ಬೆಂಗಳೂರು: ಉತ್ತಮ ಆರಂಭ ಪಡೆದ ಬಳಿಕ ನಾಟಕೀಯ ಕುಸಿತ ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಶನಿವಾರದ ಐಪಿಎಲ್ನ(IPL 2023) ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 174 ರನ್ ಗಳಿಸಿದೆ. ಡೆಲ್ಲಿ ಗೆಲುವಿಗೆ 175 ರನ್ ಪೇರಿಸಬೇಕಿದೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ 50, ಮಹಿಪಾಲ್ ಲೊಮ್ರೊರ್ 26 ರನ್ ಬಾರಿಸಿ ಮಿಂಚಿದರು. ಡೆಲ್ಲಿ ಪರ ಮಿಚೆಲ್ ಮಾರ್ಷ್ ಮತ್ತು ಕುಲ್ದೀಪ್ ಯಾದವ್ 2 ವಿಕೆಟ್ ಕಿತ್ತರು.
ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಾ ಸಾಗಿದರು. ಓವರ್ಗೆ ಸರಾಸರಿ 10 ರನ್ಗಳು ದಾಖಲಾಗುತ್ತಿತ್ತು. ಉಭಯ ಆಟಗಾರರ ಬ್ಯಾಟಿಂಗ್ಗೆ ಕೆಲ ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರು ತಡೆಯೊಡ್ಡಿದರು. ಡೇಂಜರಸ್ ಡು ಪ್ಲೆಸಿಸ್(22) ವಿಕೆಟ್ ಕಿತ್ತು ಡೆಲ್ಲಿಗೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಕೊಹ್ಲಿ ಮತ್ತು ಡು ಪ್ಲೆಸಿಸ್ ಮೊದಲ ವಿಕೆಟ್ಗೆ 42 ರನ್ ಒಟ್ಟುಗೂಡಿಸಿತು.
ಡು ಪ್ಲೆಸಿಸ್ ವಿಕೆಟ್ ಬಿದ್ದ ಮರು ಎಸೆತದಲ್ಲೇ ಎಡಗೈ ಬ್ಯಾಟ್ಸ್‌ಮನ್ ಮಹಿಪಾಲ್ ಲೊಮ್ರೊರ್ ಅವರ ವಿಕೆಟ್ ಕೂಡ ಪತನಗೊಳ್ಳುತ್ತಿತ್ತು. ಆದರೆ ಮನೀಷ್ ಪಾಂಡೆ ಈ ಸುಲಭದ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಈ ಸುವರ್ಣ ಅವಕಾಶವನ್ನು ಪಡೆದ ಅವರು 18 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಜೋಶ್ನಿಂದಲೇ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರೈಸಿದರು. ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಗಮನಿಸಿದಾಗ ದೊಡ್ಡ ಇನಿಂಗ್ಸ್ ಹೊರಹೊಮ್ಮುವ ಸೂಚನೆಯೊಂದು ದೊರಕಿತ್ತು. ಆದರೆ ಲಲೀತ್ ಯಾದವ್ ಅವರ ಸ್ಲೋ ಫುಲ್ಟಾಸ್ ಎಸೆತವನ್ನು ಸಿಕ್ಸರ್ಗೆ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್ನಲ್ಲಿದ್ದ ಯಶ್ ಧುಲ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. 6 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿದರು.
ಕೊಹ್ಲಿ ವಿಕೆಟ್ ಪತನದ ಬಳಿಕ ಆಡಲಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಸಿಕ್ಸರ್ ಮೂಲಕವೇ ಖಾತೆ ತೆರೆದರು. ಬಡಬಡನೆ 3 ಸಿಕ್ಸರ್ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಕುಲ್ದೀಪ್ ಯಾದವ್ ಅವರ ಓವರ್ನಲ್ಲಿ ಕ್ಯಾಚ್ ನೀಡಿ ಔಟಾದರು. 14 ಎಸೆತಗಳಿಂದ 24 ರನ್ ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಡೆಲ್ಲಿ ಬೌಲರ್ಗಳು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಆರ್ಸಿಬಿ ಇಲ್ಲಿಂದ ಪ್ರತಿ ಒಂದು ರನ್ಗೂ ಪರದಾಟಿತು. ಕಳೆದ ಆವೃತ್ತಿಯ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಅವರ ಘೋರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಕಂಡು ಬಂತು. ಕುಲ್ದೀಪ್ ಯಾದವ್ ಅವರ ಓವರ್ನಲ್ಲಿ ತಾನೆದುರಿಸಿದ ಮೊದಲ ಬೌಲ್ನಲ್ಲಿಯೇ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಇದನ್ನೂ ಓದಿ IPL 2023 : ರಿಂಕು ಸಿಂಗ್ ಹೊಗಳಿದ ವಿರಾಟ್ ಕೊಹ್ಲಿ, ಏನಂದರು ಅವರು?
ಬ್ಯಾಟಿಂಗ್ ಭಡ್ತಿ ಪಡೆದು ಬಂದ ಹರ್ಷಲ್ ಪಟೇಲ್ ಕೇವಲ ಒಂದು ಸಿಕ್ಸರ್ಗೆ ಸೀಮಿತವಾದರು. ಇದಕ್ಕೆ ಅವರು ನಾಲ್ಕು ಎಸೆತ ಎದುರಿಸಿದರು. ಡೆಲ್ಲಿ ಪರ ಕುಲ್ದೀಪ್ ಯಾದವ್ ಅವರು ನಾಲ್ಕು ಓವರ್ ಎಸೆದು ಒಂದು ಮೇಡನ್ ಸಹಿತ 23 ರನ್ಗೆ 2 ವಿಕೆಟ್ ಉರುಳಿಸಿದರು. ಅಂತಿಮ ಹಂತದಲ್ಲಿ ಶಾಬಾಜ್ ಅಹ್ಮದ್(20*) ಮತ್ತು ಅನುಜ್ ರಾವುತ್(15*) ಅವರು ಸಣ್ಣ ಮಟ್ಟದ ಹೋರಾಟ ನಡೆಸಿದ ಕಾರಣ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.