​ ಕೊಹ್ಲಿ ಶತಕ ಬಾರಿಸಿ ಮಿಂಚಿದರು. ಈ ಶತಕದೊಂದಿಗೆ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಕ್ರಿಸ್​ ಗೇಲ್​ ಅವರ ಜತೆ ಜಂಟಿ ದಾಖಲೆ ಬರೆದಿದ್ದರು. ಇದೀಗ 7 ಶತಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. 60 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ ಅಂತಿಮವಾಗಿ 13 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 101 ರನ್​ ಗಳಿಸಿದರು. ಬ್ರೇಸ್​ವೆಲ್​ ಕೆಲ ಕಾಲ ಕ್ರೀಸ್​ ಆಕ್ರಮಿಸಿಕೊಂಡು ಕೊಹ್ಲಿಗೆ ಉತ್ತಮ ಸಾಥ್​ ನೀಡಿದರು. ಆದರೆ 26ರನ್​ಗೆ ಆಟ ಮುಗಿಸಿದರು. ಈ ವಿಕೆಟ್​ ಶಮಿ ಪಾಲಾಯಿತು.

Exit mobile version